ವ್ಯಾಪಾರಿಗಳಲ್ಲಿ ಮೂಡದ ಒಮ್ಮತ

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ತಾನೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸುವು ದಾಗಿ ನಿರ್ಧ ರಿಸಿದ್ದು, ಈ ನಿರ್ಧಾರಕ್ಕೆ ಕೆಲ ವ್ಯಾಪಾರಸ್ಥರು ಮನ್ನಣೆ ನೀಡದೇ ಇರುವ ಕಾರಣ ಎಲ್ಲರಲ್ಲೂ ಗೊಂದಲ ಮನೆ ಮಾಡಿದೆ.

ಮೊನ್ನೆ ಶಾಸಕ ಎಸ್. ರಾಮಪ್ಪನವರ ಅಧ್ಯಕ್ಷತೆಯಲ್ಲಿ ವ್ಯಾಪಾರಸ್ಥರು, ಛೇಂಬರ್ ಆಫ್ ಕಾಮರ್ಸ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಂಕರ್ ಖಟಾವ್ಕರ್ ಹಾಗೂ ಸಮಿತಿಯ ಸದಸ್ಯರು ಸ್ವಯಂ ಪ್ರೇರಿತರಾಗಿ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಗಳ ಕಾಲ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡುವುದಾಗಿ ಭರವಸೆ ನೀಡಿದ್ದರು. ಖಟಾವ್ಕರ್ ಮಾತನಾಡಿ ನಮಗೆ ಹಣ ಗಳಿಸುವುದು ಮುಖ್ಯ ಅಲ್ಲ ಜನರ ಪ್ರಾಣ ಮುಖ್ಯ. ಹಾಗಾಗಿ ನಗರದಲ್ಲಿ ನಾಳೆಯಿಂದ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಿ ಅಂಗಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿದ್ದರು.

ಆದರೆ ಕೆಲ ವ್ಯಾಪಾರಿಗಳು ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರ ಮಾತಿಗೆ ಸಹಮತ ನೀಡದೇ ಇರುವುದು  ಕಂಡು ಬಂದಿದೆ. ಕಿರಾಣಿ ಅಂಗಡಿ, ಬಟ್ಟೆ ಅಂಗಡಿಗಳು, ಫುಟ್‌ವೇರ್‌ಗಳು,  ಬೇಕರಿ,  ಹಾರ್ಡವೇರ್, ಗ್ಯಾರೇಜ್, ತರಕಾರಿ, ಕ್ಷೌರಿಕ ಅಂಗಡಿ, ಮಾಲ್‌ಗಳು, ಮೋರ್, ಡಾಬಾಗಳು, ಮಧ್ಯದ ಅಂಗಡಿಗಳು ಸೇರಿದಂತೆ ಅನೇಕ ವ್ಯಾಪಾರಸ್ಥರು ಮೇಲ್ಕಂಡ ಸಮಯವನ್ನು ಪಾಲನೆ ಮಾಡದೆ ತಮ್ಮದೇ ರೀತಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡುಬರುತ್ತಿದೆ. ಇದರಿಂದ ಛೇಂಬರ್ ಅಧ್ಯಕ್ಷರ ಮಾತಿಗೂ ಬೆಲೆ ದೊರಕದಂತಾಗಿದೆ. ಇದಕ್ಕೂ ಮುಂಚೆ ಅಂದರೆ ಹರಿಹರದಲ್ಲಿ ಕೊರೊನಾ ಪ್ರಕರಣಗಳು ಇಲ್ಲದ ವೇಳೆಯಲ್ಲಿಯೇ  ನಗರದ ದೇವಸ್ಥಾನ ರಸ್ತೆಯ ಕಲ್ಯಾಣ ಮಂಟಪವೊಂದರಲ್ಲಿ  ಕೆಲ ವ್ಯಾಪಾರಸ್ಥರ ಗುಂಪು ಸಭೆ ನಡೆಸಿ, ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ವ್ಯಾಪಾರ ವಹಿವಾಟು ನಡೆಸಲು ತೀರ್ಮಾನ ತೆಗೆದುಕೊಂಡಿತ್ತು. ಅದರಂತೆ ಕೊರೊನಾ ಪ್ರಕರಣಗಳಿಲ್ಲದಿದ್ದರೂ, ಸಂಜೆ 5 ಗಂಟೆಗೆ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ವ್ಯಾಪಾರಿಗಳಲ್ಲಿ ಅನೇಕರು ಛೇಂಬರ್ ಅಧ್ಯಕ್ಷ ಮಾತಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಈ ಕಾರಣದಿಂದ ನಗರದಲ್ಲಿ ಕೆಲವು ಅಂಗಡಿಗಳು ಸಂಜೆ 5 ರವರೆಗೆ ತೆರೆದಿದ್ದರೆ, ಇನ್ನು ಕೆಲವು ಅಂಗಡಿಗಳು ಮಧ್ಯಾಹ್ನವೇ ಬಾಗಿಲು ಮುಚ್ಚುತ್ತಿವೆ. ಇದರಿಂದಾಗಿ ಅಧಿಕಾರಿಗಳೂ ಸೇರಿದಂತೆ ಸಾರ್ವಜನಿಕರಲ್ಲೂ ಗೊಂದಲಕ್ಕೆಡೆ ಮಾಡುತ್ತಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವ್ಯಾಪಾರಸ್ಥರ ನಡುವೆ ಒಮ್ಮತವಿಲ್ಲದಿರುವುದು ಎದ್ದು ಕಾಣುತ್ತಿದ್ದು, ಇಷ್ಟು ದಿನಗಳ ಕಾಲ ಅಧಿಕಾರಿಗಳ ತಂಡ ಪಟ್ಟ ಶ್ರಮವೆಲ್ಲ ವ್ಯರ್ಥವಾಯಿತೇ ಎಂಬಂತಾಗಿದೆ.

ಈ ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ  ಅವರು ವ್ಯಾಪಾರಸ್ಥರ ಸಭೆಯನ್ನು ಆಯೋಜಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಗೊಳ್ಳಲು ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.


ಚಿದಾನಂದ್ ಎಂ. ಕಂಚಿಕೇರಿ
[email protected]

 

error: Content is protected !!