ಹಿಂದೂ ಎಂದರೆ ಬಿಜೆಪಿ

ಹಿಂದೂ ಎಂದರೆ ಬಿಜೆಪಿ - Janathavaniದಾವಣಗೆರೆ, ಅ. 12 – ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಬೇರೆಯವರಿಗೆ ಮತ ಹಾಕುವುದಿಲ್ಲ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಕಾರಣಕ್ಕಾಗೇನೂ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ. ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುವುದು ತೀರ್ಮಾನ ಆಗಿ ಹೋಗಿರುವಂಥದ್ದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ನಗರಕ್ಕೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇಲ್ಲವೇ ಡಿ.ಕೆ. ಶಿವಕುಮಾರ್ ಕಾರಣಕ್ಕಾಗಿ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ. ಮುಸಲ್ಮಾನರು ಎಂದಾಕ್ಷಣ ಕಾಂಗ್ರೆಸ್. ಹಿಂದೂ ಎಂದರೆ ಬಿಜೆಪಿ ಎಂದು ಹೇಳಿದರು.

ಸಿದ್ದರಾಮಯ್ಯನವರ ಅಹಿಂದ ವಾದ ವನ್ನು ತಳ್ಳಿ ಹಾಕಿದ ಈಶ್ವರಪ್ಪ, ಸಿದ್ದರಾಮಯ್ಯ ಜೊತೆ ಅಲ್ಪಸಂಖ್ಯಾತರೂ ಇಲ್ಲ, ಹಿಂದುಳಿದವರು, ದಲಿತರೂ ಇಲ್ಲ. ಅವರ ಬಳಿ ಕೇವಲ ಕುರುಬರಿದ್ದಾರೆ ಎಂದರು. ಜೆಡಿಎಸ್‌ ನಾಯಕರಾದ ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಜಾತಿ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಮಾಡುತ್ತಿದ್ದಾರೆ. ಇದೊಂದು ರೀತಿ ಕ್ಷುಲ್ಲಕ ರಾಜಕಾರಣ. ಇದನ್ನು ನಾನು ಕಟುವಾಗಿ ವಿರೋಧಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಕುಮಾರಸ್ವಾಮಿ ಅವರು ಒಕ್ಕಲಿಗ ಹಾಗೂ ಸಿದ್ದರಾಮಯ್ಯ ನವರು ಅಹಿಂದ ಎಂಬ ಪದಗಳನ್ನು ಚುನಾವಣಾ ರಾಜಕೀಯ ದಲ್ಲಿ ಬಳಸುವುದರಲ್ಲಿ ಪರಿಣಿತರು. ಆದರೆ, ಇವರು ಯಾವ ಜಾತಿಗೂ ಏನೂ ಮಾಡಿಲ್ಲ ಎಂದು ಸಚಿವರು ಆರೋಪಿಸಿದರು.

ಮುನಿರತ್ನ ಋಣ : ಉಪ ಚುನಾವಣೆಯಲ್ಲಿ ಮುನಿರತ್ನ ಅವರಿಗೆ ಟಿಕೆಟ್ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಬೇರೆ ಪಕ್ಷಗಳಿಂದ ಬಂದ 17 ಶಾಸಕರ ಕಾರಣದಿಂದಾಗಿ ಬಿಜೆಪಿ ಸರ್ಕಾರವಾಗಿದೆ ಹಾಗೂ ನಾವು ಸಚಿವರಾಗಿದ್ದೇವೆ. ಮಾಜಿ ಶಾಸಕ ಮುನಿರತ್ನ ಅವರ ಋಣ ತೀರಿಸುವುದು ನಮ್ಮ ಕರ್ತವ್ಯ. ಅವರಿಗೆ ಯಾವ ಕಾರಣಕ್ಕೂ ಅನ್ಯಾಯ ಆಗುವುದಿಲ್ಲ ಎಂದರು.

error: Content is protected !!