ದಾವಣಗೆರೆ, ಜು. 8- ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರವೇ ಶಿಷ್ಯ ವೇತನ ನೀಡಬೇಕು, ನಮ್ಮಿಂದ ಕೊಡಲಾಗದು ಎಂದು ಜೆ.ಜೆ.ಎಂ. ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಗೌರವ ಕಾರ್ಯದರ್ಶಿಗಳೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ.
16 ತಿಂಗಳಿನಿಂದ ಬಾಕಿ ಇರುವ ಶಿಷ್ಯ ವೇತನ ನೀಡುವಂತೆ ಆಗ್ರಹಿಸಿ ಕಳೆದ ಹತ್ತು ದಿನಗಳಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಬುಧವಾರ ಕಾಲ್ನಡಿಗೆ ಜಾಥಾ ಮೂಲಕ ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ರಾಂಕ್ ಪಡೆದ ವಿದ್ಯಾರ್ಥಿಗಳನ್ನೇ ಸರ್ಕಾರ ಆಯ್ಕೆ ಮಾಡಿಕೊಂಡಿರುತ್ತದೆ. ಆದ್ದರಿಂದ ಅವರಿಗೆ ಸರ್ಕಾರವೇ ಶಿಷ್ಯ ವೇತನ ನೀಡಬೇಕು ಎಂದು ಹೇಳಿದರು.
ಆಸ್ಪತ್ರೆಯಲ್ಲಿ ನಮ್ಮ ಕಾಲೇಜಿನ 80 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ 1 ಕೋಟಿ ವೇತನವನ್ನೂ ನಾವೇ ನೀಡಬೇಕಿದೆ. ವೈದ್ಯಕೀಯ ಸೌಲಭ್ಯಗಳಿಗೂ ನಾವೇ 2 ಕೋಟಿ ರೂ. ನೀಡುತ್ತಿದ್ದೇವೆ ಎಂದರು.
ಮೊದಲು ಸರ್ಕಾರವೇ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿತ್ತು. ಆದರೆ 2016ರ ವೇಳೆಗೆ ಆಂತರಿಕ ಲೆಕ್ಕ ತಪಾಸಣೆಯಲ್ಲಿ ಆಕ್ಷೇಪಣೆ ಮಾಡಲಾಗಿದೆಯಂತೆ. ಆದರೂ 2019ರವರೆಗೂ ಶಿಷ್ಯ ವೇತನ ನೀಡಿ, ಈಗ ಕೊಡಲಾಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಸರ್ಕಾರದೊಂದಿಗೆ ವಿವರವಾಗಿ ಮಾತನಾಡಿದ್ದೇನೆ. ನೀವೇ ಕೊಡಬೇಕು ಎಂದು ಹೇಳಿದ್ದೇನೆ. ಮತ್ತೆ ಚರ್ಚೆಗೆ ಕರೆದರೆ ಹೋಗುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಹೇಳಿದರು.
ಇದೇ ವೇಳೆ ಶಿಷ್ಯ ವೇತನ ಸಿಗುವವರೆಗೂ ಸರ್ಕಾರದ ವಿರುದ್ಧ ಹೋರಾಟ ನಡೆಸುವಂತೆ ಎಸ್ಸೆಸ್ ಹೇಳಿದ್ದಾರೆ. ಇತ್ತ ವಿದ್ಯಾರ್ಥಿಗಳೂ ಸಹ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದಾರೆ.