ಗಾಂಧಿ ಜಯಂತಿಯಂದೇ ರೈತ, ಕಾರ್ಮಿಕರ ಉಪವಾಸ ಸತ್ಯಾಗ್ರಹ

ದಾವಣಗೆರೆ, ಅ.2- ಮಹಾತ್ಮ ಗಾಂಧಿ ಜಯಂತಿ ದಿನವಾದ ಇಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಇಂದು ಉಪವಾಸ ಧರಣಿ ಸತ್ಯಾಗ್ರಹವನ್ನು ನಡೆಸುವುದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲಾಯಿತು. 

ನಗರದ ಪಾಲಿಕೆ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಧರಣಿ ಹೂಡಿದ್ದ ಸಮಿತಿ ಪದಾಧಿಕಾರಿಗಳು, ಕಾರ್ಮಿಕ ಮತ್ತು ರೈತ ಮುಖಂಡರು ಕೇಂದ್ರ- ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ಭೂ ಸುಧಾರಣಾ ಕಾಯ್ದೆ ಜಾರಿಯನ್ನು ವಿರೋಧಿಸಿದರು. 

ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದೇಶಕ್ಕೆ ಅನ್ನ ನೀಡುವ ರೈತ ಮತ್ತು ಕಾರ್ಮಿಕರ ಮನದಾಳದ ಮಾತನ್ನು ಆಲಿಸದೇ ಭೂಗಳ್ಳರ, ಬಂಡವಾಳಶಾಹಿಗಳ ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸುವ ಸಲುವಾಗಿ ಈ ಎಲ್ಲಾ ಕಾಯಿದೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್ ಮಾತನಾಡಿ, ಬ್ರಿಟಿಷರ ಆಳ್ವಿಕೆಯಿಂದ ಉಪವಾಸ ಸತ್ಯಾಗ್ರಹದ ಮೂಲಕ ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಕಾರಣ ಅದೇ ರೀತಿ ಅ.2ರ ಗಾಂಧಿ ಜಯಂತಿಯಂದು ಉಪವಾಸ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ರೈತ, ಕಾರ್ಮಿಕರ ವಿರೋಧಿ ನೀತಿ ಇರುವ ಕಾಯಿದೆ ಹಿಂಪಡೆಯ ಬೇಕು ಎಂದು ಸರ್ಕಾರಗಳಿಗೆ ಒತ್ತಾಯಿಸುತ್ತಿದ್ದೇವೆಂದರು.

ರೈತ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ್, ಮುಖಂಡ ಹೊನ್ನೂರು ಮುನಿಯಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್, ಎಐಕೆಎಸ್‍ಸಿಸಿ ಜಿಲ್ಲಾ ಸಂಚಾಲಕ ಆವರಗೆರೆ ಹೆಚ್.ಜಿ. ಉಮೇಶ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಈ. ಶ್ರೀನಿವಾಸ್, ಅಂಜಿನಪ್ಪ ಪೂಜಾರಿ, ಆನಂದರಾಜು, ಕೆರನಹಳ್ಳಿ ರಾಜು, ಎ. ತಿಪ್ಪೇಶ್, ಐರಣಿ ಚಂದ್ರು, ಕೆ. ಬಾನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!