ದಾವಣಗೆರೆ, ಜೂ.29- ತೈಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷವಾಗಿ 6 ಜೋಡೆತ್ತಿನ ಬಂಡಿಗಳಲ್ಲಿ ಸವಾರಿ ಮಾಡುವ ಮುಖೇನ ಕೇಂದ್ರ ಸರ್ಕಾರದ ವಿರುದ್ಧ ಇಂದು ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ನೇತೃತ್ವದಲ್ಲಿ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಎತ್ತಿನ ಬಂಡಿಯಲ್ಲಿ, ಸಂಚರಿಸುತ್ತಾ ಕೇಂದ್ರ ಸರ್ಕಾರದ ತೈಲ ಬೆಲೆ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗಮನ ಸೆಳೆದರು. ನಂತರ ಉಪವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಹೆಚ್.ಬಿ. ಮಂಜಪ್ಪ ಮಾತನಾಡಿ, 2014ರ ಲೋಕಸಭಾ ಚುನಾವಣೆಗೂ ಮುನ್ನ ಈ ಜನ ವಿರೋಧಿ ಬಿಜೆಪಿ ಪಕ್ಷ ಜನರಿಗೆ ಇಲ್ಲ-ಸಲ್ಲದ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿತು. ಆ ಸುಳ್ಳುಗಳಲ್ಲಿ ಪೆಟ್ರೋಲ್-ಡೀಸೆಲ್ ಬಗ್ಗೆಯೂ ಸಹ ಕಡಿಮೆ ಮೊತ್ತದಲ್ಲಿ ನೀಡು ವುದಾಗಿ ಭರವಸೆ ನೀಡಿ, ಇದೀಗ ಜನ ರಿಂದ ಹೆಚ್ಚು ಮೊತ್ತವನ್ನು ಪಡೆಯುವುದರ ಮುಖಾಂತರ ಹಗಲು ದರೋಡೆ ಮಾಡು ತ್ತಿದೆ. ನರೇಂದ್ರ ಮೋದಿ ಸರ್ಕಾರ ಕಳೆದ ಆರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ 18 ಸಾವಿರ ಕೋಟಿ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇದರ ಪ್ರತಿ ಫಲವನ್ನು ಅನುಭವಿಸುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಕೊರೊನಾ ಸಂದರ್ಭ ದಲ್ಲಿ ಎಲ್ಲಾ ಗೃಹ ಬಳಕೆಯ ವಸ್ತುಗಳ ಬೆಲೆಯೂ ಹೆಚ್ಚಾಗಿದ್ದು, ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟವಾಗಿದೆ. ಕಳೆದ 20 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಾ ಬರುತ್ತಿದ್ದು, 90ರ ಗಡಿಯತ್ತ ಬಂದು ನಿಂತಿದೆ. ಈ ಕೂಡಲೇ ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪರಿ ಗಣಿಸಿ ಜನರ ಕಷ್ಟಗಳಿಗೆ ಸ್ಪಂದಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಶೇ. 820ರಷ್ಟು, ಪೆಟ್ರೋಲ್ ಮೇಲಿನ ಸುಂಕದಲ್ಲಿ ಶೇ.258ರಷ್ಟು ಹೆಚ್ಚಳ ಮಾಡಿದೆ. ಇದರಿಂದ ದೇಶದ ಜನರ ಮೇಲೆ ದುಸ್ತರ ನೋವು ಮತ್ತು ಸಂಕಟವನ್ನು ಉಂಟು ಮಾಡಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅನಿತಾ ಬಾಯಿ ಮಾಲತೇಶರಾವ್ ಜಾಧವ್, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್.ಬಸವಂತಪ್ಪ, ಪಾಲಿಕೆ ಸದಸ್ಯರುಗಳಾದ ದೇವರಮನೆ ಶಿವಕುಮಾರ್, ಗಡಿಗುಡಾಳ್ ಮಂಜುನಾಥ, ವಿನಾಯಕ, ಆಶಾ ಉಮೇಶ್, ಶಾಮನೂರು ಕಲ್ಲಳ್ಳಿ ನಾಗರಾಜ್, ಮುಖಂಡರುಗಳಾದ ಪಾಮೇನಹಳ್ಳಿ ನಾಗರಾಜ್, ಸುಷ್ಮಾ ಪ್ರಕಾಶ್ ಪಾಟೀಲ್, ಆಶಾ ಮುರಳಿ, ಉಮಾದೇವಿ, ಗೀತಾ ಪ್ರಶಾಂತ್, ರಾಧಾ ಬಾಯಿ, ಕೆ.ಜಿ. ಶಿವಕುಮಾರ್, ಅಣಜಿ ಚಂದ್ರಶೇಖರ್, ಮುದೇಗೌಡ್ರು ಗಿರೀಶ್, ಎಸ್.ಕೆ. ಚಂದ್ರಪ್ಪ, ಮಾಗಾನಹಳ್ಳಿ ಪರಶುರಾಮ್, ಎಸ್. ಮಲ್ಲಿಕಾರ್ಜುನ್, ಕೇರಂ ಗಣೇಶ್, ಜಿ.ಸಿ.ನಿಂಗಪ್ಪ, ಆವರಗೆರೆ ಪರಮೇಶ್, ಡೋಲಿ ಚಂದ್ರು, ನಿಖಿಲ್, ರಾಕೇಶ್, ಎಲ್.ಎಮ್.ಎಚ್. ಸಾಗರ್, ಮೊಹಮ್ಮದ್ ಖಾಲಿದ್, ರಾಘವೇಂದ್ರ ಗೌಡ, ರಹಮತ್ ಅಲಿ, ಗೋವಿಂದ್ ಹಾಲೇಕಲ್ಲು, ಎಸ್.ಕೆ. ಮಾಲತೇಶ್, ಶಿವಕುಮಾರ್ ಬಾತಿ, ನಿಖಿಲ್, ರಂಗಸ್ವಾಮಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.