ದಾವಣಗೆರೆ, ಜು.9- ಶಿಷ್ಯ ವೇತನಕ್ಕಾಗಿ ಆಗ್ರಹಿಸಿ, ನಗರದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ಸ್ನಾತಕೋ ತ್ತರ ಹಾಗೂ ಗೃಹ ವೈದ್ಯ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರ ತೀವ್ರಗೊಳಿ ಸಿದ್ದು, ದಿನೇ ದಿನೇ ವಿಭಿನ್ನವಾಗಿ ಹೋರಾಟ ನಡೆಸುತ್ತಿದ್ದಾರೆ. ಅದರಂತೆ ಇಂದೂ ಸಹ ತಟ್ಟೆ ಭಾರಿಸಿ ಸದ್ದು ಮಾಡುವ ಮುಖೇನ ತಮ್ಮ ಹೋರಾಟದ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಿದರು.
ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ನಡೆಸುತ್ತಿರುವ ಮುಷ್ಕರ ಇಂದಿಗೆ 11ನೇ ದಿನಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ಗಂಟೆ 11 ನಿಮಿಷಕ್ಕೆ ವಿದ್ಯಾರ್ಥಿಗಳು ತಟ್ಟೆ ಮತ್ತು ಚಪ್ಪಾಳೆ ಭಾರಿಸಿ ವಿನೂತನವಾಗಿ ಸರ್ಕಾರದ ಗಮನ ಸೆಳೆದರು.
ಡಾ. ರಾಹುಲ್ ಮಾತನಾಡಿ, ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನಮಗೆ ಸರ್ಕಾರ ಚಪ್ಪಾಳೆ ತಟ್ಟಿ ಅಭಿನಂದಿಸಿತ್ತು. 11 ದಿನಗಳಾದರೂ ನಮ್ಮ ಕೂಗಿಗೆ ಸ್ಪಂದಿಸದ ಕಾರಣ, ಇದೀಗ ಸರ್ಕಾರದ ಮಾದರಿಯಲ್ಲಿಯೇ 11 ಗಂಟೆಗೆ 11 ನಿಮಿಷಗಳ ಕಾಲ ತಟ್ಟೆ ಬಾರಿಸುವ ಮೂಲಕ ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರ ನಮ್ಮಗಳ ಬೇಡಿಕೆಯನ್ನು ಇನ್ನೆರಡು ದಿನಗಳಲ್ಲಿ ಈಡೇರಿಸದಿದ್ದಲ್ಲಿ ಕೋವಿಡ್ ಸೇವೆ ಹೊರತು ಪಡಿಸಿ, ಉಳಿದ ಸೇವೆಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲಾಗುವುದು ಎಂದು ವಿದ್ಯಾರ್ಥಿ ಡಾ. ರಾಹುಲ್, ಡಾ. ಹರೀಶ್ ಎಚ್ಚರಿಕೆ ನೀಡಿದರು.
ಬೈಕ್ ರಾಲಿ: ಶಿಷ್ಯ ವೇತನಕ್ಕಾಗಿ ತಟ್ಟೆ ಭಾರಿಸಿ ಸದ್ದು ಮಾಡಿ ತಮ್ಮ ಹೋರಾಟದ ಕೂಗನ್ನು ಮುಟ್ಟಿಸಿದ ವೈದ್ಯ ವಿದ್ಯಾರ್ಥಿಗಳು ನಂತರ ಬೈಕ್ ರಾಲಿ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.