ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ
ದಾವಣಗೆರೆ, ಜು.8- ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಿ, ಇಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಏರ್ಪಾಡಾಗಿದ್ದ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ಬಗ್ಗೆ ರೈತರಿಂದ ಎಲ್ಲಿಯೂ ಕೂಡ ದೂರು ಬರಬಾರದು. ಒಂದು ವೇಳೆ ದೂರು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಗಳೂರಿನಲ್ಲಿ ಕಳಪೆ ಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂಬುದರ ಬಗ್ಗೆ ರೈತರಿಂದ ದೂರುಗಳಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಮಳೆ ಬಂದು ಬೀಜ ಕಪ್ಪಾಗಿದ್ದವು. ಆದರೆ, ಅವು ಕಳಪೆ ಆಗಿರಲಿಲ್ಲ. ರೈತರಿಗೆ ವಿತರಿಸಿದ ಬೀಜಗಳನ್ನು ಹಿಂಪಡೆದು ಬೇರೆ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲ ಸಹಾಯಕ ಕೃಷಿ ಅಧಿಕಾರಿಗಳಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜದ ಬಗ್ಗೆ ನಿಗಾವಹಿಸಲು ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.
ಹರಿಹರ, ಮಲೇಬೆನ್ನೂರು ಭಾಗಗಳಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್ಡೌನ್ ಮಾಡಿಕೊಳ್ಳಲಾಗಿದೆ. ನಾವು ಯಾವುದೇ ಆದೇಶ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಆ ಭಾಗದ ತಹಶೀಲ್ದಾರ್ ಗಮನಕ್ಕೆ ತಂದು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕೃಷಿಗೆ ಸಂಬಂಧಪಟ್ಟಂತಹ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳ ಅಂಗಡಿಗಳು ಸಂಜೆಯವರೆಗೆ ತೆರೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಬಿಮಾ (ವಿಮಾ) ಯೋಜನೆ ಹಾಗೂ ಬೆಳೆ ವಿಮಾ ಯೋಜನೆಯನ್ನು ಜಾರಿಗೊಳಿ ಸಿದೆ. ಇದನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ, ತೋಟಗಾರಿಕೆ, ಲೀಡ್ ಬ್ಯಾಂಕ್ ಅಧಿಕಾರಿಗಳು ಮತ್ತು ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಫಸಲು ಬಿಮಾ ಯೋಜನೆ ವ್ಯಾಪ್ತಿಗೆ ಭತ್ತ ಮತ್ತು ಮುಸುಕಿನ ಜೋಳ ಒಳಪಟ್ಟಿದ್ದು, ವಿಮಾ ಕಂತು ಪಾವತಿಸಲು ಜು. 30 ಕೊನೆಯ ದಿನವಾಗಿದೆ ಎಂದರು. ಜಿಲ್ಲೆಯಲ್ಲಿ ಹೆಚ್ಚು ಬೆಳೆ ವಿಮೆ ಮಾಡಿಸಲು ಅಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪಕರು ಸಹಕರಿಸಬೇಕು. ಜೊತೆಗೆ ಬೆಳೆ ವಿಮೆ ಮಾಡಿಸಲು ಕೊನೆಯ ದಿನದವರೆಗೂ ರೈತರು ಕಾಯಬಾರದು. ಇಂದಿನಿಂದಲೇ ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ ಮಾಡಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಬೆಳೆ ನೋಂದಣಿ ಸಮರ್ಪಕವಾಗಿ ಆಗುತ್ತಿಲ್ಲ. ಹೊನ್ನಾಳಿ-ಜಗಳೂರು ಭಾಗಗಳಲ್ಲಿ ಕ್ರಾಪ್ ಎಂಟ್ರಿ ಸರಿಯಾಗಿ ಆಗುತ್ತಿಲ್ಲ. ಇದರಲ್ಲಿ ಲೋಪ ಕಂಡುಬಂದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ನೇರವಾಗಿ ಹೊಣೆಗಾರರಾಗುತ್ತಾರೆ. ಜೊತೆಗೆ ಬ್ಯಾಂಕ್ಗಳಲ್ಲಿ ಬೆಳೆ ವಿಮೆಗೆ ಸಂಬಂಧಪಟ್ಟಂತೆ ಬಹಳಷ್ಟು ಅಡಚಣೆಗಳಿವೆ ಎಂಬುದರ ಬಗ್ಗೆ ದೂರುಗಳಿವೆ. ಸಾಲ ರಹಿತ ಫಲಾನುಭವಿಗಳು ಬಂದಾಗ ಯಾರನ್ನು ಕೂಡ ವಾಪಸ್ಸು ಕಳುಹಿಸಬಾರದು. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ (ವಿಮಾ) ಯೋಜನೆ ಪ್ರಚಾರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚಾಲನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್ ಮತ್ತಿತರರು ಹಾಜರಿದ್ದರು.