ನಗರದಲ್ಲಿ ವೃತ್ತಗಳ ಅಭಿವೃದ್ಧಿ ಮುಂದುವರೆದ ತೆರವು

ದಾವಣಗೆರೆ, ಅ.9- ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಸೌಂದರ್ಯೀಕರಣದ ಉದ್ದೇಶದಿಂದ ವೃತ್ತದ ಅಭಿವೃದ್ಧಿ ಹಿನ್ನೆಲೆಯಲ್ಲಿ ನಗರದ ಹದಡಿ ರಸ್ತೆಯ ಗ್ರಾಮಾಂತರ ಪೊಲೀಸ್ ಠಾಣಾ ಬಳಿಯ ಕೊಂಡಜ್ಜಿ ಬಸಪ್ಪ ವೃತ್ತದ ಸಮೀಪವಿದ್ದ ಹಣ್ಣಿನ ಗೂಡಂಗಡಿಗಳು, ಶ್ರೀ ಶನೇಶ್ವರ ದೇವಸ್ಥಾನದ ಪಕ್ಕದ ಶೆಡ್‌ಗಳು, ಹೋಟೆಲ್‌ ಗಳನ್ನು ನಗರ ಪಾಲಿಕೆಯಿಂದ ಇಂದು ತೆರವುಗೊಳಿಸಲಾಯಿತು.

2ನೇ ಹಂತದ ಕಾರ್ಯಾಚರಣೆ ಮುಖೇನ ಬೆಳಿಗ್ಗೆಯೇ ದೇವಸ್ಥಾನದ ಹಸುಗಳನ್ನು ಕಟ್ಟುವ ಶೆಡ್, ಪಕ್ಕದಲ್ಲಿನ ಹತ್ತಾರು ಹಣ್ಣಿನ ಅಂಗಡಿಗಳನ್ನು ಜೆಸಿಬಿ ಮೂಲಕ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ನೆಲಸಮಗೊಳಿಸಿದರು. 

ನೋಟೀಸ್ ನೀಡದೆ ಏಕಾಏಕಿ ತೆರವು ಗೊಳಿಸಿದ್ದಾರೆ ಎಂದು ಆರೋಪಿಸಿ ವ್ಯಾಪಾರಿಗಳು, ದೇವಸ್ಥಾನದವರು ತೆರವನ್ನು ವಿರೋಧಿಸಿದರು. 

ಸ್ಮಾ‌ರ್ಟ್ ಸಿಟಿಯ ನಗರ ಸೌಂದರ್ಯೀಕರಣ ಯೋಜನೆಯಡಿ ನಗರದ 5 ವೃತ್ತಗಳನ್ನು ಸ್ಮಾ‌ರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪೈಕಿ ಗ್ರಾಮಾಂತರ ಪೊಲೀಸ್‌ ಠಾಣೆ ವೃತ್ತವೂ ಸೇರಿದೆ. ಹದಡಿ ರಸ್ತೆ ಬಳಿಯ ವೃತ್ತದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳು ಇದ್ದ ಕಾರಣ ವೃತ್ತದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗಿತ್ತು. ಆದ್ದರಿಂದ ಕಳೆದ 2 ತಿಂಗಳ ಹಿಂದಷ್ಟೇ ಮಾಲೀಕರಿಗೆ ಸೂಚಿಸಿದ್ದರೂ ತೆರವಿಗೆ ಮುಂದಾಗದ ಕಾರಣ ಕೆಲ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಸಮಯಾವಕಾಶ ಕೇಳಿದ್ದ ಇನ್ನು ಕೆಲವು ಅಂಗಡಿಗಳು ತೆರವು ಕಾಣದ್ದರಿಂದ ಇಂದು ಪಾಲಿಕೆಯಿಂದ ತೆರವು ಕಾರ್ಯಾಚರಣೆ ಮುಂದುವರೆಸಲಾಯಿತು ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ತಿಳಿಸಿದ್ದಾರೆ.

ದೇವಸ್ಥಾನದ ಪಕ್ಕದ ಜಾಗದಲ್ಲಿ ಪ್ರಸಾದ ನಿಲಯ ಹಾಗೂ ಅನ್ನ ದಾಸೋಹ ಮಾಡಲಾಗುತ್ತಿತ್ತು. ಚಿಕ್ಕ ಗೋಶಾಲೆಯನ್ನೂ ನಿರ್ಮಿಸಲಾಗಿತ್ತು. ದೇವಸ್ಥಾನಕ್ಕೆ ಸೇರಿದ ಈ ಜಾಗವನ್ನು ಪಾಲಿಕೆಗೆ ಸೇರಿದೆ ಎಂದು ಹೇಳಿ ಯಾವುದೇ ಮಾಹಿತಿ ತಿಳಿಸದೇ ಏಕಾಏಕಿ ತೆರವು ಮಾಡಲಾಗಿದೆ ಎಂಬುದಾಗಿ ದೇವಸ್ಥಾನದವರು ತಿಳಿಸಿದ್ದಾರೆ.

error: Content is protected !!