5 ದಿನಗಳನ್ನು ಪೂರೈಸಿದ ವೈದ್ಯ ವಿದ್ಯಾರ್ಥಿಗಳ ಮುಷ್ಕರ

ದಾವಣಗೆರೆ, ಜು.3- 16 ತಿಂಗಳ ಶಿಷ್ಯ ವೇತನಕ್ಕಾಗಿ ಬಿಗಿಪಟ್ಟು ಸಡಿಲಿಸದೇ ಜೆಜೆಎಂ ವೈದ್ಯಕೀಯ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ 5 ದಿನಗಳನ್ನು ಪೂರೈಸಿದೆ. 

ನಗರದ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪವಾಗಿ ಇಂದು ವಿಶೇಷವಾಗಿ 16 ತಿಂಗಳ ಶಿಷ್ಯ ವೇತನ ಶೀಘ್ರವೇ ನೀಡುವಂತೆ ಪ್ರತಿಭಟನಾ ನಿರತರಲ್ಲಿ 16 ಮಂದಿ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸುವ ಮುಖೇನ ಸರ್ಕಾರದ ಗಮನ ಸೆಳೆದರು. ಅಲ್ಲದೇ ಶಿವಯೋಗಾಶ್ರಮದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

`ಸರ್ಕಾರದ ಸಹವಾಸ ವೇತನ ಇಲ್ಲದ ವನವಾಸ’ ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಹಿಡಿದು ತಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟದ ಜೊತೆ ಜೊತೆಯಲ್ಲಿ ಸ್ಥಳದಲ್ಲೇ ಕುಳಿತು ಪುಸ್ತಕಗಳನ್ನು ಹಿಡಿದು ಓದಿದ್ದು ಕಂಡು ಬಂತು. 

ವೈದ್ಯಕೀಯ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಮುಷ್ಕರದ ಸ್ಥಳಕ್ಕೆ ಭಾರತೀಯ ವೈದ್ಯಕೀಯ ಸಂಘಧ ಅಧ್ಯಕ್ಷ ಡಾ. ರುದ್ರಮುನಿ ಮತ್ತು ಕಾರ್ಯದರ್ಶಿ ಡಾ. ಪ್ರಸನ್ನ ಅವರು ಆಗಮಿಸಿ ಬೆಂಬಲ ನೀಡಿದರು. 

ಜಿಲ್ಲಾ ಸಚಿವರಿಂದ ಸಿಹಿ ಸುದ್ದಿ ನಿರೀಕ್ಷೆ: ಐಎಂಎ ಅಧ್ಯಕ್ಷ ಡಾ. ರುದ್ರಮುನಿ ಪತ್ರಕರ್ತರೊಂದಿಗೆ ಮಾತನಾಡಿ, ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸ್ಥಳೀಯ ಶಾಸಕರು, ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಸಚಿವರ ಸಭೆ ನಡೆದಿದೆ ಎಂದು ಹೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ನಾಳೆ ಶನಿವಾರ ನಗರಕ್ಕೆ ಆಗಮಿಸಲಿದ್ದು, ಅವರು ಸಿಹಿ ಸುದ್ದಿ ತರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.

error: Content is protected !!