ವಿಚಾರಣೆಗೆಂದು ಹೋದವ ಶವವಾಗಿ ಪತ್ತೆ

ವಿಚಾರಣೆಗೆಂದು ಹೋದವ ಶವವಾಗಿ ಪತ್ತೆ - Janathavaniಪೊಲೀಸರಿಂದ ಹಲ್ಲೆ : ಮೃತನ ಪತ್ನಿ, ಸಂಬಂಧಿಕರ ಆರೋಪ

ದಾವಣಗೆರೆ, ಅ.6- ಮಾಯಕೊಂಡ ಸಮೀಪದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಎಂಬ ವ್ಯಕ್ತಿಯನ್ನು ವಿಚಾರಣೆ ಗೆಂದು ಪೊಲೀಸ್ ಠಾಣೆಗೆ ಕರೆತಂದು, ಹಲ್ಲೆ ನಡೆಸಿ ಆತನ ಸಾವಿಗೆ ಕಾರಣ ರಾಗಿದ್ದಾರೆ ಎಂದು ಮಾಯ ಕೊಂಡ ಠಾಣೆ ಪೊಲೀಸರ ವಿರುದ್ಧ ಮೃತನ ಪತ್ನಿ ಹಾಗೂ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ಮೃತ ಮರುಳಸಿದ್ದಪ್ಪ (47) ಈಗಾಗಲೇ ಮದುವೆ ಯಾಗಿದ್ದರೂ, ಬೇರೊಂದು ಮದುವೆಯಾಗುವ ಮಾತು ಕೇಳಿ ಬಂದಿದ್ದವು ಎನ್ನಲಾಗಿದ್ದು, ಹಲವು ದಿನಗಳಿಂದ ಕಾಣೆಯಾಗಿದ್ದ  ಈತನನ್ನು ಹುಡುಕಿ ಅವರ ವಿವಾಹ ತಡೆಯುವಂತೆ ಈತನ ಪತ್ನಿ ವೃಂದಮ್ಮ ಭಾನುವಾರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಮಹಿಳೆ ನೀಡಿದ ದೂರು ಆಧರಿಸಿ ನಿನ್ನೆ ರಾತ್ರಿ ಮಾಯಕೊಂಡ ಪೊಲೀಸ್ ಠಾಣೆಗೆ ಹುಚ್ಚವ್ವನಹಳ್ಳಿಯಲ್ಲಿದ್ದ ಮರುಳಸಿದ್ದಪ್ಪನನ್ನು ವಿಚಾರಣೆಗೆ ಕರೆತರಲಾಗಿತ್ತು. 

ಮರುಳಸಿದ್ಧಪ್ಪನ ಭೇಟಿಗೆಂದು ಸಂಬಂಧಿಕರು ಇಂದು ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದಾಗ ಸಮೀಪದ ಉಗ್ರಾಣ ನಿಗಮದ ಮುಂದಿನ ಬಸ್ ನಿಲ್ದಾಣದಲ್ಲಿ ಈತನ ಶವ ಪತ್ತೆಯಾಗಿದ್ದನ್ನು ಪೊಲೀಸರು ತೋರಿಸಿದ್ದಾರೆ.  

ಶವ ನೋಡಿ ಆತಂಕಿತರಾದ ಮೃತನ ಪತ್ನಿ ಮತ್ತು ಸಂಬಂಧಿ ಕರು ಪೊಲೀಸರ ನಡೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು,  ವಿಚಾರಣೆ ವೇಳೆ ಠಾಣೆಯಲ್ಲಿಯೇ ಪೊಲೀಸರು ಹಲ್ಲೆ ಮಾಡಿ ಅಲ್ಲಿಗೆ ತಂದು ಹಾಕಿದ್ದಾರೆ ಎಂದು  ಆರೋಪಿಸಿದ್ದಾರೆ. 

ರಾತ್ರಿ ಒಂದು ಗಂಟೆವರೆಗೂ ಮರಳಸಿದ್ದಪ್ಪನನ್ನು ಸಂಬಂಧಿಕರು ಭೇಟಿ ಮಾಡಿದ್ದಾರೆ. ಮನೆಗೆ ಕಳುಹಿಸುವಂತೆ ಕೇಳಿಕೊಂಡರೂ ಪೊಲೀಸರು ಕಳುಹಿಸಲಿಲ್ಲ. ಆದರೆ, ಠಾಣೆಯ ಸಬ್ ಇನ್ ಸ್ಪೆಕ್ಟರ್ ರಾತ್ರಿ ಮರಳಸಿದ್ದಪ್ಪ ಅವರಿಗೆ ಎದೆ  ನೋವು ಬಂದಿದೆ ಎಂದಿದ್ದರಿಂದ ಬಿಟ್ಟು ಕಳುಹಿಸಿದ್ದೇವೆ ಎಂಬು ದಾಗಿ  ನಮಗೆ ತಿಳಿಸಿದ್ದಾರೆ ಎಂದು ಮೃತನ ಸಂಬಂಧಿ ಸುರೇಶ್ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಿಸಿದ್ದಾರೆ. ಘಟನೆ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಎಸ್ಪಿ, ಮೃತನ ಕಡೆಯವರಿಂದ ದೂರು ಪಡೆಯಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಮಾಹಿತಿ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ವ್ಯಕ್ತಿಯ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಹಾಗೇನಾದರೂ ಪೊಲೀಸ್ ಇಲಾಖೆಯವರಿಂದಲೇ  ತಪ್ಪುಗಳಾಗಿದ್ದರೆ ಸೂಕ್ತ ಕ್ರಮಕ್ಕೂ ಮುಂದಾಗುವುದಾಗಿ ಸ್ಪಷ್ಟಪಡಿಸಿದರು.

ಇಂದು ಸಂಜೆ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಮೃತ ದೇಹವನ್ನು  ತಂದಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ ಹಾಗೂ ಇತರೆ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!