ನಗರದಲ್ಲಿ 11 ಪಾಸಿಟಿವ್, ಇಬ್ಬರ ಸಾವು

ದಾವಣಗೆರೆ, ಜು. 5 – ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ ಇಬ್ಬರು ಮೃತಪಟ್ಟಿದ್ದು, 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೇ ದಿನದಂದು ಏಳು ಜನರು ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ.

ಅನಾರೋಗ್ಯ ಪೀಡಿತರಾಗಿ ಬಳ್ಳಾರಿಯ ಕೊಟ್ಟೂರಿನಿಂದ ಎಸ್.ಎಸ್. ಆಸ್ಪತ್ರೆಗೆ ಸೇರಿದ್ದ 53 ವರ್ಷದ ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ. ನಂತರದಲ್ಲಿ ಅವರಿಗೆ ಕೊರೊನಾ ಇರುವುದು ಪತ್ತೆಯಾಗಿದೆ. ಆಜಾದ್ ನಗರದ 68 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯ ಪೀಡಿತರಾಗಿ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೂ ಸಹ ಕೊರೊನಾ ಇರುವುದು ಕಂಡು ಬಂದಿದೆ. ಇಬ್ಬರು ಮೃತರು ಕೊರೊನಾ ಅಲ್ಲದೇ ಇತರ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೈದರಾಬಾದ್‌ನಿಂದ ಮರಳಿದ್ದ ನಗರದ ಎಸ್.ಎಸ್. ಬಡಾವಣೆ ಯಲ್ಲಿದ್ದ ಕುಟುಂಬವೊಂದರ ನಾಲ್ವರಲ್ಲಿ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ಪತಿ – ಪತ್ನಿ ಹಾಗೂ ಐದು ವರ್ಷದ ಹೆಣ್ಣು ಹಾಗೂ ಏಳು ವರ್ಷದ ಗಂಡು ಮಗುವಿನಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಇದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆ ಕೆಲಸದ ಮಹಿಳೆಯಲ್ಲೂ ಕೊರೊನಾ ಸೋಂಕು ಕಂಡು ಬಂದಿದೆ.

  • ಹೈದರಾಬಾದ್‌ನಿಂದ ಮರಳಿದ ಎಸ್.ಎಸ್. ಬಡಾವಣೆ ಕುಟುಂಬದ ನಾಲ್ವರಲ್ಲಿ ಸೋಂಕು.
  • ಅದೇ ಮನೆ ಕೆಲಸದ ಮಹಿಳೆಗೂ ಸೋಂಕು
  • ಆಜಾದ್ ನಗರದ 68 ವರ್ಷದ ವೃದ್ದ, ಕೊಟ್ಟೂರಿನ  53 ವರ್ಷದ ವ್ಯಕ್ತಿ ಸಾವು

ಉಳಿದಂತೆ ನಗರದ ನಿಟುವಳ್ಳಿಯ ಒಬ್ಬರು ಹಾಗೂ ಬೀಡಿ ಲೇಔಟ್‌ನ ಇಬ್ಬರಲ್ಲಿ ಕೊರೊನಾ ಸೋಂಕಿರುವುದು ಕಂಡು ಬಂದಿದೆ.

ಹರಿಹರದ ಗೌಸಿಯಾ ಕಾಲೋನಿ ಹಾಗೂ ಹೊನ್ನಾಳಿಯ ಕ್ಯಾಸಿನಕರೆಯ ತಲಾ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ. ಭಾನುವಾರದಂದು ಸೋಂಕಿನಿಂದ ಗುಣವಾಗಿ ಏಳು ಜನರು ಬಿಡುಗಡೆಯಾಗಿದ್ದಾರೆ. ಇವರಲ್ಲಿ ನಗರದ ಆಜಾದ್ ನಗರ, ಪೊಲೀಸ್ ಕ್ವಾರ್ಟರ್ಸ್, ಎಂ.ಸಿ.ಸಿ. ಬಿ ಬ್ಲಾಕ್‌ನ ತಲಾ ಒಬ್ಬರು, ಹರಿಹರದ ಚಿನ್ನಪ್ಪ ಕಾಂಪೌಡ್, ಜಗಳೂರಿನ ಇಬ್ಬರು ಸೇರಿದ್ದಾರೆ. ಬಳ್ಳಾರಿಯ ಹೊಸಪೇಟೆಯಿಂದ ಬಂದು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಗುಣಮುಖರಾಗಿ ಬಿಡುಗಡೆಯಾದವರಲ್ಲಿ ಸೇರಿದ್ದಾರೆ.

ಜಿಲ್ಲೆಯಲ್ಲಿ 44 ಸಕ್ರಿಯ ಸೋಂಕಿತರಿದ್ದಾರೆ. ಇದುವರೆಗೂ 356 ಜನರಲ್ಲಿ ಸೋಂಕು ಕಂಡು ಬಂದಿದೆ. ಇವರಲ್ಲಿ 301 ಜನರು ಗುಣವಾಗಿದ್ದು, 11 ಜನರು ಸಾವನ್ನಪ್ಪಿದ್ದಾರೆ. ಭಾನುವಾರದಂದು ಕೊರೊನಾದಿಂದ ಗುಣ ಹೊಂದಿದವರ ಸಂಖ್ಯೆ 300 ರ ಗಡಿ ದಾಟಿದಂತಾಗಿದೆ.

error: Content is protected !!