‘ಕ್ಯಾನ್ಸರ್ ನಡೆ-ಕೋವಿಡ್ ತಡೆ’ ಅಭಿಯಾನಕ್ಕೆ ಚಾಲನೆ

ದಾವಣಗೆರೆ, ಅ.2- ‘ಕ್ಯಾನ್ಸರ್ ನಡೆ-ಕೋವಿಡ್ ತಡೆ’ ಅಭಿಯಾನಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ  ವರದಿಗಾರರ ಕೂಟದ ಸಹಯೋಗದೊಂದಿಗೆ ಇಂದು ಚಾಲನೆ ನೀಡಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ  ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಈ ಅಭಿಯಾನ  ಪ್ರಚಾರದ ಭಿತ್ತಿ ಪತ್ರವನ್ನು (ಪೋಸ್ಟರ್) ಬಿಡುಗಡೆ ಮಾಡಿದರು. 

ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಹೈದರಾಬಾದ್ ನ ಗ್ರೇಸ್ ಕ್ಯಾನ್ಸರ್ ಫೌಂಡೇಷನ್ ಇದೇ ದಿನಾಂಕ 10ರ ಶನಿವಾರ ಬೆಳಿಗ್ಗೆ 8 ಗಂಟೆಗೆ `ಕ್ಯಾನ್ಸರ್ ನಡೆ-ಕೋವಿಡ್ ತಡೆ’ ಅಭಿಯಾನವನ್ನು ಆಯೋಜಿಸಿದೆ. ಜಾಗತಿಕವಾಗಿ ಪರೋಕ್ಷವಾಗಿ ನಡೆಯುವ ಈ ಅಭಿಯಾನ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ ಮತ್ತು ಮಾಧ್ಯಮಗಳ ಮೂಲಕ ಜನರನ್ನು ತಲುಪಿ ಜಾಗೃತಿ ಮೂಡಿಸಲಿದೆ.

ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ. ಆರ್.ಆರಾಧ್ಯ, ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ, ಕ್ಯಾನ್ಸರ್ ಫೌಂಡೇಷನ್ ಕಾರ್ಯದರ್ಶಿ ಡಾ.ಸುನೀಲ್ ಬ್ಯಾಡಗಿ, ನಿರ್ದೇಶಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಚೇರ್ ಮನ್ ಡಾ.ಎ.ಎಂ. ಶಿವಕುಮಾರ್ ಭಾಗವಹಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸಿ.ಇ.ಒ ಪದ್ಮಾ ಬಸವಂತಪ್ಪ, ದೂಡಾ ಅಧ್ಯಕ್ಷ ಶಿವಕುಮಾರ್ ಮತ್ತಿತರರು  ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ರಾಯಭಾರಿ ಹಾಗೂ ಕಲಾವಿದ ಆರ್.ಟಿ. ಅರುಣ್ ಕುಮಾರ್,  ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ಜಾಗೃತಿ ಅಭಿಯಾನವನ್ನು ಪರೋಕ್ಷವಾಗಿ ಮಾಡುತ್ತಿದ್ದು, ಇದೇ ದಿನಾಂಕ 10ರ ಬೆಳಿಗ್ಗೆ 8 ಗಂಟೆಗೆ ಭಾಗವಹಿಸುವವರು ತಮ್ಮ ಅನುಕೂಲಕರ ಸ್ಥಳದಲ್ಲಿ 20 ನಿಮಿಷ ವಾಕ್ ಮಾಡಬೇಕು. ಆ ಭಾಗವಹಿಸುವಿಕೆ ಯನ್ನು ಸೆಲ್ಫೀ ವಿಡಿಯೋ ಮುದ್ರೀಕರಿಸಿ ಅದನ್ನು 40ರಿಂದ 90 ಸಕೆಂಡುಗಳಲ್ಲಿ ಸಾಂದ್ರೀಕರಿಸಿ ನಮ್ಮ Davanagere Cancer Foundation ಫೇಸ್ ಬುಕ್ ಪೇಜಿಗೆ ಇಲ್ಲವೇ Davanagere Cancer Foundation ಇನ್ ಸ್ಟ್ರಾಗ್ರಾಮ್ ಅಕೌಂಟ್ ಅಥವಾ [email protected] ಈ ಮೇಲ್ ವಿಳಾಸಕ್ಕೆ ಅಪ್ ಲೋಡ್ ಮಾಡಬೇಕು ಎಂದು ತಿಳಿಸಿದರು. 

ಇಲ್ಲವಾದಲ್ಲಿ ರಕ್ಷಿತ್ ರಾಯ್ಕರ್ ಇವರ 7892403271 ಮೊಬೈಲ್ ಸಂಖ್ಯೆ ಗೆ ವಾಟ್ಸ್ಯಾಪ್ ಮಾಡಬಹುದಾಗಿದೆ. ಸಂಘ-ಸಂಸ್ಥೆಯವರು ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಧರಿಸಿ ತಮ್ಮ ನಿರ್ದಿಷ್ಟ ಸ್ಥಳಗಳಲ್ಲಿ ಪಾಲ್ಗೊಂಡು ವಿಡಿಯೋ ಮುದ್ರೀಕರಿಸಿ ಕಳುಹಿಸಬಹದಾಗಿದೆ. ಈ ವಿಡಿಯೋಗಳನ್ನು ಇದೇ ದಿನಾಂಕ 10ರ ಸಂಜೆ 8 ಗಂಟೆಯ ಒಳಗೆ ಅಪ್ ಲೋಡ್ ಮಾಡಬೇಕು ಎಂದು ಹೇಳಿದರು.

ಹೀಗೆ ಸಂಗ್ರಹಿಸಲಾದ ವಿಡಿಯೋಗಳನ್ನು ಪರಿಶೀಲಿಸಿ ಅತ್ಯುತ್ತಮ ಐದು ವೈಯಕ್ತಿಕ ವಿಡಿಯೋಗಳಿಗೆ ತಲಾ ಎರಡು ಸಾವಿರ ರೂ.ಗಳ ಬಹುಮಾನ  ಹಾಗೂ ಸಂಘ-ಸಂಸ್ಥೆಗಳ ಮೊದಲೆರಡು ಅತ್ಯುತ್ತಮ ವಿಡಿಯೋಗಳಿಗೆ ತಲಾ ಐದು ಸಾವಿರ ರೂ.ಗಳ ಬಹುಮಾನ ವನ್ನು ನೀಡಲಾಗುವುದು ಎಂದು ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಕಾರ್ಯದರ್ಶಿ ಡಾ. ಸುನೀಲ್ ಬ್ಯಾಡಗಿ ತಿಳಿಸಿದ್ದಾರೆ.

ಮಹಿಳೆಯರಿಗಾಗಿ ಮತ್ತೊಂದು ವಿಶೇಷ ಬಹುಮಾನವನ್ನು ಎರಡು ಸಾವಿರ ರೂ.ಗಳು ಇಂಡಿಯನ್ ರೆಡ್ ಕ್ರಾಸ್ ವತಿಯಿಂದ ನೀಡಲಾಗುವುದು ಎಂದು ಹೇಳಿರುವ ಕ್ಯಾನ್ಸರ್ ಫೌಂಡೇಷನ್ ನಿರ್ದೇಶಕ ಡಾ. ಎ.ಎಂ. ಶಿವಕುಮಾರ್, ಹೆಚ್ಚು ಯುವಕರು, ವಿದ್ಯಾರ್ಥಿಗಳು ಆಸಕ್ತ ಸಂಘ-ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಕ್ಯಾನ್ಸರ್ ಹಿಮ್ಮೆಟ್ಟಿಸಬಹುದು, ಕೋವಿಡ್ ಎದುರಿಸ ಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಸಾರಬೇಕಿದೆ ಎಂದು ಕರೆ ನೀಡಿದ್ದಾರೆ.    

error: Content is protected !!