ಶಾಲೆಗಳಲ್ಲೇ ನಡೆಸಿದರೊಳಿತು ವಿದ್ಯಾಗಮ

ಆರ್ಥಿಕತೆ ಹೋಯ್ತು, ಅಕ್ಷರವೂ ಕೈ ತಪ್ಪದಿರಲಿ.
ಹಂತ ಹಂತವಾಗಿ ಶಿಕ್ಷಣವೂ ಆಗಲಿ ಅನ್‌ಲಾಕ್‌

ದಾವಣಗೆರೆ, ಅ. 9 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್‌ಡೌನ್‌ ಘೋಷಿಸಿ ಕೊರೊನಾ ಬಗ್ಗು ಬಡಿಯುವ ವಿಶ್ವಾಸವನ್ನು ಮಾರ್ಚ್ ತಿಂಗಳ ಅಂತ್ಯದಲ್ಲಿ ವ್ಯಕ್ತಪಡಿಸಿದ್ದರು. ಕೊರೊನಾ ಹೋಗಲಿಲ್ಲ, ಆದರೆ ಆರ್ಥಿಕತೆಯಂತೂ ಮಕಾಡೆ ಮಲಗಿತು.

ದೇಶದ ಆರ್ಥಿಕತೆಗೆ ಹಾಕಿದ ಲಾಕ್‌ಗಳೆಲ್ಲ ಈಗ ತೆರವಾಗಿವೆ. ಬಾರ್‌ಗಳಿಂದ ಹಿಡಿದು ಸಿನೆಮಾ ಮಂದಿರಗಳು, ಜಿಮ್‌ಗಳಿಂದ ಹಿಡಿದು ರಾಜಕೀಯ ಸಮಾವೇಶಗಳಿಗೂ ಅನುಮತಿ ದೊರೆತಾಗಿದೆ. ಆದರೆ, ಶಾಲಾ – ಕಾಲೇಜುಗಳಿಗೆ ಅನುಮತಿ ನೀಡಿದರೂ, ಆರಂಭಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ.

 ಶಾಲಾ – ಕಾಲೇಜು ತೆರೆಯಲು ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಏಕೈಕ ಕಾರಣ ಎಂದರೆ, ಶಿಕ್ಷಣ ಸಂಸ್ಥೆಗಳಿಗೆ ಅನಗತ್ಯ §ಕಳಂಕ’ ಬಳಿದಿರುವುದು. ಏಕೆಂದರೆ ವಿದ್ಯಾ ಗಮ ಎಂಬ ಹೆಸರಿನಲ್ಲಿ ಬೋಧನೆ ಹಾದಿ – ಬೀದಿಗಳಲ್ಲಿ ನಡೆಯುತ್ತಿವೆ. ಜನರು ಅಲ್ಲಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಆದರೆ, ಶಾಲೆಗೆ ಮಕ್ಕಳನ್ನು ಕಳಿಸಲು ಮಾತ್ರ ಪೋಷಕರಿಂದಾದಿಯಾಗಿ – ರಾಜಕಾರಣಿಗಳವರೆಗೆ ಎಲ್ಲರ ವಿರೋಧ!

ಮಕ್ಕಳು ಹಾಗೂ ಶಿಕ್ಷಕರನ್ನು ಹಾದಿ ಬೀದಿಗಳಲ್ಲಿ ಒಣಗಿಸುವ ಬದಲು ಲಕ್ಷಣವಾಗಿ ಶಾಲೆಗಳಲ್ಲೇ ವಿದ್ಯಾಗಮ ನಡೆಸಬಹುದಾಗಿದೆ. ಹೇಗಿದ್ದರೂ ಕೇಂದ್ರ ಸರ್ಕಾರ ಶಾಲೆಗಳ ಬೀಗ ತೆರೆಯಲು ಅಕ್ಟೋಬರ್ 15ರಿಂದ ಅನುಮತಿ ನೀಡಿದೆ. ಇದನ್ನು ಮೀರಿಯೂ ಶಾಲೆಗಳ ಬಗ್ಗೆ ಅಲರ್ಜಿ ಇದೆ ಎಂದರೆ, ಕನಿಷ್ಠ ಶಾಲೆಗಳ ಮೈದಾನದಲ್ಲಾದರೂ ವಿದ್ಯಾಗಮ ನಡೆಸಬಹುದು.

ಆರ್ಥಿಕತೆಯನ್ನು ಹಂತ ಹಂತವಾಗಿ ಅನ್‌ಲಾಕ್ ಮಾಡಲಾಯಿತು. ಅದೇ ರೀತಿ ಶಿಕ್ಷಣವೂ ಹಂತ ಹಂತವಾಗಿ ಅನ್‌ಲಾಕ್ ಆಗುವುದೇ ಸೂಕ್ತವಾಗಲಿದೆ. ಒಂದೇ ಬಾರಿಗೆ ದಿನವಿಡೀ ಶಾಲೆ ನಡೆಸುವ ಪರಿಸ್ಥಿತಿ ಇಲ್ಲ. ವಿದ್ಯಾಗಮವು ಶಿಕ್ಷಣವನ್ನು ಮೊದಲ ಹಂತದ ಅನ್‌ಲಾಕ್‌ ಮಾಡಿದೆ.

ಮುಂದಿನ ಹಂತದಲ್ಲಿ ಶಾಲೆಗಳಲ್ಲಿ ವಿದ್ಯಾಗಮ ನಡೆಸಬಹುದಾಗಿದೆ. ಶೌಚಾಲಯ ಇತ್ಯಾದಿಗಳ ಬಳಕೆ ಗೊಡವೆ ಸದ್ಯಕ್ಕೆ ಬೇಡ. ಒಂದರಿಂದ ಹತ್ತನೇ ತರಗತಿಯ ಮಕ್ಕಳು ವಿದ್ಯಾಗಮದ ವೇಳಾಪಟ್ಟಿಯಲ್ಲೇ ಶಾಲೆಗೆ ಬರಲು ಅವಕಾಶ ನೀಡಬೇಕು.

ಇದರಿಂದ ಯಾರ ಆರೋಗ್ಯಕ್ಕೂ ಹಾನಿಯಾಗದು. ಇದರ ಬದಲು ಶೈಕ್ಷಣಿಕ ವೇಳಾಪಟ್ಟಿ ಸುಸೂತ್ರವಾಗುತ್ತದೆ. ಕಲಿಕೆಗೆ ಒಂದಿಷ್ಟು ದಿಕ್ಕು ದೆಸೆ ಬರಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸುಸೂತ್ರವಾದಲ್ಲಿ, ಕಲಿಕೆಯ ಅವಧಿಯನ್ನು ಹೆಚ್ಚಿಸುವ §ಶೈಕ್ಷಣಿಕ ಅನ್‌ಲಾಕ್’ ಕ್ರಮಕ್ಕೆ ಮುಂದಾಗಬಹುದಾಗಿದೆ.

ಆನ್‌ಲೈನ್‌ ಹಾಗೂ ದೂರದರ್ಶನದ ಮೂಲಕ ನೀಡಲಾಗುವ ಶಿಕ್ಷಣವನ್ನು ಈಗಿನಂತೆಯೇ ಮುಂದುವರೆಸಲು ಅವಕಾಶವಿದೆ. ಅದರ ಜೊತೆಗೂಡಿ ನೇರ ಶಿಕ್ಷಣವೂ ವಾರಕ್ಕೆ ಕೆಲ ಗಂಟೆಗಳಾದರೂ ಸಿಕ್ಕರೆ ಮಕ್ಕಳ ಭವಿಷ್ಯ ಒಂದು ದಿಕ್ಕಿಗೆ ಬರಲಿದೆ.

ಹಾದಿ – ಬೀದಿ, ಗುಡಿ-ಗುಂಡಾರಗಳಲ್ಲಿ ವಿದ್ಯಾಗಮ ನಡೆಸುವುದಕ್ಕಿಂತ ಶಾಲೆಗಳಲ್ಲೇ ಹೆಚ್ಚು ವ್ಯವಸ್ಥಿತವಾಗಿ ನಡೆಸಬಹುದು ಎಂದು ಹಲವಾರು ಶಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರದ ಬಳಿ ತಮ್ಮ ಮಾತು ನಡೆಯುವುದಿಲ್ಲ ಎಂಬ ಅಳಲು ಅವರದ್ದು.

ಶಾಲೆಯ ಒಂದೆರಡು ಕೋಣೆಗಳನ್ನು ವಿದ್ಯಾಗಮಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬಹು ದಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸೀಮಿತವಾಗಿ ಕೊರೊನಾ ಶಿಷ್ಟಾಚಾರಗಳ ಪ್ರಕಾರ ಶಾಲೆಗಳಲ್ಲೇ ವಿದ್ಯಾಗಮ ನಡೆಸಬಹುದಾಗಿದೆ ಎಂಬುದು ಹಲವಾರು ಶಿಕ್ಷಕರ ನಿಲುವಾಗಿದೆ.

ಮೊದಲು ಆರೋಗ್ಯ, ನಂತರ ಆರ್ಥಿಕತೆ ಎಂಬ ಮೊಂಡು ವಾದದ ಕಾರಣದಿಂದಾಗಿ ಈಗಾಗಲೇ ದೇಶದ ಆರ್ಥಿಕತೆ ಕುಸಿದಿದೆ. ರೋಗ ಎದುರಿಸುವುದೂ ತಪ್ಪಿಲ್ಲ. ಇದೇ ಹಾದಿಯಲ್ಲಿ ಮುಂದೆ ಸಾಗಿ, ಮಕ್ಕಳ ಅಕ್ಷರ ಕಲಿಕೆಯನ್ನೂ ಮಣ್ಣು ಪಾಲು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.


ಎಸ್.ಎ. ಶ್ರೀನಿವಾಸ್‌,
[email protected]

error: Content is protected !!