ಕಸ್ಟೋಡಿಯಲ್ ಡೆತ್ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಮನವಿ

ಸಿಐಡಿ ಡಿವೈಎಸ್ಪಿ ಗಿರೀಶ್ ಅವರೊಂದಿಗೆ ಡಾ. ವೈ. ರಾಮಪ್ಪ ಚರ್ಚೆ

ದಾವಣಗೆರೆ, ಅ.9- ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪನ ಪೊಲೀಸ್ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ, ಶೀಘ್ರವೇ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಮುಖೇನ ಮರುಳಸಿದ್ದಪ್ಪನ ಸಾವಿಗೆ ನ್ಯಾಯ ದೊರಕಿಸುವಂತೆ ಸಿಐಡಿ ಡಿವೈಎಸ್ಪಿ ಗಿರೀಶ್ ಅವರಿಗೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಹಾಗೂ ಇತರರು ಮನವಿ ಮಾಡಿದ್ದಾರೆ.

ಮಾಯಕೊಂಡ ಪೊಲೀಸ್ ಠಾಣೆಗೆ ಇಂದು ಆಗಮಿಸಿದ್ದ ಅವರು, ಪ್ರಕರಣದ ತನಿಖೆ ಆರಂಭಿಸಿರುವ ಸಿಐಡಿ ಡಿವೈಎಸ್ಪಿ ಗಿರೀಶ್ ಅವರನ್ನು  ಭೇಟಿ ಮಾಡಿ ಚರ್ಚಿಸಿದರು.

ಮಾಯಕೊಂಡದಂತಹ ಗ್ರಾಮೀಣ ಠಾಣೆಯಲ್ಲೂ ಕಸ್ಟೋಡಿಯಲ್ ಡೆತ್ ನಡೆದಿರುವುದು ಆತಂಕಕಾರಿ. ಹತ್ಯೆ ಮಾಡಿ ಹೊರಗೆಸೆಯುವಂತಹ ಪ್ರಸಂಗ ಶೋಚನೀಯ. ಇಂತಹ ಪ್ರಕರಣಗಳು ಮರುಕಳಿಸಿದರೆ ಕಾನೂನು ಸುವ್ಯವಸ್ಥೆ ಬಗ್ಗೆ ಜನಸಾಮಾನ್ಯರಲ್ಲಿ ಭಯ ಹುಟ್ಟಲಿದ್ದು, ಪೊಲೀಸ್ ಠಾಣೆ ಮತ್ತು ಅಧಿಕಾರಿಗಳ ಬಗ್ಗೆ ನಂಬಿಕೆ ಕಾಣುವುದು ಕಷ್ಟವಾಗಲಿದೆ. ಹಾಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ವಿನಂತಿಸಿದ್ದಾರೆ.

ಸಿಐಡಿ ಎ. ಗಿರೀಶ್ ಮಾತನಾಡಿ, ಘಟನೆಗೆ ಸಂಬಂಧಿಸಿದ ಕಾನೂನಾತ್ಮಕ ಕ್ರಮಕೈಗೊಳ್ಳುತ್ತಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತಿದೆ. ನಿಯಮಾನುಸಾರ ತನಿಖೆ ಪೂರೈಸಿ, ಶೀಘ್ರವೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಆ ಮುಖೇನ ಪ್ರಕರಣ ಸಂಬಂಧ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ. ಈ ಬಗ್ಗೆ ಯಾವುದೇ ಸಂದೇಹ ಬೇಡವೆಂದರು.

ಈ ಸಂದರ್ಭದಲ್ಲಿ ಗ್ರಾಮೀಣ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ, ಸಿಪಿಐ ಬಿ. ಮಂಜುನಾಥ್, ಮುಖಂಡರಾದ ಎಸ್. ವೆಂಕಟೇಶ್, ಬಿ.ಟಿ. ಹನುಮಂತಪ್ಪ, ಗಂಗಾಧರ, ಹೂವಿನಮಡು ಹಾಲೇಶಪ್ಪ ಸೇರಿದಂತೆ ಇತರರು ಇದ್ದರು.

error: Content is protected !!