ಶ್ರೀಶೈಲ ಮಠದಲ್ಲಿನ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳ ಪ್ರತಿಪಾದನೆ
ದಾವಣಗೆರೆ,ಜು.7- ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ, ಶ್ರದ್ಧೆ ಇಲ್ಲದವನಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಶ್ರೀ ಪಂಚಾಚಾರ್ಯ ಮಂದಿರ ಧರ್ಮ ಸಂಸ್ಥೆ ಹಾಗೂ ಲಿಂ. ವಾಗೀಶ ಪಂಡಿ ತಾರಾಧ್ಯ ಪುಣ್ಯಾರಾಧನೆ ಸೇವಾ ಸಮಿತಿ ವತಿಯಿಂದ ಸ್ಥಳೀಯ ಶ್ರೀಶೈಲ ಮಠದಲ್ಲಿ ಮೊನ್ನೆ ಏರ್ಪಡಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ನಾವು ಗುರುವಿನ ಮುಖಾಂತರವೇ ಪರಮಾತ್ಮನ ಅರಿವು ಅರಿಯಬೇಕಾಗಿರುವುದರಿಂದ ನಾವು ಗುರುವನ್ನು `ಆಷಾಢ ಪೌರ್ಣಿಮೆ’ಯಂದು ಮಾತ್ರ ಪೂಜಿಸದೆ ಅನುದಿನ, ಅನುಕ್ಷಣ ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ ಎಂದು ಶ್ರೀಗಳು ಹೇಳಿದರು.
ಆಷಾಢ ಮಾಸದ ಹುಣ್ಣಿಮೆಯ ದಿನ ಆಚರಿಸಲ್ಪಡುವ ಶ್ರೇಷ್ಟವಾದ ಅವಿಸ್ಮರಣೀಯ ಹಬ್ಬ – `ಗುರು ಪೂರ್ಣಿಮೆ’. ಗುರುಗಳಿಗೆ ವಂದನೆಯನ್ನು, ಗುರುವಿನ ಮಹತ್ವವನ್ನು ಸಾರುವ ಸುದಿನ. ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ ಗುರು. ನಮಗೆ ಜೀವನದಲ್ಲಿ ಸರಿಯಾದ ದಿಕ್ಕನ್ನು ಸೂಚಿಸಿ, ಕೈ ಹಿಡಿದು ನಡೆಸುವ ಶಕ್ತಿ ಗುರು ಎಂದು ಶ್ರೀಗಳು ವಿಶ್ಲೇಷಿಸಿದರು.
ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೆ `ಗುರು ಪೂರ್ಣಿಮೆ’ಯಂದು ಪೂಜಿಸುತ್ತೇವೆ. ಈ ದಿನವನ್ನು `ವ್ಯಾಸ ಪೂರ್ಣಿಮೆ’ ಎಂದೂ ಕರೆಯಬಹುದಾಗಿದೆ. ಕಾರಣ ವೇದಗಳನ್ನು 4 ವಿಭಾಗಗಳಾಗಿ ವಿಂಗಡಿಸಿದವರು, ವೇದಗಳ ರಹಸ್ಯ ಸಾಮಾನ್ಯರೂ ಅರಿಯು ವಂತಾಗಬೇಕೆಂದು `ಮಹಾಭಾರತ’ವೆಂಬ ಲಕ್ಷ್ಯ ಶ್ಲೋಕಗಳಿರುವ `ಪಂಚಮ ವೇದ’ವನ್ನು ರಚಿಸಿದವರು. ಭಾಗವತ, 18 ಪುರಾಣಗಳು ಹಾಗೂ ಬ್ರಹ್ಮ ಸೂತ್ರಗಳನ್ನು ರಚಿಸಿ, `ಲೋಕ ಗುರು’, `ಪರಮ ಗುರು’ ಎಂದೇ ಜನ ಮಾನಸದಲ್ಲಿ ಸ್ಥಾನ ಪಡೆದವರು ವ್ಯಾಸರು.
ಬ್ರಹ್ಮಸೂತ್ರ, ಉಪನಿಷತ್ ಹಾಗೂ ಭಗವದ್ಗೀತೆಯನ್ನು ಅನುಗೂಡಿಸಿ, ವೀರಶೈವ ಧರ್ಮದನುಸಾರ ಹೊಸ ಭಾಷ್ಯವನ್ನು ಬರೆದವರು ಶ್ರೀಶೈಲ ಪೀಠದ 4ನೇ (ಕ್ರಿ.ಶ.10ನೇ ಶತಮಾನ) ಪೀಠಾಧಿಪತಿಗಳಾಗಿದ್ದ `ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು. ಈ ನಿಟ್ಟಿನಲ್ಲಿ ಈ ದಿನದಂದು `ಶ್ರೀಪತಿ ಪಂಡಿತಾರಾಧ್ಯರ ಜಯಂತಿ’ಯನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪನಿಷತ್ತಿನ ಪ್ರಕಾರ `ಗು’ ಎಂದರೆ, ಅಂಧಕಾರವೆಂದೂ `ರು’ ಎಂದರೆ ದೂರೀಕರಿಸುವವ ಎಂಬ ಅರ್ಥವಾಗುತ್ತದೆ. ಅಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ `ಗುರು’. ಅಪೂರ್ಣವಾದ ಶಿಷ್ಯನಿಗೆ ಜ್ಞಾನೋಪದೇಶ ಹಾಗೂ ಮಾರ್ಗದರ್ಶನದ ಮೂಲಕ ಪೂರ್ಣಗೊಳಿಸುವ ಶಕ್ತಿಯೇ `ಗುರು’. ಯಾರಿಗೆ `ಶಿಷ್ಯ’ನಾಗಲು ಆಗುವುದಿಲ್ಲವೋ, ಅಂತವನಿಗೆ `ಗುರು’ವಾಗಲೂ ಸಾಧ್ಯವಾಗುವುದಿಲ್ಲ ಎಂದು ಜಗದ್ಗುರುಗಳು ಉದಾಹರಣೆಯೊಂದಿಗೆ ತಿಳಿಸಿದರು.
ಸ್ಕಂದ ಪುರಾಣದ `ಗುರು ಗೀತೆ’ಯಲ್ಲಿ ಗುರುವನ್ನು ನಂದಾದೀಪದಂತೆ, ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಮಹಿಮೆಯನ್ನು ವಿಸ್ತಾರವಾಗಿ ವಿವರಿಸಿದ್ದಾರೆ. ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ವವೇ ಆಗಿದ್ದಾರೆ ಎಂದು ಶಂಕರಾಚಾರ್ಯರು ಗುರುವಿನ ಹಿರಿಮೆಯನ್ನು ಸಾರಿದ್ದಾರೆ. ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ತಮ್ಮ `ಗುರ್ವಷ್ಟಕಮ್’ ನಲ್ಲಿ ಶ್ರೀ ಶಂಕರಾಚಾರ್ಯರು ಅರ್ಥೈಸಿದ್ದಾರೆ ಎಂದು ಸ್ವಾಮೀಜಿ ವಿವರಿಸಿದರು.
ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಎಸ್. ಜಿ. ವಾಗೀಶ್ವರಯ್ಯ, ಕೆ.ಎಂ. ಪರಮೇಶ್ವರಯ್ಯ, ಎಸ್.ಜಿ. ಉಳುವಯ್ಯ, ಎನ್.ಎಂ. ಹರೀಶ್, ಕೆ.ಎಂ. ಬಸವರಾಜ್, ಎ.ಬಿ. ಗುರುರಾಜ್, ಶ್ರೀಮತಿ ವೀಣಾ ಗುರುರಾಜ್, ಬಿ.ಎಂ.ಸಿದ್ದೇಶ್, ಶ್ರೀಮತಿ ಎಸ್. ಶ್ರೇಯ, ಬನ್ನಯ್ಯ ಸ್ವಾಮಿ, ಎಂ.ಎಸ್. ನಾಗರಾಜಯ್ಯ, ವಿಶ್ವನಾಥ ಹಿರೇಮಠ, ಸಿದ್ದಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರುದ್ರಾಭಿಷೇಕ : ಗುರು ಪೂರ್ಣಿಮೆ ಪ್ರಯುಕ್ತ ಶ್ರೀಶೈಲ ಪೀಠದ ಲಿಂ. ಜಗದ್ಗುರು ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಲಿಂ. ಜಗದ್ಗುರು ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಕರ್ತೃ ಗದ್ದುಗೆ ಹಾಗೂ ಆದಿ ಜಗದ್ಗುರು ಪಂಚಾಚಾರ್ಯರ ಶಿಲಾ ಮೂರ್ತಿಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.