ಮನಿಷಾಳನ್ನು ಸುಟ್ಟ ಜಾಗದಿಂದ ಒಂದಿಡಿ ಮಣ್ಣು, ಭಸ್ಮ ತಂದು ಸ್ಮಾರಕ ನಿರ್ಮಿಸೋಣ : ಡಾ. ವೈ. ರಾಮಪ್ಪ

ಮನಿಷಾಳನ್ನು ಸುಟ್ಟ ಜಾಗದಿಂದ ಒಂದಿಡಿ ಮಣ್ಣು, ಭಸ್ಮ ತಂದು ಸ್ಮಾರಕ ನಿರ್ಮಿಸೋಣ : ಡಾ. ವೈ. ರಾಮಪ್ಪ - Janathavaniದಾವಣಗೆರೆ,ಅ.11- ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಮನಿಷಾಳ ತಾಯಿಯ ಕೊನೆಯ ಆಸೆ, ಆಕೆಯ ಕೆನ್ನೆಗೆ ಅರಿಶಿನ ಹಚ್ಚಿ ಅಂತ್ಯಸಂಸ್ಕಾರ ಮಾಡುವುದಾಗಿತ್ತು. ಆದರೆ, ಅದು ನಡೆಯಲಿಲ್ಲ. ನಾವು ಆಕೆಯ ಪ್ರತಿಮೆ ನಿರ್ಮಿಸಿ, ಅದಕ್ಕೆ ಅರಿಶಿನ ಹಚ್ಚಿದರೆ ಆಕೆಗೆ ಮರಣೋತ್ತರ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಅಭಿಪ್ರಾಯಪಟ್ಟರು.

ಹತ್ರಾಸ್‌ನ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ, ಜಿಲ್ಲಾ ವಾಲ್ಮೀಕಿ ಸಮಾಜ, ಭೋವಿ ಸಮಾಜ, ಎಸ್ಸಿ-ಎಸ್ಟಿ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾನವ ಸೌಹಾರ್ದ ಒಕ್ಕೂಟದ ವತಿಯಿಂದ ನಿನ್ನೆ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. 

ನಮ್ಮ ನ್ಯಾಯ ವಿತರಣಾ ಪದ್ಧತಿಯನ್ನು ಇಂದಿನ ಕಾನೂನು ವ್ಯವಸ್ಥೆ, ನ್ಯಾಯಾಂಗ ವಿತರಣೆ ವ್ಯವಸ್ಥೆ ಹೆಚ್ಚೂ ಕಮ್ಮಿ ಪುರಾ ತನ ಕಾಲದ ಅನ್ಯಾಯದ `ಮನು ಧರ್ಮ ಶಾಸ್ತ್ರ’ದ ಜಾತಿ ಅಂತಸ್ಥಿಗೆ ತಕ್ಕಂತೆ ಶಿಕ್ಷೆ ಎಂಬಂತಿದೆ. ಭಾರತ ಯಾವ ಕಡೆಗೆ ಚಲಿಸುತ್ತಿದೆ? ಹಿಂದಕ್ಕೋ? ಮುಂದಕ್ಕೋ? ಇಂದು ನಮ್ಮ ಕಾನೂನು ವ್ಯವಸ್ಥೆ ಹಾಗೂ ನಮ್ಮ ನ್ಯಾಯ ವಿತರಣಾ ವ್ಯವಸ್ಥೆಗಳು-ನ್ಯಾಯದ ಮುಂದೆ ಅಪರಾಧಿಗಳಾಗಿ ಕಟಕಟೆಯಲ್ಲಿ ನಿಂತಿವೆ. ಭಾರತ ದಿಕ್ಕು ತಪ್ಪುತ್ತಿದೆ ಎಂದು ರಾಮಪ್ಪ ಆತಂಕ ವ್ಯಕ್ತಪಡಿಸಿದರು.

ಪ್ರಕರಣದ ಆರೋಪಿಗಳು `ಬಿಂಬಿಸಿರುವಷ್ಟು ತಪ್ಪಿತಸ್ಥರಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ ನಾಚಿಕೆಯಾಗಬೇಕು. ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಲೇಬೇಕು ಎಂದು ಅವರು ಒತ್ತಾಯಿಸಿದರು. 

ಮನಿಷಾಳನ್ನು ಎಲ್ಲಿ ಸುಟ್ಟರೋ ಅಲ್ಲಿಂದ ಅಥವಾ ಅವಳು ನಡೆದಾಡಿದ ಭೂಮಿಯಿಂದ ಒಂದು ಹಿಡಿ ಮಣ್ಣನ್ನು ತಂದು ನಾವು ದಾವಣಗೆರೆ ಜಿಲ್ಲೆಯಲ್ಲಿ ಒಂದು ಸ್ಮಾರಕ ನಿರ್ಮಿಸಿ, ಅವಳ ಹೆತ್ತ ತಾಯಿಯ ಈಡೇರದ ಕೊನೆಯಾಸೆಯನ್ನು, ಮನಿಷಾಳ ಪ್ರತಿಮೆಯ ಕೆನ್ನೆಗಳಿಗೆ ನಾವೆಲ್ಲರೂ ಅರಿಶಿನ ಹಚ್ಚುವಂತಾದರೆ ಮನಿಷಾಳಿಗೆ ಮರಣೋತ್ತರ ಗೌರವ ಸಲ್ಲಿಸಿದಂತಾಗುತ್ತದೆ. ಇದರಿಂದ ಮನೀಷಾಳ ಹೆತ್ತವರಿಗೆ ಹಾಗೂ ತಾಯಿ ಭಾರತ ಮಾತೆಗೆ ಕಿಂಚಿತ್ತಾದರೂ ಸಮಾಧಾನವಾಗಬಹುದು ಎಂದು ಹೇಳಿದ ಅವರು, ಭಾರತದ ಪ್ರತಿಯೊಬ್ಬ ಪ್ರಜ್ಞಾವಂತರು ಧ್ವನಿಗೂಡಿಸಿ ಹೋರಾಟಕ್ಕೆ  ಮುಂದಾಗಬೇಕು ಎಂದು ಕೇಳಿಕೊಂಡರು. 

ಬಲಪಂಥೀಯರು ನಡೆಸುವ ಸರ್ಕಾರದಲ್ಲಿ ನ್ಯಾಯ ಸಿಗುವ ಬಗ್ಗೆ ವಿಶ್ವಾಸ ಇಲ್ಲ. ಆದರೆ, ಹತ್ರಾಸ್ ನೆಲದಿಂದ ಮಣ್ಣು ತರಲಿಕ್ಕೆ ಸಿದ್ದರಾಗಿ ಎಂದು ರಾಮಪ್ಪ ಕರೆ ನೀಡಿದರು.

error: Content is protected !!