ಪಂಚಮಸಾಲಿ ಸಮಾಜವನ್ನು 2 ಎಗೆ ಸೇರಿಸಲು ಆಗ್ರಹಿಸಿ 28ಕ್ಕೆ ಸತ್ಯಾಗ್ರಹ

ಪಂಚಮಸಾಲಿ ಸಮಾಜವನ್ನು 2 ಎಗೆ ಸೇರಿಸಲು ಆಗ್ರಹಿಸಿ 28ಕ್ಕೆ ಸತ್ಯಾಗ್ರಹ - Janathavaniದಾವಣಗೆರೆ, ಅ.12- ಪಂಚಮಸಾಲಿ ಸಮಾಜ ವನ್ನು ರಾಜ್ಯ ಸರ್ಕಾರವು ಪ್ರವರ್ಗ-2 ಎ ಗೆ ಸೇರಿಸಬೇಕು ಮತ್ತು ಕೇಂದ್ರ ಸರ್ಕಾರವು ಓಬಿಸಿಗೆ ಸೇರಿಸಬೇಕೆಂದು ಒತ್ತಾಯಿಸಿ ಅ.28 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ರಾಜ್ಯದಲ್ಲಿನ ಸಮಾಜ ಬಾಂಧವರೊಡನೆ ಸೇರಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸು ವುದಾಗಿ ಕೂಡಲ ಸಂಗಮದ ರಾಜ್ಯ ಪಂಚಮ ಸಾಲಿ ಪೀಠದ ಜಯ ಮತ್ಯುಂಜಯ ಶ್ರೀಗಳು ತಿಳಿಸಿದರು.

ಸಮಾಜದ ಯುವ ಮುಖಂಡ ಎಂ.ಟಿ. ಸುಭಾಶ್ಚಂದ್ರ ಅವರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಕಳೆದ ಎರಡೂವರೆ ದಶಕಗಳಿಂದಲೂ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2 ಎಗೆ ಸೇರಿಸಬೇಕೆಂಬುದು ಸಮಾಜದ ಕೂಗಾಗಿದೆ. ವೀರಶೈವ ಲಿಂಗಾಯತ ಸಮುದಾಯದಲ್ಲೇ ಪಂಚಮಸಾಲಿ ಸಮಾಜ ಅತೀ ದೊಡ್ಡ ಸಮಾಜವಾಗಿದೆ. ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಅವಶ್ಯಕತೆ ಇದೆ. ಹಾಗಾಗಿ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸುವರ್ಣ ಸೌಧದ ಬಳಿ ಮೀಸಲಾತಿಗಾಗಿ ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೂ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರದ ಗಮನ ಸಳೆಯಲಾಗುವುದು ಎಂದು ಹೇಳಿದರು.

ಪ್ರವರ್ಗ-2 ಎಗೆ ಸೇರಿಸುವಂತೆ ಕೂಡಲ ಸಂಗಮ ಪೀಠ-ಹರಿಹರದ ಪಂಚಮಸಾಲಿ ಪೀಠ ಒಂದಾಗಿ ಹೋರಾಟ ನಡೆಸಲೆಂಬ ಆಲೋಚನೆ ಬಂದರೆ ಸ್ವಾಗತಿಸುತ್ತೇವೆ. ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು ಮತ್ತು ಮೀಸಲಾತಿ ವಿಚಾರದಲ್ಲಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸವಾಗಬೇಕೆಂಬುದೇ ಉಭಯ ಪೀಠಗಳ ಉದ್ದೇಶವೆಂದರು.

ದಿ. ಕಾಶೆಪ್ಪನವರ್ ಸೇರಿದಂತೆ ಸಮಾಜದ ಹಿರಿಯರು ಸಾಮಾಜಿಕ ನ್ಯಾಯಕ್ಕಾಗಿ ಮುನ್ನುಡಿ ಬರೆದ ಹೋರಾಟವಿದು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಆಧರಿಸಿ ಕಲ್ಪಿಸಿರುವ ಮೀಸಲಾತಿಯಂತೆ ಪಂಚಮಸಾಲಿ ಸಮಾಜಕ್ಕೂ ಸಾಮಾಜಿಕ ನ್ಯಾಯ ಕೇಳುತ್ತಿದ್ದೇವೆ. ದಲಿತ, ಅಂಬಿಗ, ಹಾಲುಮತ, ನಾಯಕ ಸಮುದಾಯಗಳೂ ಮೀಸಲಾತಿ ಸೌಲಭ್ಯಕ್ಕಾಗಿ ಹೋರಾಟ ನಡೆಸಿವೆ. ಪಂಚಮಸಾಲಿ ಸಮಾಜವೂ 25 ವರ್ಷಗಳ ಹೋರಾಟವನ್ನು ಮತ್ತೆ ತೀವ್ರಗೊಳಿಸುತ್ತಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪಂಚಮಸಾಲಿ ಸಮಾಜದ ಕೊಡುಗೆ ಮಹತ್ವದ್ದಾಗಿದೆ. ಕುಲ ಅಧ್ಯಯನ ಸಮಿತಿ ರಚಿಸಿ ಸಮುದಾಯದ ಸ್ಥಿತಿಗತಿ ಅಧ್ಯಯನ ಮಾಡಬೇಕು. ಶೇ.3ರಷ್ಟು ಜನಸಂಖ್ಯೆ ಇದ್ದವರಿಗೆ ಶೇ.10 ಮೀಸಲಾತಿ ನೀಡಿರುವಾಗ, ಅತೀ ದೊಡ್ಡ ಸಮುದಾಯ ನಮ್ಮದು. ಮುಂದಿನ ಬಜೆಟ್ ಒಳಗಾಗಿ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಹಾಗೇನಾದರೂ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆಸಲಾಗುವುದೆಂದರು.

ಸರ್ಕಾರಕ್ಕೆ ಸಚಿವ ಸ್ಥಾನ ನೀಡುವಂತೆ ಕೇಳಿ ಕೇಳಿ ನಮಗೂ ಸಾಕಾಗಿದೆ. ಹಿಂದೆ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಸರ್ಕಾರವಿದ್ದಾಗ ಇಂತಹ ದೊಡ್ಡ ಸಮುದಾಯದ ಕೇವಲ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದರು. ಈಗ 17 ಶಾಸಕರು, 3 ಜನ ಸಂಸದರಿದ್ದರೂ ಎಷ್ಟು ಜನಕ್ಕೆ ಮಂತ್ರಿ ಸ್ಥಾನ ನೀಡಿದ್ದಾರೆ. ಸಚಿವ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟ ವಿಚಾರ. ಪಂಚಮಸಾಲಿ ಸಮಾಜಕ್ಕೆ ಮಂತ್ರಿ ಸ್ಥಾನಕ್ಕಿಂತಲೂ ಮುಖ್ಯವಾಗಿ ಮೀಸಲಾತಿ ಅಗತ್ಯತೆ ಹೆಚ್ಚಾಗಿದ್ದು ಶಿಕ್ಷಣ, ಉದ್ಯೋಗದಲ್ಲಿ ಪಂಚಮಸಾಲಿಗೂ ಮೀಸಲಾತಿ ನೀಡಲಿ ಎಂದರು.

ವೀರಶೈವ ಲಿಂಗಾಯತ ಸಮುದಾಯದ 42 ಒಳ ಪಂಗಡಗಳೂ ಸಂಕಷ್ಟದಲ್ಲಿವೆ. ಇಂದು ಈ ಎಲ್ಲಾ ಒಳ ಪಂಗಡಗಳೂ ಮೀಸಲಾತಿ ಕೇಳುತ್ತಿವೆ. ನಾವೂ ಕೇಳುತ್ತಿದ್ದೇವೆ. ಬೆಳಗಾವಿ ಸುವರ್ಣ ಸೌಧದ ಪ್ರವೇಶ ದ್ವಾರದ ಬಳಿ ಕಾಯಕವೇ ಕೈಲಾಸವೆಂಬ ಫಲಕ ಅಳವಡಿಕೆ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರಿಡಬೇಕು. ಸಮುದಾಯದ ಋಣ ತೀರಿಸಲು ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಸಮಾಜದ ಹಿರಿಯ ಮುಖಂಡ ಎಂ.ಟಿ. ಸುಭಾಶ್ಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ವಾಲ್ಮೀಕಿ ಸಮಾಜದ ಮುಖಂಡ ಬಿ. ವೀರಣ್ಣ, ಪಾಲಿಕೆ ಮಾಜಿ ಸದಸ್ಯ ಎಂ. ಹಾಲೇಶ್, ದೂಡಾ ಮಾಜಿ ಸದಸ್ಯ ಶಿವಾಲಿ ಶಿವಕುಮಾರ, ನಗರಸಭೆ ಮಾಜಿ ಸದಸ್ಯ ಕರಿಗಾರ ಬಸಪ್ಪ, ಹರಪನಹಳ್ಳಿ ದಿವಾಕರ್, ಪೌರ ನೌಕರರ ಸಂಘದ ಮುಖಂಡ ಕೆ.ಎಸ್. ಗೋವಿಂದರಾಜ, ವೀರಶೈವ ಲಿಂಗಾಯತ ಯುವ ಮುಖಂಡ ನುಗ್ಗಿಹಳ್ಳಿ ರವಿಕುಮಾರ, ಕಂಚಿಕೆರೆ ಕೊಟ್ರೇಶ, ಅಜ್ಜಯ್ಯ ಕಂಚಿಕೆರೆ, ಹರಪನಹಳ್ಳಿ ಬೆಟ್ಟನಗೌಡ್ರು, ಶ್ರೀಧರ ಪಾಟೀಲ, ವಿಜಯಕುಮಾರ ಗುಜರಿ, ಕೋಳಿ ಇಬ್ರಾಹಿಂ ಸಾಬ್ ಸೇರಿದಂತೆ ಇತತರು ಇದ್ದರು.

error: Content is protected !!