ಜಗಳೂರು: ವನ್ಯಜೀವಿ ಸಪ್ತಾಹ ಆಚರಣೆ, ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜೆಎಂಎಫ್‍ಸಿ ನ್ಯಾಯಾಧೀಶ ಜಿ.ತಿಮ್ಮಯ್ಯ
ಜಗಳೂರು, ಅ. 7- ದೇಶದಲ್ಲಿ ಅರಣ್ಯ ಸಂಪತ್ತು ಸಮೃದ್ಧವಾಗಿ ಬೆಳೆದಿದ್ದು, ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಭವಿಷ್ಯದಲ್ಲಿ ಹಣ ನೀಡಿ ಕೃತಕ ಆಮ್ಲಜನಕ ಪಡೆಯುವ ಅನಿವಾರ್ಯತೆ ಉಂಟಾಗಬಹುದು ಎಂದು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಜಿ.ತಿಮ್ಮಯ್ಯ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ 66 ನೇ ವನ್ಯಜೀವಿ ಸಪ್ತಾಹ ಆಚರಣೆ ಹಾಗೂ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹಕ್ಕಾಗಿದ್ದು, ಸೂಕ್ಷ್ಮತೆಯಿಂದ ಮುಗ್ಧ ರೈತಾಪಿ ವರ್ಗಕ್ಕೆ ಅರಣ್ಯ ಸಿಬ್ಬಂದಿಗಳು ಜಾಗೃತಿ ಮೂಡಿಸಬೇಕು. ವನ್ಯಜೀವಿ ಹಾಗೂ ಪಕ್ಷಿಗಳ ನಾಶ ಮಾನವ ಸಂತತಿಗೆ ಸಂಚಕಾರ ತರಲಿದೆ ಎಂದು ಕಿವಿಮಾತು ಹೇಳಿದರು. ಮುಗ್ಧ ರೈತರ ಮೇಲೆ ದಿಢೀರನೆ ಕಾನೂನು ಅಸ್ತ್ರ ಪ್ರಯೋಗಿಸದೆ ಕಾರ್ಯಕ್ರಮಗಳ ಮೂಲಕ ಅರಿವು, ಜಾಗೃತಿ ಮೂಡಿಸಿದರೆ ಸ್ವತಃ ಅವರೇ ಗಡಿ ಕಾಯುವ ಯೋಧರಂತೆ ಅರಣ್ಯ ಸಂರಕ್ಷಿಸಲು ಸಿದ್ಧರಾಗುತ್ತಾರೆ ಎಂದು ಸಲಹೆ ನೀಡಿದರು.
ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕೊರೊನಾ ಮಹಾಮಾರಿ ಸಮೀಪವೂ ಸುಳಿಯುವುದಿಲ್ಲ. ತಾವು ಉತ್ಸಾಹಭರಿತರಾಗಿ ಕರ್ತವ್ಯದಲ್ಲಿ ತೊಡಗಿಕೊಳ್ಳಿ ಎಂದರು.
ಆರಂಭದಲ್ಲಿ ಬರದ ಭೂಮಿಯೆಂದು ತಿಳಿದಿದ್ದ ನನಗೆ ರಜಾ ದಿನಗಳಲ್ಲಿ ಕೂಗಳತೆಯ ಅಭಯಾರಣ್ಯಕ್ಕೆ ಹೊರ ಸಂಚಾರಕ್ಕೆ ತೆರಳಿದ ವೇಳೆ ಪ್ರಕೃತಿ ಸೊಬಗು, ಅರೆ ಮಲೆನಾಡಿನ ಅನುಭವ ನೀಡಿದ್ದು ಅವಿಸ್ಮರಣೀಯ ಎಂದು ನ್ಯಾಯಾಧೀಶರು ತಿಳಿಸಿದರು.
ವಕೀಲ ಹಾಗೂ ವನ್ಯಜೀವಿ ಪರಿಪಾಲಕ ಡಿ.ಶ್ರೀನಿವಾಸ್ ಮಾತನಾಡಿ, ಕೊಂಡುಕುರಿ ಅಭಯಾರಣ್ಯದಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿದ್ದು, ನಾನಾ ಪ್ರಭೇದದ ಜೀವಿಗಳ ಬದುಕಿಗೆ ಸಹಕಾರಿಯಾಗಿದೆ. ಅಧಿಕಾರಿಗಳು ವನ್ಯಧಾಮದ ಮೇಲೆ ವ್ಯಾಮೋಹ ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯವಾಗಿ ಹಲವು ವೈರುಧ್ಯದ ಮಧ್ಯೆ ಹೋರಾಟಗಳ ಫಲವಾಗಿ ಕೊಂಡುಕುರಿ ವನ್ಯಜೀವಿ ಧಾಮವಾಗಿದ್ದು,ಅದನ್ನು ಸಂರಕ್ಷಿಸುವುದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಮವಸ್ತ್ರ ಧರಿಸಿದ ಸಿಬ್ಬಂದಿಗಳು ವನ್ಯಜೀವಿ ಸಪ್ತಾಹ ಜಾಗೃತಿಗಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು..
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ವನ್ಯಜೀವಿ ಪರಿಪಾಲಕ ಡಾ.ರವಿಕುಮಾರ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪ್ರಕಾಶ್, ಆರ್‍ಎಫ್‍ಓ ಶಿವಕುಮಾರ್, ದಿನೇಶ್ ನಾಯ್ಕ್, ತಿಪ್ಪೇಸ್ವಾಮಿ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.