ಕಾರ್ಮಿಕ, ರೈತ, ಬಡ ಜನ ವಿರೋಧಿ ನೀತಿಗೆ ಖಂಡನೆ

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ದಾವಣಗೆರೆ, ಜು.3- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ, ರೈತ, ದುಡಿಯುವ ಮಹಿಳೆಯರ, ವಿದ್ಯಾರ್ಥಿ ಯುವ ಜನರ ವಿರೋಧಿಯಾಗಿ ನೀತಿಗಳನ್ನು ಜಾರಿಗೊಳಿಸಿ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯುಂಟು ಮಾಡಿರುವುದಾಗಿ ಆರೋಪಿಸಿ  ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಜಮಾಯಿಸಿದ್ದ ಸಂಘಟಿತ ಹಾಗೂ ಅಸಂಘಟಿತ ಕೇಂದ್ರ ಕಾರ್ಮಿಕ ಸಂಘಟನೆಗಳು, ರೈತ ಮತ್ತು ಸ್ಥಳೀಯ ಸ್ವತಂತ್ರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಂತರ ಬಹಿರಂಗ ಸಭೆ ನಡೆಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ದೇಶದಲ್ಲಿ ಹರಡಿರುವ ಕೊರೊನಾ ವೈರಸ್ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಾಕ್‍ಡೌನ್‍ನಿಂದ ಕಂಗಾಲಾದ ದುಡಿಯುವ ವರ್ಗವನ್ನು ಸಂಪೂರ್ಣ ಕಡೆಗಣಿಸಿದೆ. 20 ಲಕ್ಷ ಕೋಟಿ ಪ್ಯಾಕೇಜ್ ಹಿಂದಿನ ಬಜೆಟ್ ಘೋಷಣೆ ಹೊರತು ಬೇರೇನೂ ಅಲ್ಲ. ದೇಶದ 150ಕ್ಕೂ ಹೆಚ್ಚು ರೈಲುಗಳನ್ನು ವಿದೇಶಿ ಕಂಪೆನಿಗಳಿಗೆ ನೀಡುವ ಹುನ್ನಾರ ಅಡಗಿದೆ. ಕೋವಿಡ್ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸಹಾಯ ಘೋಷಣೆ ಮಾಡುತ್ತಿಲ್ಲ. ಕಾರ್ಮಿಕ ಹಕ್ಕುಗಳ ರಕ್ಷಣೆಯಾಗುತ್ತಿಲ್ಲ. ಕಾರ್ಪೊರೇಟ್, ಭೂ ಮಾಲೀಕರಿಗೆ ಅನುಕೂಲವಾಗಿ ಕೃಷಿ ಆರ್ಥಿಕತೆಯ ಬದಲಾವಣೆಗಾಗಿ ಶಾಸನ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಆರೋಪಿಸಿದರು. 

ಕಾರ್ಮಿಕರಿಗೆ ಲಾಕ್‌ಡೌನ್ ಕಾಲಾವಧಿಯ ಪೂರ್ಣ ವೇತನ ನೀಡಬೇಕು. ಕೊರೊನಾ ನಿಯಂತ್ರಣದಲ್ಲಿನ ಮುಂಚೂಣಿ ಸೇನಾನಿಗಳನ್ನು ಖಾಯಂಗೊಳಿಸಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ 6 ತಿಂಗಳವರೆಗೆ ಮಾಸಿಕ 7500 ರೂ.ಗಳನ್ನು ನೇರ ನಗದು ವರ್ಗಾಯಿಸಬೇಕು. ನರೇಗಾ ಯೋಜನೆಯಡಿ ಕೆಲಸ ವನ್ನು 200 ಮಾನವ ದಿನಗಳಿಗೆ ಹೆಚ್ಚಿಸಿ, ವಲಸೆ ಕಾರ್ಮಿಕರು ಹಾಗೂ ನಗರದ ಬಡವರಿಗೆ ವಿಸ್ತರಿಸ ಬೇಕು. ಪ್ರತಿ ವ್ಯಕ್ತಿಗೂ ಆರು ತಿಂಗಳವರೆಗೆ ತಲಾ 10 ಕೆಜಿ ಆಹಾರ ಧಾನ್ಯ ನೀಡಬೇಕು. ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಡಿಎ ಕಡಿತ ರದ್ದುಗೊಳಿಸಬೇಕು. ಎನ್‌ಪಿಎಸ್ ರದ್ದುಪಡಿಸಿ ನಿಶ್ಚಿತ ಪಿಂಚಣಿ ಪುನರಾರಂ ಭಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.  

ಟೈಲರ್ ಕಲ್ಯಾಣ ಮಂಡಳಿ ಜಾರಿಗೊಳಿಸಬೇಕು. ಶಾಲೆಗಳು ಆರಂಭವಾಗುವವರೆಗೂ ಬಿಸಿಯೂಟ ತಯಾರಕರಿಗೆ ವೇತನ ನೀಡಬೇಕು. ಕೆಲಸದ ಭದ್ರತೆ ಒದಗಿಸಬೇಕು. ನರೇಗಾ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ಗಳನ್ನು ನೀಡಬೇಕು. ರೈತರಿಗೆ ಮಾರಕವಾದ ವಿದ್ಯುತ್ ತಿದ್ದುಪಡಿ ಮಸೂದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಮಂಜುನಾಥ ಕೈದಾಳೆ, ಬಿ.ಎಂ. ಕರಿಬಸಯ್ಯ, ಆವರಗೆರೆ ಚಂದ್ರು, ಬಿ.ಎಸ್. ಚಂದ್ರಶೇಖರಪ್ಪ, ಕೆ.ಎಚ್. ಆನಂದರಾಜ್, ಹೆಚ್.ಜಿ.ಉಮೇಶ್, ಹುಚ್ಚವ್ವನಹಳ್ಳಿ ಮಂಜುನಾಥ್, ಕರಿಬಸಪ್ಪ, ಬಿ.ಎಸ್. ನಾಗರಾಜಚಾರ್, ಎನ್. ಮುತ್ತುರಾಜ, ತಿಪ್ಪೇಸ್ವಾಮಿ, ನಾಗರಾಜಚಾರ್, ಆವರಗೆರೆ ವಾಸು, ಇ. ಶ್ರೀನಿವಾಸ, ಐರಣಿ ಚಂದ್ರು, ಎಚ್.ಎನ್. ಗಂಗಾಧರ್, ಹುಬ್ಬಳ್ಳಿ ಬಸವರಾಜ, ಜಬೀನಾ ಖಾನಂ, ಚಂದ್ರಶೇಖರ್, ಗದಿಗೇಶ್ ಪಾಳೇದ, ನರೇಗಾ ರಂಗನಾಥ, ಕೆ. ಬಾಲಾಜಿ, ಕೈದಾಳೆ ರವಿಕುಮಾರ್, ಸಿ. ರಮೇಶ, ಆವರಗೆರೆ ರಂಗನಾಥ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವೈದ್ಯ ವಿದ್ಯಾರ್ಥಿಗಳಿಗೆ ಬೆಂಬಲ: ಇದೇ ವೇಳೆ ಜಯದೇವ ವೃತ್ತದಲ್ಲಿ ಜೆಜೆಎಂ ವೈದ್ಯ ವಿದ್ಯಾರ್ಥಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಈ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.

error: Content is protected !!