ಅಪ್ಪಟ ಗಾಂಧಿವಾದಿ, ಕ್ರೀಡಾ ಪ್ರೋತ್ಸಾಹಕ ಕೆ. ಮಲ್ಲಪ್ಪ ಇನ್ನಿಲ್ಲ

ಅಪ್ಪಟ ಗಾಂಧಿವಾದಿ, ಕ್ರೀಡಾ ಪ್ರೋತ್ಸಾಹಕ ಕೆ. ಮಲ್ಲಪ್ಪ ಇನ್ನಿಲ್ಲ - Janathavaniದಾವಣಗೆರೆ,ಅ.12- ಅಪ್ಪಟ ಗಾಂಧಿವಾದಿ, ಅಪರೂಪದ ರಾಜಕಾರಣಿ, ಸಾವಿರಾರು ಕ್ರೀಡಾಪಟುಗಳ ಪ್ರೋತ್ಸಾಹಕ, ಕುರುಬ ಸಮಾಜದ ಮುಖಂಡ, ಹಿಂದುಳಿದ ವರ್ಗಗಳ ನಾಯಕ, ಹಿರಿಯ ಮುತ್ಸದ್ಧಿ ಕೆ.ಮಲ್ಲಪ್ಪ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಸ್ಥಳೀಯ ಆಂಜನೇಯ ಬಡಾವಣೆ ಯಲ್ಲಿರುವ ಅವರ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಸುಮಾರು 92 ವರ್ಷ ವಯಸ್ಸಾಗಿತ್ತು. ವಯೋ ಸಹಜತೆಯಿಂದ ಬಳಲುತ್ತಿದ್ದ ಅವರು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇಂದು ಸಂಜೆ ನಗರದ ರುದ್ರ ಭೂಮಿಯಲ್ಲಿ ನೆರವೇರಿಸಲಾಯಿತು.

ಸಂಕ್ಷಿಪ್ತ ಪರಿಚಯ : 1929, ಏಪ್ರಿಲ್ 15ರಂದು ಆಗಿನ ದಾವಣಗೆರೆಯ ಹೆಸರಾಂತ ಮನೆತನಗಳಲ್ಲೊಂದಾಗಿದ್ದ ಕನ್ನವರ ವಂಶಸ್ಥರಲ್ಲಿ ಜನಿಸಿದ್ದ ಮಲ್ಲಪ್ಪ, ಇಂಟರ್ ಮೀಡಿಯಟ್ ವರೆಗೆ ವಿದ್ಯಾಭ್ಯಾಸ ಮಾಡಿದ್ದರು. ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು, ರಾಜಕಾರಣ ಮತ್ತು ಕ್ರೀಡಾ ಕ್ಷೇತ್ರಗಳ ಮೂಲಕ ಜನಪ್ರಿಯ ನಾಯಕರಾಗಿ ಹೊರ ಹೊಮ್ಮಿದ್ದರು.

ಆರಂಭದ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷದಲ್ಲಿ ಗುರುತಿಸಿಕೊಂಡರಾದರೂ, ಜಯಪ್ರಕಾಶ್ ನಾರಾಯಣರ ಸಮಾಜ ವಾದ, ತತ್ವ-ಸಿದ್ಧಾಂತಗಳಿಗೆ ಆಕರ್ಷಿತರಾಗಿ ಜನತಾ ಪರಿವಾರದಲ್ಲಿ ರಾಜಕೀಯ ನೆಲೆ ಕಂಡರು. ದಾವಣಗೆರೆ ನಗರಸಭೆಗೆ 2 ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಒಮ್ಮೆ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಎರಡೂ ವಾರ್ಡು (ಇಂದಿನ ಪಿ.ಜೆ. ಬಡಾವಣೆ ಮತ್ತು ವಿನೋಬನಗರ) ಗಳಿಂದ ಅತ್ಯಧಿಕ ಮತಗಳನ್ನು ಗಳಿಸಿ ಚುನಾಯಿತರಾಗಿ ದಾಖಲೆ ನಿರ್ಮಿಸಿದ್ದರು. 

ದಿ. ಕೆ.ಟಿ. ಜಂಬಣ್ಣ ಅವರು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೆ. ಮಲ್ಲಪ್ಪ ಉಪಾಧ್ಯಕ್ಷರಾಗಿದ್ದರು. ವಿನೋಬನಗರದಲ್ಲಿ ತಾವು ಹೊಂದಿದ್ದ 2-3 ಎಕರೆ ಜಮೀನನ್ನು ಜಂಬಣ್ಣ ಹೇಳಿದ ಒಂದೇ ಮಾತಿಗೆ ತಲೆಬಾಗಿ ಬಡವರಿಗೆ ನಿವೇಶನವನ್ನಾಗಿ ಮಾಡಿ ಹಂಚಲು ದಾನ ಮಾಡುವುದರ ಮೂಲಕ ಬಡವರ ಮೇಲಿನ ಕಾಳಜಿಯನ್ನು ಪ್ರತಿಬಿಂಬಿಸಿದ್ದರು.

ದಾವಣಗೆರೆ ವಿಧಾನಸಭೆ ಕ್ಷೇತ್ರಕ್ಕೆ ನೀಡಿದ ಚುನಾವಣೆಯಲ್ಲಿ ಮಾಜಿ ಶಾಸಕ ದಿ. ಕಾಂ. ಪಂಪಾಪತಿ ಅವರ ವಿರುದ್ಧ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಮಲ್ಲಪ್ಪ ಪರಾಭವಗೊಂಡಿದ್ದರು. ನಂತರದ ದಿನಗಳಲ್ಲಿ ನಡೆದ ಚುನಾವಣೆಗಳಲ್ಲಿ ಹರಿಹರ ಮತ್ತು ಮಾಯಕೊಂಡ ಕ್ಷೇತ್ರಗಳಿಂದ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಏತನ್ಮಧ್ಯೆ, ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಹೆಚ್. ಪಟೇಲ್, ಮಾಜಿ ಸಚಿವರುಗಳಾದ ಎಂ.ಪಿ. ಪ್ರಕಾಶ್, ನಜೀರ್ ಸಾಬ್, ಜೀವರಾಜ ಆಳ್ವ, ರಾಜ್ಯಸಭೆ ಮಾಜಿ ಸದಸ್ಯ ಕೆ.ಜಿ. ಮಹೇಶ್ವರಪ್ಪ, ಬಿ.ಜಿ. ಕೊಟ್ರಪ್ಪ ಸೇರಿದಂತೆ ಹಲವಾರು ನಾಯಕರುಗಳೊಂದಿಗೆ ಕೆ. ಮಲ್ಲಪ್ಪ ಆತ್ಮೀಯ ಒಡನಾಟ ಹೊಂದಿದ್ದರು.

ಬದಲಾದ ರಾಜಕಾರಣದಲ್ಲಿ  ಜನತಾ ಪರಿವಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡ ಮಲ್ಲಪ್ಪ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡಿದ್ದರು. ಜೊತೆ – ಜೊತೆಗೆ ಸಿದ್ದರಾಮಯ್ಯ ಅವರೊಟ್ಟಿಗೆ ಶೋಷಿತ ವರ್ಗಗಳ ಪರ ಹೋರಾಟ ನಡೆಸುವ ನಿಟ್ಟಿನಲ್ಲಿ ಅಹಿಂದ ದ ನಾಯಕರಾಗಿದ್ದರು.

ಮಲ್ಲಪ್ಪ ಅವರ ರಾಜಕಾರಣದ ಅಧಿಕಾರವಧಿಯಲ್ಲಿ ದಾವಣಗೆರೆ ನಗರಾಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ನಗರ ಬೆಳೆದಂತೆ ನೀರು, ರಸ್ತೆ, ಸಾರಿಗೆ ಸೌಕರ್ಯ, ಬಡಾವಣೆಗಳ ನಿರ್ಮಾಣಕ್ಕೆ ಭೂ ಸ್ವಾಧೀನ ಹೀಗೆ ದಾವಣಗೆರೆಯ ಸರ್ವತೋಮುಖ ಬೆಳವಣಿಗೆಯಲ್ಲಿ ಮಲ್ಲಪ್ಪ ಅವರ ಸೇವೆ ಪೂರಕವಾಗಿವೆ.

ಸಿದ್ದರಾಮಯ್ಯ ಅವರ ಒಡನಾಟದೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದರೂ ತಮ್ಮ ತತ್ವ – ಸಿದ್ಧಾಂತಗಳನ್ನು ಬಿಟ್ಟಿರಲಿಲ್ಲ. ಆಯಾ ಪಕ್ಷಗಳ ನಾಯಕರೊಂದಿಗೆ ಜಾಣ್ಮೆಯಿಂದ ಪಕ್ಷದ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕ್ರೀಡೆ : ಯಾವುದೇ ಕ್ರೀಡೆಗಳನ್ನು ಪ್ರೀತಿಸುತ್ತಿದ್ದ ಮಲ್ಲಪ್ಪ, ಕುಸ್ತಿ, ಪವರ್ ಲಿಫ್ಟಿಂಗ್, ದೇಹದಾರ್ಢ್ಯ ಕ್ರೀಡೆಗಳಿಗೆ ಒತ್ತು ನೀಡಿದ್ದರು. ಶ್ರೀ ಬೀರೇಶ್ವರ ವ್ಯಾಯಾಮ ಶಾಲೆಯನ್ನು ಸ್ಥಾಪಿಸಿದ್ದ ಅವರು, ಆ ಶಾಲೆಯ ಮೂಲಕ ನಗರ ಮಟ್ಟದಿಂದ ಅಂತರ ರಾಷ್ಟ್ರೀಯ ಮಟ್ಟದವರೆಗೆ ಕುಸ್ತಿ, ದೇಹದಾರ್ಢ್ಯ, ಪವರ್ ಲಿಫ್ಟಿಂಗ್, ಯೋಗಾಸನ, ಖೋಖೋ, ಚೆಸ್, ಬ್ಯಾಡ್ಮಿಂಟನ್ ಹೀಗೆ ಹತ್ತಾರು ಕ್ರೀಡಾ ಸ್ಪರ್ಧೆಗಳನ್ನು ನಡೆಸುವುದರ ಮೂಲಕ  ಸಾವಿರಾರು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ್ದರು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಸಂದರ್ಭದಲ್ಲಿ ಕುಸ್ತಿ ಮೇಳದ ರೂವಾರಿಗಳಾಗಿದ್ದರು. ಅದರೊಂದಿಗೆ ನಶಿಸುತ್ತಿದ್ದ ಗ್ರಾಮೀಣ ಕ್ರೀಡೆಗಳಿಗೆ ಬೆನ್ನೆಲುಬಾಗಿ ನಿಂತಿದ್ದರು.

ಕುರುಬ ಸಮಾಜದಿಂದ ವಿದ್ಯಾರ್ಥಿ ನಿಲಯದ ಸ್ಥಾಪಕಲ್ಲೊಬ್ಬರಾಗುವುದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಇದೇ ರೀತಿ ಹಲವಾರು ಸಮಾಜಗಳಿಗೆ ವಿದ್ಯಾರ್ಥಿ ನಿಲಯ ಸ್ಥಾಪಿಸಲು ನಿವೇಶನ ಕೊಡಿಸುವಲ್ಲಿ, ಕಟ್ಟಡವನ್ನು ನಿರ್ಮಿಸಲು ದಾನಿಗಳಿಂದ ನೆರವು ಕೊಡಿಸುವಲ್ಲಿ ಹೀಗೆ ಹಲವಾರು ರೀತಿಯಲ್ಲಿ ಪ್ರೋತ್ಸಾಹಕರಾಗಿದ್ದರು. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು, ಯುವಕರು ಹಾಸ್ಟೆಲ್ ಮತ್ತು ಕ್ರೀಡೆಗಳ ಮೂಲಕ ಉದ್ಯೋಗ ಪಡೆದಿದ್ದಾರೆ.  ಅವರೆಲ್ಲಾ ಇಂದು ಉನ್ನತ ಸ್ಥಾನ-ಮಾನಗಳನ್ನು ಗಳಿಸಲು ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.

ಹಲವಾರು ಸಮುದಾಯದವರಿಗೆ ಮದುವೆ ಮತ್ತು ಇತರೆ ಶುಭ ಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ ಕಲ್ಯಾಣ ಮಂಟಪಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ, ನಗರಸಭೆ, ನಗರಾಭಿವೃದ್ಧಿ ಮಂಡಳಿಗಳಿಂದ ನಿವೇಶನ ಕೊಡಿಸಿರುವುದಲ್ಲದೇ, ಕಟ್ಟಡ ನಿರ್ಮಿಸಲು ದೇಣಿಗೆ ಕೂಡಾ ಸಂಗ್ರಹಿಸಿಕೊಟ್ಟಿದ್ದಾರೆ. ಮಾಗೋಡು ಹನುಮಂತಪ್ಪ ಹಾಲಮ್ಮ ಅವರ ನೆರವಿನಿಂದ ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಇಂದು ಸರ್ವ ಸಮಾಜ ಬಾಂಧವರು ಬಳಕೆ ಮಾಡಿಕೊಳ್ಳುತ್ತಿರುವುದೇ ಇದಕ್ಕೆ ನಿದರ್ಶನ.

ಕುರುಬ ಸಮಾಜಕ್ಕೊಂದು ಗುರು ಪೀಠದ ಅವಶ್ಯಕತೆಯನ್ನು ಮನಗಂಡ ಮಲ್ಲಪ್ಪ ಅವರು, ಸಿದ್ದರಾಮಯ್ಯ, ಹೆಚ್. ವಿಶ್ವನಾಥ್, ರೇವಣ್ಣ ಮತ್ತಿತರ ಮುಖಂಡರುಗಳೊಂದಿಗೆ ಸೇರಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿ, ಕನಕ ದಾಸರ ಸಾಹಿತ್ಯ, ಸಾಂಸ್ಕೃತಿಕ ಧಾರ್ಮಿಕ ನೆಲೆ, ಕಾಗಿನೆಲೆಯಲ್ಲಿ ಗುರು ಪೀಠ ಸ್ಥಾಪಿಸುವಲ್ಲಿ ನೆಡಿಸಿದ ಅವಿರತ ಹೋರಾಟ ಸ್ಮರಣೀಯ.

ಗುರುಪೀಠದ ಸ್ಥಾಪನೆಗಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸಮಾಜದ ಸಂಘಟನೆ ಮಾಡಿದವರಲ್ಲೊಬ್ಬರಾಗಿದ್ದ ಮಲ್ಲಪ್ಪ, ನಾಲ್ಕು ಕಂದಾಯ ವಿಭಾಗಗಳಲ್ಲಿ ಶಾಖಾ ಮಠಗಳನ್ನು ಸ್ಥಾಪಿಸುವುದಲ್ಲದೇ ಸ್ವಾಮೀಜಿಗಳನ್ನು ಆಯ್ಕೆ ಮಾಡುವುದರಲ್ಲಿಯೂ ಶ್ರಮಿಸಿದ್ದಾರೆ.

error: Content is protected !!