ದಾವಣಗೆರೆ, ಜು. 8- ಮಹಾನಗರ ಪಾಲಿಕೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಅನುದಾನ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂಬ ಕಾಂಗ್ರೆಸ್ ಸದಸ್ಯರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಸುಳ್ಳು ಹೇಳಿಕೆ ಮೂಲಕ ವಿಪಕ್ಷ ನಾಯಕ ಎ.ನಾಗರಾಜ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಹೇಳಿದರು.
ತಮ್ಮ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರ ಆರೋಪಗಳಿಗೆ ಸ್ಪಷ್ಟನೆ ನೀಡಿದ ಅವರು, ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಬಿಡುಗಡೆ ಯಾಗಿದ್ದ 1,017 ಕೋಟಿ ರೂ.ಗಳಲ್ಲಿ ಅಂದಾಜು 600 ಕೋಟಿ ರೂ.ಗಳ ಅನುದಾನವನ್ನು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್‍ಗಳಿಗೆ ಮಾತ್ರ ನೀಡಲಾಗಿತ್ತು. ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಅಷ್ಟಾಗಿ ಅಭಿವೃದ್ಧಿ ಕಾಮಗಾರಿಗಳು ನಡೆದಿರಲಿಲ್ಲ. ಆದ್ದರಿಂದ ಉತ್ತರ ಕ್ಷೇತ್ರದ ವಾರ್ಡ್‍ಗಳಿಗೆ ಸ್ವಲ್ಪ ಹೆಚ್ಚು ಅನುದಾನ ಮೀಸಲಿರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸಿರುವ 43ನೇ ವಾರ್ಡ್‍ಗೆ 2.5 ಕೋಟಿ, 35ನೇ ವಾರ್ಡ್‍ಗೆ 2 ಕೋಟಿ, 37ನೇ ವಾರ್ಡ್‍ಗೆ 2.5 ಕೋಟಿ, 22ನೇ ವಾರ್ಡ್‍ಗೆ 1 ಕೋಟಿ, 28ನೇ ವಾರ್ಡ್‍ಗೆ 2.7. ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, ವಿಪಕ್ಷ ನಾಯಕರು ಇದೆಲ್ಲವನ್ನೂ ಮರೆಮಾಚಿ ಕಾಂಗ್ರೆಸ್ ಸದಸ್ಯರ ವಾರ್ಡ್‍ಗಳಿಗೆ ಕೇವಲ ಲಕ್ಷ ರೂ.ಗಳಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಿರುವುದು ಹಾಸ್ಯಾಸ್ಪದ ಎಂದರು.
ಶಾಸಕ ರವೀಂದ್ರನಾಥ್ ಅವರ ಪುತ್ರಿ ವೀಣಾ ನಂಜಯ್ಯ ಪ್ರತಿನಿಧಿಸಿರುವ ವಾರ್ಡ್‍ಗೆ 4 ಕೋಟಿ ರೂ.ಗಳಿಗೆ ಹೆಚ್ಚು ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ, ಇದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಸದಸ್ಯ ಜೆ.ಡಿ.ಪ್ರಕಾಶ್ ಪ್ರತಿನಿಧಿಸಿರುವ 1ನೇ ವಾರ್ಡ್‍ಗೆ 5.5. ಕೋಟಿ ರೂ. ಅನುದಾನ ನೀಡಿದ್ದೇವೆ. ಇದನ್ನೇಕೆ ಅವರು ಬಹಿರಂಗ ಪಡಿಸಿಲ್ಲ? ಎಂದು ಪ್ರಶ್ನಿಸಿದರು.
ಗಂಟು ಹೊಡೆಯುವುದರಲ್ಲಿ ಅನನುಭವಿಗಳು: ಅಜಯ್
ನಮಗೆ ಗುತ್ತಿಗೆದಾರರ ಬಳಿ ಕಮಿಷನ್ ತಿನ್ನುವುದರಲ್ಲಿ, ಅಧಿಕಾರಿಗಳನ್ನು ಹೆದರಿಸಿ ಹಣ ಮಾಡುವುದರಲ್ಲಿ, ಗಂಟು ಮಾಡುವುದರಲ್ಲಿ ನಮಗೆ ಅನುಭವದ ಕೊರತೆ ಇದೆ ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ಹೇಳಿದರು. ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಅನುಭವದ ಕೊರತೆ ಇದೆ ಎಂದು ಕಾಂಗ್ರೆಸ್ ಸದಸ್ಯರ ಆರೋಪಕ್ಕೆ ಮೇಯರ್ ಅಜಯ್ ಮೇಲಿನಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹೊರ ವಲಯದ ಬಡಾವಣೆಗಳಲ್ಲಿನ ಅಭಿವೃದ್ಧಿಯ ಅನಿವಾರ್ಯತೆಗಾಗಿ ಹೆಚ್ಚಿನ ಅನುದಾನ ನೀಡಿದ್ದೇವೆಯೇ ಹೊರತು, ಇದರಲ್ಲಿ ಪಕ್ಷದ ಲೆಕ್ಕಚಾರ ಇಲ್ಲವೇ ಇಲ್ಲ ಎಂದರು.
ನಗರ ಹಾಗೂ ಪಟ್ಟಣ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ 125 ಕೋಟಿ ರೂ. ಅನುದಾನದಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ತಯಾರಿಸಿದ್ದೇವೆಯೇ ಹೊರತು, ಆ ಪಕ್ಷ ಈ ಪಕ್ಷ ಎಂಬುದಾಗಿ ಭೇದಭಾವ ಮಾಡಿಲ್ಲ. ಹೊಸ ಬಡಾವಣೆಗಳಿಗೆ ಅಭಿವೃದ್ಧಿಯ ಅನಿವಾರ್ಯತೆಯ ದೃಷ್ಟಿಯಿಂದ ಹೆಚ್ಚಿನ ಅನುದಾನ ಸಿಕ್ಕಿದೆ ಎಂದು ಹೇಳಿದರು
ಕುಡಿಯುವ ನೀರಿನ ಸಲುವಾಗಿ ನೀರು ಸರಬರಾಜು ಕೇಂದ್ರಗಳಿಗೆ ಹೋಗಿ ಸೆಲ್ಫಿ ತೆಗೆಸಿಕೊಂಡು ಪತ್ರಿಕಾಗೋಷ್ಠಿ ನಡೆಸಿದರು. ಅವರಿಗೆ ನಿಜವಾದ ಜನಪರ ಕಾಳಜಿ ಇದ್ದರೆ ಪಾಲಿಕೆ ಕಚೇರಿಗೆ ಬಂದು ಸಮಸ್ಯೆ ಹಾಗೂ ಅವುಗಳಗೆ ಪರಿಹಾರ ಸೂಚಿಸಬಹುದಿತ್ತು. ಆದರೆ ಅವರಿಗೆ ಅಧಿಕಾರದ ದಾಹ, ಪ್ರಚಾರದ ದಾಹವಿದೆ. ಅಧಿಕಾರ ಇಲ್ಲದಿದ್ದಾಗ ಮಾನಸಿಕವಾಗಿ ವಿಚಲಿತರಾಗುತ್ತಾರೆ. ಅದಕ್ಕಾಗಿ ಇಂತಹ ಚಟುವಟಿಕೆ ಮಾಡುತ್ತಾರೆ ಎಂದು ಕುಟುಕಿದರು.
ಶಾಮನೂರು ನಾಗರಾಜ್ ವಾರ್ಡ್‌ಗೆ 2.50 ಕೋಟಿ ರೂ. ನೀಡಲಾಗಿದೆ. ದೇವರಮನೆ ಶಿವಕುಮಾರ್ ಅವರ ವಾರ್ಡ್‌ಗೆ 1 ಕೋಟಿ ನೀಡಲಾಗಿದೆ. ಅದನ್ನು ಅವರೇಕೆ ಮುಚ್ಚಿಟ್ಟರು ಎಂದು ಲೆಕ್ಕ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪ್ರಸನ್ನ ಕುಮಾರ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಸೌಮ್ಯ ನರೇಂದ್ರ, ಪಾಲಿಕೆ ಸದಸ್ಯರಾದ ಎಲ್.ಡಿ.ಗೋಣೆಪ್ಪ, ಕೆ.ಎಂ.ವೀರೇಶ್, ಸೋಗಿ ಶಾಂತಕುಮಾರ್, ಜಯಮ್ಮ ಗೋಪಿ ನಾಯ್ಕ ಮತ್ತಿತರರು ಹಾಜರಿದ್ದರು.