ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದಲೂ ಬೆಳ್ಳಿ ಇಟ್ಟಿಗೆ ಸಂಗ್ರಹವಾಗಲಿ: ಆವರಗೊಳ್ಳ ಶ್ರೀ
ಶ್ರೀರಾಮನ ಮೇಲಾಣೆ, ಈ ಕಾರ್ಯಕ್ರಮ ರಾಜಕೀಯ ಉದ್ದೇಶಕ್ಕಲ್ಲ – ಜಾಧವ್ ಸ್ಪಷ್ಟನೆ
ದಾವಣಗೆರೆ, ಅ.6- ಜಿಲ್ಲೆಯ ಪ್ರತಿ ತಾಲ್ಲೂಕಿನಿಂದಲೂ ಒಂದೊಂದು ಬೆಳ್ಳಿ ಇಟ್ಟಿಗೆ ಪಡೆದು ದಾವಣಗೆರೆಯಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಿ ಅಯೋಧ್ಯೆಗೆ ಕಳುಹಿಸಿಕೊಡುವ ಕಾರ್ಯ ನಡೆಯಲಿ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಆಶಿಸಿದರು.
ನಗರದ ಪಿ.ಜೆ. ಬಡಾವಣೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಅಯೋಧ್ಯೆಗೆ ಕಳುಹಿಸುವ ಬೆಳ್ಳಿ ಇಟ್ಟಿಗೆ ಸ್ವಾಗತಿಸುವ ಪೂಜಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ದಾವಣಗೆರೆ ರಾಮ ಭಕ್ತರು ಕೇವಲ 25 ದಿನಗಳಲ್ಲಿ ಬೆಳ್ಳಿ ಇಟ್ಟಿಗೆ ತಯಾರಿಸಿ ರಾಷ್ಟ್ರಪ್ರೇಮ ಮೆರೆದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿ ಆ ಮೂಲಕ ಹಿಂದೂ ಸಂಸ್ಕೃತಿ ಎತ್ತಿ ಹಿಡಿಯುವ ಉದ್ದೇಶದಿಂದ ಎಲ್ಲೆಡೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.
ದಾವಣಗೆರೆಯನ್ನು ದೇವನಗರಿ ಎಂದು ಕರೆಯುತ್ತೇವೆ. ಇಲ್ಲಿನ ಮಣ್ಣಿನಲ್ಲಿ ಉತ್ಕೃಷ್ಟ ಶಕ್ತಿ ಇದೆ. ನಾಡು, ನುಡಿ, ಸಂಸ್ಕೃತಿಗಾಗಿ ಅಹೋರಾತ್ರಿ ಸೇವೆ ಸಲ್ಲಿಸುವ ಯುವ ಪಡೆಯೂ ಈ ಜಿಲ್ಲೆಯಲ್ಲಿದೆ. ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಕಳುಹಿಸುವ ಕಾರ್ಯ ಶ್ಲ್ಯಾಘನೀಯವಾದದ್ದು. ಇದು ದೊಡ್ಡ ಪ್ರಮಾಣದಲ್ಲಿ ನಡೆಯಲಿ, ರಾಮಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿ ರಾಷ್ಟ್ರಭಕ್ತಿ ಮೆರೆಸೋಣ ಎಂದು ಹೇಳಿದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ರಾಮ ಮಂದಿರ ನಿರ್ಮಾಣಕ್ಕಾಗಿ 1990ರಲ್ಲಿ ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ಸಮಯದಲ್ಲಿ ಹುತಾತ್ಮರಾದ 8 ಜನರು ಹಾಗೂ ನನ್ನನ್ನೂ ಸೇರಿ ಗಾಯಗೊಂಡ 72 ಜನರ ಆಸೆ ಈಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀರಾಮನ ಮೇಲಾಣೆ, ರಾಜಕೀಯ ಉದ್ದೇಶಕ್ಕಲ್ಲ
ಶ್ರೀರಾಮನ ಮೇಲಾಣೆ ಮಾಡಿ ಹೇಳುತ್ತೇನೆ. ಅಯೋಧ್ಯೆಗೆ ಇಟ್ಟಿಗೆ ಕಳುಹಿಸುವ ಕಾರ್ಯಕ್ರಮವನ್ನು ರಾಜಕೀಯ ಉದ್ದೇಶಕ್ಕಾಗಿ ನಡೆಸುತ್ತಿಲ್ಲ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಕೆಲವರು ಸಾಮಾಜಿಕ ಜಾಲ ತಾಣಗಳ ಮೂಲಕ ನನ್ನ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ನಾನು ಎಂಎಲ್ಎ, ಎಂಎಲ್ಸಿ ಆಗಬೇಕೆಂದು ಈ ಕಾರ್ಯಕ್ರಮ ನಡೆಸುತ್ತಿಲ್ಲ. ರಥಯಾತ್ರೆ ವೇಳೆ ಬಲಿದಾನ ವಾದವರ ಹಾಗೂ ಗಾಯಗೊಂಡವರ ಇಚ್ಛೆಯನ್ನು ಪೂರೈಸುತ್ತಿದ್ದೇನೆ ಎಂದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸಹ, ಶ್ರೀರಾಮನ ಮೇಲೆಯೇ ಟೀಕೆಗಳು ಬಂದವು. ಅಂತಹದ್ದರಲ್ಲಿ ನಾವೆಲ್ಲ ಯಾವ ಲೆಕ್ಕ? ಉತ್ತಮ ಕಾರ್ಯಗಳನ್ನು ಮಾಡುವಾಗ ಟೀಕೆಗಳು ಸಹಜ ಎಂದರು.
1990ರ ಗಲಭೆ ವಿಷಯವನ್ನು ಇಂದಿನ ಯುವ ಜನತೆಗೆ ತಿಳಿಸಬೇಕಿದೆ. ಆ ಮೂಲಕ ಹಿಂದೂಗಳನ್ನು ಸಂಘಟಿಸಬೇಕಿದೆ. ಈ ನಿಟ್ಟಿ ನಲ್ಲಿ ಇಟ್ಟಿಗೆ ನಿರ್ಮಿಸಿ ಕಳುಹಿಸಲಾಗುತ್ತಿದೆ. ಇದರ ಬಗೆಗಿನ ಅಪಪ್ರಚಾರದಲ್ಲಿ ಅರ್ಥವಿಲ್ಲ ಎಂದರು.
ಸಮಯಕ್ಕೆ ಸರಿಯಾಗಿ 15 ಕೆ.ಜಿ. ಗಾತ್ರದ ಬೆಳ್ಳಿ ಇಟ್ಟಿಗೆಯನ್ನು ನಗರಕ್ಕೆ ತರಲಾಗಿದೆ. ಕೊರೊನಾ ಹಾಗೂ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸ್ವಾಗತಿಸಿ, ಪೂಜೆ ಸಲ್ಲಿಸಿ ಲಾಕರ್‌ನಲ್ಲಿ ಇಡಲಾಗುವುದು. ಮುಂದಿನ ದಿನಗಳಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ಇಟ್ಟಿಗೆಯನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ರಾಮಮಂದಿರ ನಿರ್ಮಾಣದ ಟ್ರಸ್ಟಿಯೂ ಆಗಿರುವ ಪೇಜಾವರ ಶ್ರೀಗಳ ಮೂಲಕ ಹಸ್ತಾಂತರಿಸುವ ಉದ್ದೇಶ ಇರುವುದಾಗಿ ಇಂಗಿತ ವ್ಯಕ್ತಪಡಿಸಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ರಾಮ ಮಂದಿರ ನಿರ್ಮಾಣದ ಹೋರಾಟ 500 ವರ್ಷಗಳಿಗಿಂತಲೂ ಹಿಂದಿನದ್ದು. ಈ ಹೋರಾಟದಲ್ಲಿ ಲಕ್ಷಾಂತರ ಜನರು ಪ್ರಾಣಾರ್ಪಣೆ ಮಾಡಿದ್ದಾರೆ ಎಂದರು.
ಹಿಂದೂಗಳು ಸಂಘಟಿತರಾಗಬೇಕಿದೆ. ಮತಾಂತರ ತಡೆಯಲು, ಹಿಂದುತ್ವ ಉಳಿಸಲು, ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಿದೆ ಎಂದರು.
ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಿ ತೆರಳಿದರು. ವೇದಿಕೆ ಮೇಲೆ ಉಪ ಮೇಯರ್ ಸೌಮ್ಯ ನರೇಂದ್ರ ಪವಾರ್ ಉಪಸ್ಥಿತರಿದ್ದರು. ಗೋಪಾಲರಾವ್ ಮಾನೆ ಸ್ವಾಗತಿಸಿದರು. ಬಿಗಿ ಪೊಲೀಸ್ ಕಾವಲಿನಲ್ಲಿ ಕಾರ್ಯಕ್ರಮ ನಡೆಯಿತು.