ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಸಾಕ್ಷ್ಯ ಪರಿಶೀಲನೆ: ಶವ ಪತ್ತೆ ಸ್ಥಳ ಪರಿಶೀಲನೆ
ದಾವಣಗೆರೆ, ಅ.8- ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪನ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ತನಿಖೆ ಆರಂಭಿಸಿ ಚುರುಕುಗೊಳಿಸಿದೆ.
ಬೆಂಗಳೂರಿನಿಂದ ನಗರಕ್ಕಾಗಮಿಸಿರುವ ಸಿಐಡಿ ಡಿವೈಎಸ್‍ಪಿ ಕೆ.ಸಿ. ಗಿರೀಶ್ ಅವರ ನೇತೃತ್ವದ ತಂಡ ಇಂದು ಮಾಯಕೊಂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯಲ್ಲಿದ್ದ ಸಿಸಿಟಿವಿ ಸೇರಿದಂತೆ ಸಾಕ್ಷ್ಯಗಳ ಪರಿಶೀಲನೆ ನಡೆಸಿತು.
ನಂತರ ಠಾಣೆಯಿಂದ ನೂರು ಮೀಟರ್ ದೂರದಲ್ಲಿ ರುವ ಉಗ್ರಾಣ ನಿಗಮದ ಬಸ್ ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮರುಳಸಿದ್ದಪ್ಪನ ಶವ ಪತ್ತೆಯಾಗಿದ್ದ ಸ್ಥಳವನ್ನು ಪರಿಶೀಲನೆ ನಡೆಸಿದರಲ್ಲದೇ ಅಳತೆ ಮಾಡಿದರು.
ನಂತರ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿದ ತಂಡ ಪುನಃ ಪೊಲೀಸ್ ಠಾಣೆಗೆ ಮರಳಿ ಠಾಣೆಯ ಅಧಿಕಾರಿ, ಸಿಬ್ಬಂದಿಯಿಂದ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಮರಳುಸಿದ್ದಪ್ಪನ ಸಂಬಂಧಿಕರು, ಸ್ಥಳೀಯರಿಂದಲೂ ಮಾಹಿತಿ ಪಡೆದಿದ್ದಾರೆ.
ಅಲ್ಲದೇ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಅಧಿಕಾರಿಗಳು ವೀಕ್ಷಿಸಿದರಲ್ಲದೇ, ಠಾಣೆಯ ಒಳಭಾಗವನ್ನು ವಿಡಿಯೋ ಮಾಡಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮರುಳಸಿದ್ದಪ್ಪನ ಮೇಲೆ ಆತನ ಪತ್ನಿ ವೃಂದಮ್ಮ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾಯಕೊಂಡ ಪೊಲೀಸರು ಮರುಳ ಸಿದ್ದಪ್ಪನನ್ನು ಸೋಮವಾರ ವಿಚಾರಣೆಗೆ ಕರೆದುಕೊಂಡು ಬಂದಿದ್ದರು. ಮಂಗಳವಾರ ಬೆಳಗ್ಗೆ ಆತನ ಶವ ಮಾಯಕೊಂಡ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಈತನ ಸಾವಿಗೆ ಪೊಲೀಸರ ಹಲ್ಲೆ ಕಾರಣ ಎಂದು ಮೃತನ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು.
ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪೊಲೀಸ್ ಅಭಿರಕ್ಷೆಯಲ್ಲಿ ಸಾವು ಪ್ರಕರಣ ಎಂಬುದಾಗಿ ಪರಿಗಣಿಸಿರುವುದಾಗಿ ಎಸ್ಪಿ ಹನುಮಂತರಾಯ ಸ್ಪಷ್ಟಪಡಿಸಿದ್ದರು. ಈ ಘಟನೆಯನ್ನು ಪೊಲೀಸ್ ಇಲಾಖೆಯು ಸಿಐಡಿ ತನಿಖೆಗೆ ಒಪ್ಪಿಸಿತ್ತು. ಅದರಂತೆ ಸಿಐಡಿ ಡಿವೈಎಸ್‍ಪಿ ಕೆ.ಸಿ. ಗಿರೀಶ್ ಅವರು ಈಗ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪಿಎಸ್‍ಐ ಸೇರಿ ಮೂವರು ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಬಂಧಿಸಲಾಗಿತ್ತು. ಮತ್ತೋರ್ವ ಪೇದೆಯನ್ನು ಅಮಾನತ್ತು ಮಾಡಲಾಗಿದೆ.
ಬುಧವಾರ ಮೃತ ಮರಳಸಿದ್ದಪ್ಪನ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬಂದ ನಂತರ ಕುಟುಂಬಕ್ಕೆ ಶವ ಹಸ್ತಾಂತರ ಮಾಡಿದರು.