ಪದವೀಧರ ಕ್ಷೇತ್ರ ಗೆಲ್ಲಲು ಮತ ವಿಕೇಂದ್ರೀಕರಣ ತಂತ್ರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸಲಹೆ

ಪದವೀಧರ ಕ್ಷೇತ್ರದ ಮತದಾರರು ವಿದ್ಯಾವಂತರು. ಅವರು ಜಾತಿ, ಕುಲ, ಗೋತ್ರ ನೋಡುವುದಿಲ್ಲ. ಬಿಜೆಪಿಗೇ ಮತ ಹಾಕುತ್ತಾರೆ. ಆದರೆ ಅವರನ್ನು ಕರೆ ತಂದು ಮತ ಹಾಕಿಸಬೇಕು. ಇಲ್ಲದಿದ್ದರೆ ಬಿಜೆಪಿಗೆ ನಷ್ಟ.

– ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

ದಾವಣಗೆರೆ, ಅ. 12- ಮತ ವಿಕೇಂದ್ರೀಕರಣ ಸೂತ್ರದ ಮೂಲಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ನಮ್ಮದಾಗಿಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಕೇಂದ್ರೀಕರಣ ವ್ಯವಸ್ಥೆ ನಮಗೇನೂ ಹೊಸದಲ್ಲ. ಪ್ರತಿ ಕಾರ್ಯಕರ್ತನಿಗೆ 25 ರಿಂದ 30 ಮತಗಳ ಜವಾಬ್ದಾರಿ ಹಂಚಬೇಕು. ಅವರ ಮೊಬೈಲ್ ಸಂಖ್ಯೆ ಪಡೆದು ಕನಿಷ್ಟ ಪಕ್ಷ ಐದು ಬಾರಿ ಮತದಾರರನ್ನು ಭೇಟಿ ಮಾಡಿ ಮತ ಕೇಳಬೇಕು ಆಗ  ನೂರಕ್ಕೆ ನೂರರಷ್ಟು ನಮ್ಮ ಪಕ್ಷ ಗೆಲ್ಲುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಮುಖರು ಚುರುಕಾಗದಿದ್ದರೆ ಯಶಸ್ಸು ಸಿಗುವುದಿಲ್ಲ. ಮುಖಂಡರು ಚುರುಕಿನಿಂದ ಕೆಲಸ ಮಾಡಿದರೆ ಕಾರ್ಯಕರ್ತ ರಲ್ಲೂ ಉತ್ಸಾಹ ಬರುತ್ತದೆ. ಕೇವಲ ಕಾರ್ಯಕರ್ತರ ಸಂಘಟನೆಯಿಂದ ಗೆಲ್ಲುವ ಪಕ್ಷ ಬಿಜೆಪಿ ಮಾತ್ರ ಎಂದರು.

ಪ್ರಸ್ತುತ ದಿನಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ಎಂದರೆ ಬಿಜೆಪಿಯ ಗೆಲುವು ನಿಶ್ಚಿತ ಎನ್ನುವ ವ್ಯವಸ್ಥೆ ನಿರ್ಮಾಣವಾಗಿದೆ.  ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಗಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು. ಆದರೆ ರಾಜ್ಯದ ಜನತೆ ಬಿಜೆಪಿ ಜೊತೆ ಇದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೆಚ್.ಡಿ. ಕುಮಾರ ಸ್ವಾಮಿ ಹಾಗೂ ಸಿದ್ಧರಾಮಯ್ಯ ಜಾತಿವಾದಿಗಳು.  ಆದರೆ ಆ ಜಾತಿಗಾಗಿ ಅವರೇನೂ ಮಾಡಿಲ್ಲ. ಆದರೆ ನಾವು ರಾಷ್ಟ್ರವಾದಿಗಳು, ಜನತೆ ರಾಷ್ಟ್ರ ವಾದವನ್ನೇ ಮೆಚ್ಚಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಸೋತು ಸುಣ್ಣವಾಗಿದ್ದಾರೆ. ಅದಕ್ಕಾಗಿಯೇ ಹೆಚ್ಚು ಟೀಕೆ ಮಾಡುತ್ತಿದ್ದಾರೆ.  ಅವರ ಟೀಕೆಗಳಿಗೆ ಚುನಾವಣಾ ಫಲಿತಾಂಶವೇ ಉತ್ತರವಾಗಬೇಕು.  ಪಕ್ಷದ ಅಳತೆ ಗೋಲೇ ಚುನಾವಣೆ, ಚುನಾವಣೆ ಗೆಲ್ಲದಿದ್ದರೆ ಪಕ್ಷ ಕುಂದುತ್ತದೆ.  ದಾವಣಗೆರೆ ಸಂಘಟನೆಯಲ್ಲಿ ಶಕ್ತಿ ಶಾಲಿ ಜಿಲ್ಲೆಯಾಗಿದ್ದು, ಈ ಚುನಾವಣೆಯಲ್ಲೂ ದಿಗ್ವಿಜಯ ತರಲು ನೆರವಾಗಲಿ ಎಂದು ಆಶಿಸಿದರು.

ಸಂಸದ  ಜಿ.ಎಂ. ಸಿದ್ದೇಶ್ವರ್ ಮಾತನಾಡಿ,  ಚಿದಾನಂದ ಗೌಡ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷ ತೀರ್ಮಾನಿಸಿದೆ. ಮಹಾನಗರ ಪಾಲಿಕೆಯ ಅಧ್ಯಕ್ಷರ ಚುನಾವಣೆ ವೇಳೆಗೂ ವಿಧಾನ ಪರಿಷತ್ ಚುನಾಯಿತ ಅಭ್ಯರ್ಥಿಯ ಮತ ಅಗತ್ಯವಿದ್ದು, ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿಯಿಂದ ಮತದಾರರ ಮನವೊಲಿಸಬೇಕು ಎಂದರು.

ಈ ಚುನಾವಣೆಯಲ್ಲಿ ವಿದ್ಯಾವಂತರೇ ಸರಿಯಾದ ರೀತಿ ಮತ ಹಾಕುವುದಿಲ್ಲವಾದ್ದರಿಂದ. ಪ್ರತಿ ಮತದಾರರಿಗೆ ಯಾವ ರೀತಿ ಮತ ಚಲಾಯಿಸಬೇಕೆಂಬ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಮಾಜಿ ಶಾಸಕ ಬಸವರಾಜ್ ನಾಯ್ಕ, ಮುಖಂಡರಾದ ಎಲ್.ಎನ್. ಕಲ್ಲೇಶ್, ಲಿಂಗರಾಜ್,  ಕೊಳೇನಹಳ್ಳಿ ಸತೀಶ್, ಓಂಕಾರಪ್ಪ, ಶಾಂತರಾಜ ಪಾಟೀಲ್ ಇತರರು ಉಪಸ್ಥಿತರಿದ್ದರು. ರೂಪಾ ಕ್ವಾಟ್ವೆ ಆರಂಭದಲ್ಲಿ ಪ್ರಾರ್ಥಿಸಿದರು.

error: Content is protected !!