ಜಿಲ್ಲೆಯಲ್ಲಿ ಒಂದೇ ದಿನ 40 ಪಾಸಿಟಿವ್, 1 ಸಾವು
ದಾವಣಗೆರೆ, ಜು. 9 – ಜಿಲ್ಲೆಯಲ್ಲಿ ಒಂದೇ ದಿನ 40 ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿವೆ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಕರಣಗಳು ಒಂದೇ ದಿನ ಕಂಡು ಬಂದಿರುವುದಷ್ಟೇ ಅಲ್ಲದೇ, ಸಾಕಷ್ಟು ವ್ಯಾಪಕವಾಗಿ ಕೊರೊನಾ ಹರಡಿರುವುದೂ ಕಂಡು ಬಂದಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 23 ಕೊರೊನಾ ಪ್ರಕರಣಗಳು ಗುರುವಾರ ಕಂಡು ಬಂದಿವೆ. ಈ ಪೈಕಿ 21 ಪ್ರಕರಣಗಳು ನಗರದವಾಗಿವೆ.
ಒಂದೇ ದಿನ ಸಕ್ರಿಯ ಸೋಂಕಿತರು ದುಪ್ಪಟ್ಟು, ವ್ಯಾಪಕವಾಗಿ ಕಂಡು ಬಂದ ಕೊರೊನಾ, ನಗರದ ಹತ್ತಾರು ಬಡಾವಣೆಗಳಲ್ಲಿ ಸೋಂಕಿತರುದಾವಣಗೆರೆಯ ಸರಸ್ವತಿ ನಗರ, ಶ್ರೀನಿವಾಸ ನಗರ, ಬಸಾಪುರ, ಬಾಷಾ ನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಅಶೋಕ ನಗರ, ವೆಂಕಾಭೋವಿ ಕಾಲೋನಿ, ತರಳಬಾಳು ನಗರ, ವಿನೋಬನಗರ, ಕೆ.ಟಿ.ಜೆ. ನಗರ, ಕೆ.ಬಿ. ಬಡಾವಣೆ, ಪಿ.ಜೆ. ಬಡಾವಣೆ, ಕೆ.ಆರ್. ರಸ್ತೆಯ ಜೆ.ಕೆ. ರೆಸಿಡೆನ್ಸಿ, ಶೇಖರಪ್ಪ ನಗರ, ನರಸರಾಜಪೇಟೆ, ಎಂ.ಸಿ.ಸಿ. ಎ ಬ್ಲಾಕ್ಗಳಲ್ಲಿ ಗುರುವಾರ ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ನಗರದಲ್ಲಿ ಇಷ್ಟು ವ್ಯಾಪಕ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿರುವುದು ಇದೇ ಮೊದಲು.
ನಗರದ ಚರ್ಚ್ ರಸ್ತೆಯ 73 ವರ್ಷದ ಸೋಂಕಿತ ಚಿಕಿತ್ಸೆ ಫಲಕಾರಿಯಾಗದೇ ಸಾವು. ಜಿಲ್ಲೆಯಲ್ಲಿ ಒಟ್ಟಾರೆ 14 ಸಾವು, ಸಕ್ರಿಯ ಸಂಖ್ಯೆ 81ದಾವಣಗೆರೆ ತಾಲ್ಲೂಕಿನ ಮಹದೇವಪುರ ಹಾಗೂ ಗೊಲ್ಲರ ಹಳ್ಳಿಗಳಲ್ಲೂ ಕೊರೊನಾ ಸೋಂಕಿತರಿರುವುದು ಕಂಡು ಬಂದಿದೆ.
ಇಷ್ಟೊಂದು ಸಂಖ್ಯೆಯ ಸೋಂಕಿತರು ಕಂಡು ಬಂದಿದ್ದರೂ ಸಹ, ಇವರಾರೂ ಈಗಾಗಲೇ ಸೋಂಕಿತರ ಜೊತೆ ಸಂಪರ್ಕ ಹೊಂದಿದವರಲ್ಲ. ಇವರಲ್ಲಿ ಬಹುತೇಕರು ರಾಂಡಮ್ ಸ್ಯಾಂಪಲ್, ಫ್ಲು ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರು, ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ.
ಹರಿಹರದಲ್ಲಿ 12 ಕೊರೊನಾ ಪಾಸಿಟಿವ್
ಹರಿಹರ, ಜು. 9- ಹರಿಹರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ 12 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ತೆಗ್ಗಿನಕೇರಿ ಬಡಾವಣೆ 1, ಹಳ್ಳದಕೇರಿ 1, ಗಾಂಧಿನಗರ 4, ಅಗಸರ ಬೀದಿ 2, ವಿದ್ಯಾನಗರ 2 ಸೇರಿದಂತೆ ಗ್ರಾಮೀಣ ಪ್ರದೇಶದ ಗಂಗನರಸಿ ಗ್ರಾಮದಲ್ಲಿ 2 ಪ್ರಕರಣಗಳು ದೃಢ ಪಟ್ಟಿವೆ.
ಇಲ್ಲಿಯವರೆಗೆ ಒಟ್ಟು 44 ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದ್ದು, ಇವರಲ್ಲಿ 22 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ದಿನ ದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರು ವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಲಾಕ್ಡೌನ್ ಇದ್ದರೂ, ಮಧ್ಯಾಹ್ನ 2 ಗಂಟೆಗೆ ವ್ಯವಹಾರ ಸ್ಥಗಿತಗೊಳಿಸುತ್ತಿದ್ದರೂ ಸೋಂಕು ಹರ ಡುತ್ತಿರುವುದರಿಂದ ಜನತೆ ಭಯಭೀತರಾಗಿದ್ದಾರೆ.
ಸೋಂಕಿತರನ್ನು ಚಿಕಿತ್ಸೆಗೆ ಕರೆದೊಯ್ಯಲು ಬಂದ ವೇಳೆ ಸ್ಥಳೀಯ ಆರೋಗ್ಯ ಸಿಬ್ಬಂದಿಗಳು ಯಾವುದೇ ಸುರಕ್ಷಾ ಕವಚಗಳನ್ನು ಧರಿಸಿರಲಿಲ್ಲ ಎಂದು ಸ್ಥಳೀಯರು ಇದೇ ವೇಳೆ ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆಯ ಎಂ. ಎಂ. ಹೊರಕೇರಿ, ಪಾಟೀಲ್, ವಿಮಲಾನಾಯ್ಕ್, ಸುಧಾ ಸಳಕೆ ಸಿಸ್ಟರ್, ಹೇಮಂತ್, ಆನಂದ್ ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೊಳೆಸಿರಿಗೆರೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ
ಮಲೇಬೆನ್ನೂರು, ಜು.9- ಹೊಳೆಸಿರಿಗೆರೆ ಗ್ರಾಮದಲ್ಲಿರುವ ತನ್ನ ಹೆಂಡತಿಯ ತವರು ಮನೆಗೆ ಬಂದಿದ್ದ ಅಣಜಿ ಗ್ರಾ.ಪಂ. ವ್ಯಾಪ್ತಿಯ ಗೊಲ್ಲರಹಳ್ಳಿಯ 42 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೆಲವೊತ್ತು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಳೆದ ವಾರ ಜ್ವರ ಇದೆ ಎಂದು ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡಿರುವ ಈ ವ್ಯಕ್ತಿ ಅದಕ್ಕೆ ಮೊದಲು ಸಿ.ಜಿ. ಆಸ್ಪತ್ರೆಗೆ ಹೋದಾಗ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದಾನೆ. ಈ ವಿಷಯವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಆಗುವಾಗ ತಿಳಿಸಿಲ್ಲ ಎಂದು ಹೇಳಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ವಿಶ್ರಾಂತಿಗಾಗಿ ಹೊಳೆಸಿರಿಗೆರೆ ಗ್ರಾಮದ ಭೋವಿ ಕಾಲೋನಿಯಲ್ಲಿರುವ ಮಾವನ ಮನೆಗೆ ಪತ್ನಿ, ಮಗಳು ಸಮೇತ 3 ದಿನಗಳ ಹಿಂದೆ ಬಂದಿದ್ದರು ಎನ್ನಲಾಗಿದೆ.
ಗುರುವಾರ ಬೆಳಿಗ್ಗೆ ಈತನ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ. ಈತನನ್ನು ಕರೆತರಲು ಗೊಲ್ಲರಹಳ್ಳಿಗೆ ಹೋದಾಗ, ಹೊಳೆಸಿರಿಗೆರೆಯಲ್ಲಿದ್ದಾರೆಂಬ ಮಾಹಿತಿ ಸಿಗುತ್ತದೆ. ನಂತರ ಇಲ್ಲಿನ ಪಿಡಿಒ ನಂದ್ಯೆಪ್ಪ, ವೈದ್ಯಾಧಿಕಾರಿ ಡಾ. ರೇಖಾ ಅವರಿಗೆ ವಿಷಯ ತಿಳಿಸಿ, ಆನಂತರ ಕೊರೊನಾ ಸೋಂಕಿತ ವ್ಯಕ್ತಿಯನ್ನು ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ಕರೆದೊಯ್ಯಯಿತು. ಈತನ ಪತ್ನಿ, ಮಗಳು ಸೇರಿದಂತೆ 6 ಜನರನ್ನು ಗುತ್ತೂರು ಗ್ರಾಮದಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಯಿತು.
ನಂತರ ಭೋವಿ ಕಾಲೋನಿಯನ್ನು ಸ್ಯಾನಿಟೈಸ್ ಮಾಡಿ, ಸೀಲ್ಡೌನ್ ಮಾಡಲಾಗಿದೆ ಎಂದು ಪಿಡಿಒ ನಂದ್ಯೆಪ್ಪ ತಿಳಿಸಿದ್ದಾರೆ.
ಹೆಚ್ಚಾದ ಪರೀಕ್ಷೆಯಿಂದ ಸೋಂಕಿತರು ಹೆಚ್ಚಳ : ಡಾ. ರಾಘವನ್
ದಾವಣಗೆರೆ, ಜು. 10- ಜೂನ್ ಕೊನೆಯ ವಾರದಲ್ಲಿ 6302 ಹಾಗೂ ಜುಲೈ ಮೊದಲ ವಾರದಲ್ಲಿ 8201 ಒಟ್ಟು 14503 ಮಾದರಿ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈವರೆಗೆ ಸುಮಾರು 9 ಸಾವಿರ ಫಲಿತಾಂಶ ಬಂದಿದ್ದು, ಇನ್ನೂ 800-1000 ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದ್ದಾರೆ.
9 ಸಾವಿರ ಪರೀಕ್ಷೆಗಳಿಗೆ ಸುಮಾರು 150 ಪಾಸಿಟಿವ್ ಪ್ರಕರಣಗಳು ಬರಬಹುದೆಂಬ ನಿರೀಕ್ಷೆ ಇತ್ತು. ಈ ದಿನ 40 ಪ್ರಕರಣಗಳು ದೃಢಪಟ್ಟಿವೆ ಎಂದರು. ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಜೊತೆಯಲ್ಲಿ ಕಂಟೈನ್ಮೆಂಟ್ ಪ್ರದೇಶಗಳ ಸಂಪೂರ್ಣ ಜನಸಂಖ್ಯೆ, ಬಫರ್ ಪ್ರದೇಶಗಳ ಸೋಂಕಿನ ಅಂಚಿನಲ್ಲಿರುವವರು, ಪೌರ ಕಾರ್ಮಿಕರು, ಕೆಎಸ್ಸಾರ್ಟಿಸಿ ಸಿಬ್ಬಂದಿ, ಸ್ಲಂ ನಿವಾಸಿಗಳು ಒಳಗೊಂಡಂತೆ ಗಂಟಲು ದ್ರವ ಸಂಗ್ರಹಿಸಲಾಲಗಿದೆ. ಅಲ್ಲದೆ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳಿಂದ ರೆಫರ್ ಆದ ಸುಮಾರು 2 ಸಾವಿರ ಜ್ವರದ ರೀತಿಯ ಸೋಂಕು ಪ್ರಕರಣಗಳನ್ನು ಪತ್ತೆ ಹೆಚ್ಚೆ ಪರೀಕ್ಷೆಗೆ ಕಳುಹಿಸಲಾಗಿದೆ.
ಜಿಲ್ಲೆಗೆ ನಿಗಧಿಪಡಿಸಲಾಗಿರುವ ದಿನಕ್ಕೆ 640 ಮಾದರಿ ಗುರಿ ಮೀರಿ 1 ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದಾಗಿ ಅವರು ಹೇಳಿದ್ದಾರೆ.
ಜನ ಸಮೂಹದಲ್ಲಿ ರಾಂಡಮ್ ಆಗಿ ಕೊರೊನಾ ಪರೀಕ್ಷೆ ಮಾಡಿದಾಗ 16 ಸೋಂಕಿತರು ಕಂಡು ಬಂದಿದ್ದಾರೆ. ರಾಂಡಮ್ ಸ್ಯಾಂಪಲ್ ಪರೀಕ್ಷೆಯಲ್ಲಿ ಇಷ್ಟೊಂದು ಸೋಂಕಿತರು ಕಂಡು ಬಂದಿರುವುದೂ ಸಹ ಇದೇ ಮೊದಲು.
ಹೊನ್ನಾಳಿಯಲ್ಲಿ 15 ಸೋಂಕಿತರು ಕಂಡು ಬಂದಿದ್ದಾರೆ. ರಾಂಡಮ್ ಪರೀಕ್ಷೆಯಲ್ಲಿ ಇವರಿಗೆ ಸೋಂಕಿರುವುದು ಕಂಡು ಬಂದಿದೆ. ಉಳಿದಂತೆ ಚನ್ನಗಿರಿಯಲ್ಲಿ ಒಂದು ಸೋಂಕು ಪ್ರಕರಣ ಪತ್ತೆಯಾಗಿದೆ. ಇದೇ ದಿನದಂದು ನಾಲ್ವರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವರು ಚಿತ್ರದುರ್ಗದ ಭರಮಸಾಗರ, ಹೊನ್ನಾಳಿಯ ಕ್ಯಾಸಿನಕೆರೆ, ಹರಿಹರದ ಇಂದಿರಾ ನಗರ ಹಾಗೂ ದಾವಣಗೆರೆಯ ಸುಲ್ತಾನ್ ಪೇಟೆಯವರಾಗಿದ್ದಾರೆ.
ನಗರದ ಚರ್ಚ್ ರಸ್ತೆಯ 73 ವರ್ಷದ ಸೋಂಕಿತರೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ನಗರದ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಕೊರೊನಾ ಅಲ್ಲದೇ ಸಕ್ಕರೆ ಕಾಯಿಲೆ, ರಕ್ತದೊತ್ತಡ, ತೀವ್ರ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದರು.
ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ ದುಪ್ಪಟ್ಟಾಗಿದೆ. ನಿನ್ನೆ 41 ಆಗಿದ್ದ ಸಕ್ರಿಯ ಸೋಂಕಿತರ ಸಂಖ್ಯೆ ಗುರುವಾರಕ್ಕೆ 81ಕ್ಕೆ ತಲುಪಿದೆ.
ಜಿಲ್ಲೆಯಲ್ಲಿ ಇದುವರೆಗೂ 423 ಜನರಲ್ಲಿ ಸೋಂಕು ಕಂಡು ಬಂದಿದ್ದು, ಇವರಲ್ಲಿ 328 ಜನರು ಗುಣಹೊಂದಿ ಬಿಡುಗಡೆಯಾಗಿದ್ದಾರೆ. 14 ಜನರು ಸಾವನ್ನಪ್ಪಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ನಗರದ ಎರಡು ಪ್ರಖ್ಯಾತ ಜವಳಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.