ಮೆಕ್ಕೆಜೋಳ-ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ
ದಾವಣಗೆರೆ, ಅ.7- ಮೆಕ್ಕೆಜೋಳ ಮತ್ತು ಭತ್ತ ಖರೀದಿ ಕೇಂದ್ರವನ್ನು ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಯಕೊಂಡದ ನಾಡ ಕಚೇರಿ ಎದುರು ಇಂದು ಧರಣಿ ಸತ್ಯಾಗ್ರಹ ಹೂಡಿದ್ದು, ವಿಶೇಷವಾಗಿ ಭಿಕ್ಷಾಟನೆ ಮಾಡುವ ಮುಖೇನ ವಿನೂತನ ಚಳುವಳಿ ನಡೆಸಿ ಸರ್ಕಾರದ ಗಮನ ಸೆಳೆಯಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್ ಗೆ 1850 ರೂ. ನಿಗದಿ ಮಾಡಿದ್ದು, ಮಾರುಕಟ್ಟೆಯಲ್ಲಿ 900ರಿಂದ 1000 ಕ್ಕೆ ಮಾರಾಟವಾಗುತ್ತಿದೆ. ಭತ್ತ ಪ್ರತಿ ಕ್ವಿಂಟಾಲ್ ಗೆ 1840 ರೂ. ನಿಗದಿ ಮಾಡಿದ್ದು, ಮಾರುಕಟ್ಟೆಯಲ್ಲಿ 1300 ರಿಂದ 1400 ಕ್ಕೆ ಮಾರಾಟವಾಗುತ್ತಿದೆ. ಮೆಕ್ಕೆಜೋಳದಲ್ಲಿ 800 ರೂ. ನಷ್ಟ, ಭತ್ತದಲ್ಲಿ 500ರಿಂದ 600 ರೂ. ನಷ್ಟವಾಗುತ್ತಿದೆ. ಇದು ಕೇಂದ್ರ ಸರ್ಕಾರಕ್ಕೂ ಅವಮಾನವೆಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಸಂಘ ಟನಾ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಣಬೇರು ಕುಮಾರಸ್ವಾಮಿ, ಕಬ್ಬಳ ಪ್ರಸಾದ್, ಬಲ್ಲೂರು ಪರಶುರಾಮ ರೆಡ್ಡಿ, ಆವರಗೆರೆ ಇಟಗಿ ಬಸವ ರಾಜಪ್ಪ, ಲಿಂಗರಾಜ್ ಪಾಮೇನಹಳ್ಳಿ, ಬಸವರಾ ಜಪ್ಪ ರಾಂಪುರ, ಮಾಯಕೊಂಡ ನಿಂಗಪ್ಪ, ಮಾಯಕೊಂಡ ಗೌಡರ ಅಶೋಕ್, ಆಲೂರು ಪರಮೇಶ್ವರಪ್ಪ, ಜಯನಾಯ್ಕ್ ನಾಗರಕಟ್ಟೆ, ಬಲ್ಲೂರ್ ಅಣ್ಣಪ್ಪ, ಬೂದಾಳ್ ಮಹೇಶ, ಕರುಣಾ, ಪ್ರತಾಪ್ ಮುಂತಾದ ರೈತರು ಭಾಗವಹಿಸಿದ್ದರು.