ಜೆಡಿಎಸ್ ಮುಖಂಡ ಹೆಚ್.ಎಸ್. ಶಿವಶಂಕರ್ ವಿಶ್ವಾಸ
ದಾವಣಗೆರೆ, ಅ.11- ಇದೇ ದಿನಾಂಕ 28ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ಚೌಡರೆಡ್ಡಿ ತೂಪಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳು ಮತ್ತು ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಪಡೆದು ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಜೆಡಿಎಸ್ ಮುಖಂಡರೂ ಆದ ಹರಿಹರ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
5 ಲೋಕಸಭಾ ಕ್ಷೇತ್ರಗಳು ಮತ್ತು 32 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 1.10 ಲಕ್ಷ ಮತದಾರರಿದ್ದಾರೆ. ಈ ಚುನಾವಣೆಯಲ್ಲಿ ಕೊರೊನಾ ಪರಿಸ್ಥಿತಿಯಲ್ಲಿ ಶೇ.50ರಷ್ಟು ಮತದಾನವಾದರೂ ಚೌಡರೆಡ್ಡಿ ತೂಪಲ್ಲಿ ಜಯಶೀಲರಾಗಿ ಹೊರಹೊಮ್ಮಲಿದ್ದಾರೆ ಎಂದು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ನಮ್ಮಲ್ಲಿಯೇ ಇದ್ದ ರಮೇಶ್ ಬಾಬು ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಆ ಪಕ್ಷದಿಂದ ಅಖಾಡಕ್ಕೆ ಇಳಿದಿದ್ದಾರೆ. ರಮೇಶ್ ಬಾಬು ಮತ್ತು ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಚಿದಾನಂದ ಎಂ. ಗೌಡ ಇವರಿಬ್ಬರೂ ತುಮಕೂರು ಜಿಲ್ಲೆಯವರಾಗಿದ್ದು, ಆ ಜಿಲ್ಲೆಯ ಮತಗಳನ್ನು ಹಂಚಿಕೊಳ್ಳಬಹುದಷ್ಟೆ. ಆದರೆ, ಕೋಲಾರ ಜಿಲ್ಲೆಯವರಾದ ಚೌಡ ರೆಡ್ಡಿ ಅವರಿಗೆ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
6 ವರ್ಷಗಳ ಕಾಲ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಚೌಡರೆಡ್ಡಿ ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಅಲ್ಲದೇ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರವು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದೆ. ಹೀಗಾಗಿ ಈ ಕ್ಷೇತ್ರದ ಪದವೀಧರರು, ಶಿಕ್ಷಕರು ಚೌಡ ರೆಡ್ಡಿ ಅವರನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಮಾತನಾಡಿ, ಕ್ಷೇತ್ರದ ಶಿಕ್ಷಕರು ಮತ್ತು ಪದವೀಧರರ ಸಮಸ್ಯೆ ಬಗೆಹರಿಸಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ. ನಾನು ಶಿಕ್ಷಕರ ಮತ್ತು ಪದವೀಧರರ ಧ್ವನಿಯಾಗಿ ವಿಧಾನ ಪರಿಷತ್‍ನಲ್ಲಿ ಕೆಲಸ ಮಾಡಿರುವುದು ಮತ್ತು ಕುಮಾರಣ್ಣ ಅವರ ನೇತೃತ್ವದ ಸಾಧನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಮಾನುಲ್ಲಾ ಖಾನ್, ಗಣೇಶ್ ದಾಸಕರಿಯಪ್ಪ, ಎ.ಕೆ. ನಾಗಪ್ಪ, ಶೀಲಾ ಕುಮಾರ್, ಧನಂಜಯ, ಅನೀಫ್ ಸೇರಿದಂತೆ ಇತರರು ಇದ್ದರು.