ಭರದಿಂದ ಸಾಗಿದೆ 57 ಕೆರೆ ಕಾಮಗಾರಿ

ಕೊರೊನಾ ವೇಳೆಯೂ ತಡೆ ಇಲ್ಲದ ಕಾರ್ಯಕ್ಕೆ ಶಾಸಕ ಎಸ್‌ವಿಆರ್ ಸಂತಸ

ಜಗಳೂರು, ಅ.5- ಕೊರೊನಾ ಸಂಕ ಷ್ಟದ ಸಂದರ್ಭದಲ್ಲೂ ಬರಪೀಡಿತ ಜಗಳೂರು ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಯಾವುದೇ ಅಡೆ ತಡೆಯಿಲ್ಲದೆ ಭರದಿಂದ ಸಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು. 

ಚಟ್ನಹಳ್ಳಿ ಗುಡ್ಡದ ಮೇಲೆ ನಡೆ ಯುತ್ತಿರುವ ಕಾಮಗಾರಿ ಪರಿಶೀಲಿಸಿದ ನಂತರ ದೀಟೂರು ಬಳಿ ನಡೆಯುತ್ತಿರುವ ಜಾಕ್‌ವೆಲ್ ಕಾಮಗಾರಿ ಪರಿಶೀಲಿಸಿ ಸುದ್ದಿ ಗಾರರೊಂದಿಗೆ ಮಾಹಿತಿ ಹಂಚಿಕೊಂಡ ಶಾಸಕರು, ಕಾಮಗಾರಿ ಯಾವುದೇ ಲೋಪದೋಷ ಗಳಿಲ್ಲದೆ ಸಮರ್ಪಕವಾಗಿ ನಡೆಯುತ್ತಿದೆ ಎಂದು ಹೇಳಿದರು. ಕಾಮಗಾ ರಿಯ ಪ್ರತಿ ಹಂತದಲ್ಲೂ ತಂತ್ರಜ್ಞರು  ಜವಾಬ್ದಾರಿ ವಹಿಸಿ ಲೋಪ ವಾಗದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಪೈಪ್ ಲೈನ್  ಹಾದುಹೋಗಿರುವ ಮಾರ್ಗ ಗಳಲ್ಲಿ ರೈತರು, ಸಾರ್ವಜನಿಕರು ಸಹಕಾರ ನೀಡುತ್ತಿರುವುದರಿಂದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಸಮರ್ಪಕ ವಾಗಿ  ನಡೆಯುತ್ತಿದೆ. ಯೋಜನೆಯ ಜಾರಿ ಯಿಂದಾಗಿ ಜಗಳೂರು ಕ್ಷೇತ್ರ ಶಾಪ ಮುಕ್ತವಾಗಲಿದೆ. ಜೊತೆಗೆ ಅಂತರ್ಜಲ ಹೆಚ್ಚಾಗಿ ರೈತರ ಬದುಕು ಹಸನಾಗಲಿದೆ ಎಂದರು.

ತರಳಬಾಳು ಶ್ರೀಗಳು ನಮಗೆಲ್ಲಾ ಆಧುನಿಕ ಭಗೀರಥರಾಗಿದ್ದಾರೆ. ಈ ಮಹ ತ್ವದ ಯೋಜನೆಯ ಕಾಮಗಾರಿಯ ಪ್ರಗತಿ ಬಗ್ಗೆ ಶ್ರೀಗಳು ಮಾಹಿತಿ ಪಡೆಯುತ್ತಿದ್ದು, ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸಲಹೆ ಸೂಚನೆ ನೀಡುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು. 

 ಸಂಸದ ಜಿ.ಎಂ.  ಸಿದ್ದೇಶ್ವರ್ ಅವರೂ ಸಹ ಕಾಮಗಾರಿಯ ಗುಣಮಟ್ಟ ಹಾಗೂ ಸಮರ್ಪಕವಾಗಿ ನಿರ್ವಹಿಸುವಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದಾಗಿ ಈ ಕೆರೆ ತುಂಬಿಸುವ ಮಹತ್ವದ ಯೋಜನೆ ಅಡೆತಡೆಯಿಲ್ಲದೆ ಸಮರ್ಪಕವಾಗಿ ನಡೆಯುತ್ತಿದೆ ಎಂದು ಶಾಸಕ  ರಾಮಚಂದ್ರ ಸಂತಸ ಹಂಚಿಕೊಂಡರು. 

 ಮುಂದಿನ ಮಳೆಗಾಲದ ವೇಳೆಗೆ ಕೆರೆಗಳಿಗೆ ನೀರು ಬರುವುದು ಬಹುತೇಕ ಖಚಿತ.  ಜನವರಿಯ ವೇಳೆಗೆ ಪ್ರಾಯೋಗಿಕವಾಗಿ  ನೀರು ಹರಿಸಲಾಗುವುದು.  ಈ ಬಗ್ಗೆ ಇಂಜಿನಿಯರ್ ಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು. 

 ಕೊರೊನಾ ಸಂದರ್ಭವಾಗಿರುವುದರಿಂದ  ನಾನೊಬ್ಬನೇ ಕಾಮಗಾರಿ  ಪರಿಶೀಲಿಸಿದ್ದೇನೆ. ಮುಂದಿನ ದಿನಗಳಲ್ಲಿ ರೈತರು, ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ  ಪರಿಶೀಲನೆ ನಡೆಸುವುದಾಗಿ ಶಾಸಕರು ತಿಳಿಸಿದರು.

ಯೋಜನೆಯ ಸಂಕ್ಷಿಪ್ತ ಮಾಹಿತಿ ನೀಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ನಟರಾಜ್ ಎಸ್.ಪಾಟೀಲ್,  ಸುಮಾರು 660 ಕೋಟಿ ರೂಪಾಯಿಗಳ ಈ ಯೋಜನೆ ದೀಟೂರು ಬಳಿ ಜಾಕ್‌ವೆಲ್ ಕಾಮಗಾರಿ ಭರದಿಂದ ಸಾಗಿದೆ. ಇಲ್ಲಿಂದ 31 ಕಿಲೋಮೀಟರ್ ದೂರವಿರುವ ಚಟ್ನಹಳ್ಳಿ ಗುಡ್ಡದ  ಮೇಲೆ ಸಂಗ್ರಹಣ ಘಟಕ ಕಾಮಗಾರಿ ನಡೆಯುತ್ತಿದೆ. 2475 ಹೆಚ್‌ಪಿ ಮೋಟಾರ್ ಗಳನ್ನು ಅಳವಡಿಸಲಾಗುವುದು. ಏಕ ಕಾಲದಲ್ಲಿಯೇ ಎಂಟು ಪಂಪ್ ಸೆಟ್‌ಗಳು ಕಾರ್ಯ ನಿರ್ವಹಿಸಲಿದ್ದು, ಒಂದನ್ನು  ಸ್ಟ್ಯಾಂಡ್ ಬೈ ಇಡಲಾಗುವುದು ಎಂದರು.

 ಎಲ್ಲಾ ಕೆರೆಗಳಿಗೂ ಎಂಎಸ್ ಪೈಪುಗಳನ್ನು ಅಳವಡಿಸಲಾಗುತ್ತಿದೆ. ರೈಸಿಂಗ್ ಮೇನ್‌ನಲ್ಲಿ 4.5 ಕಿಲೋಮೀಟರ್ ಹಾಗೂ 270 ಕಿಲೋಮೀಟರ್ ವಿತರಣಾ ಪೈಪ್‌ಲೈನ್ ಅಳವಡಿಸಲಾಗುವುದು ಇದರಲ್ಲಿ ಐವತ್ತು ಕಿಲೋಮೀಟರ್ ಕಾಮಗಾರಿ ಮುಕ್ತಾಯವಾಗಿದೆ ಎಂದು ತಿಳಿಸಿದರು. 

 ಚಟ್ನಿ ಹಳ್ಳಿ ಗುಡ್ಡದಿಂದ 2 ಪೈಪ್ ಗಳು ಪ್ರತ್ಯೇಕಗೊಂಡು ಅರಸೀಕೆರೆ ಹೋಬಳಿಯ ಆರು ಕೆರೆಗಳಿಗೆ ಒಂದು ಪೈಪ್ ಲೈನ್ ಹಾಗೂ ಜಗಳೂರು ತಾಲೂಕಿನ 51 ಕೆರೆಗಳಿಗೆ  ಒಂದು ಪೈಪ್ ಲೈನ್ ಮೂಲಕ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಯಲಿದೆ.    ನದಿಯಿಂದ ಪ್ರತಿವರ್ಷ ಜೂನ್ ನಿಂದ ಅಕ್ಟೋಬರ್ ತಿಂಗಳವರೆಗೆ ನೀರು ಎತ್ತುವ ಯೋಜನೆ ಇದಾಗಿದೆ. ತಾಲ್ಲೂಕಿನ 57 ಕೆರೆಗಳ ಪೈಕಿ ತುಪ್ಪದಹಳ್ಳಿ ಕೆರೆಗೆ 0.3 ಟಿಎಂಸಿ ನೀರು ಸಂಗ್ರಹವಾಗಲಿದೆ. ಉಳಿದಂತೆ ಗಡಿಮಾಕುಂಟೆ ಮತ್ತು ಜಗಳೂರು ಕೆರೆಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಲಿದೆ ಎಂದರು.  ಮುಖಂಡರಾದ ಚಂದ್ರಣ್ಣ, ಶಿವಕುಮಾರ್ ಹಾಗೂ ಇತರೆ ಸಿಬ್ಬಂದಿ  ಇದ್ದರು.

error: Content is protected !!