ರಿಸರ್ವ್‌ನ ವ್ಯಾಪ್ತಿಯಲ್ಲಿ ಸಹಕಾರಿಗಳು : ಸ್ವಾಗತಾರ್ಹ

ರಿಸರ್ವ್‌ನ ವ್ಯಾಪ್ತಿಯಲ್ಲಿ ಸಹಕಾರಿಗಳು : ಸ್ವಾಗತಾರ್ಹ - Janathavaniದಾವಣಗೆರೆ,ಜೂ.27- ಎಲ್ಲಾ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಉಸ್ತುವಾರಿ ವ್ಯಾಪ್ತಿಗೆ ತರಲುದ್ದೇಶಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಸ್ವಾಗತಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾರ್ವಜನಿಕರು ಸಹಕಾರಿ ಬ್ಯಾಂಕುಗಳಲ್ಲಿಟ್ಟಿರುವ ಠೇವಣಿಗಳ ಮೇಲೆ ಹೆಚ್ಚಿನ ಭರವಸೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮ ಸೂಕ್ತವಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದಂತಹ ದೊಡ್ಡ ದೇಶದಲ್ಲಿ ಈ ಹಿಂದೆ ಸುಮಾರು 11 ಸಾವಿರ ಟ್ರಿಲಿಯನ್ ಡಾಲರ್ ನಷ್ಟು ಆರ್ಥಿಕವಾಗಿ ನಷ್ಟವಾಗಿತ್ತು. ಅದರಲ್ಲಿ ಬ್ಯಾಂಕುಗಳೂ ಸೇರಿದ್ದವು. ಅಂತಹ ಪರಿಸ್ಥಿತಿ ಭಾರತಕ್ಕೆ ಬಾರದಿರುವಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಕಠಿಣ ಧೋರಣೆಗಳೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಡವರು, ದುರ್ಬಲ ವರ್ಗದವರು, ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ ಸಾಲದ ಸೌಲಭ್ಯ ಒದಗಿಸುವುದರ ಮೂಲಕ ಆ ಎಲ್ಲಾ ವರ್ಗಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡುವಲ್ಲಿ ಸಹಕಾರಿ ಬ್ಯಾಂಕುಗಳ ಪಾತ್ರ ಪ್ರಮುಖವಾಗಿದೆ.

ಆದರೆ, ಯಾವುದೇ ಒಂದೆರಡೆ ಬ್ಯಾಂಕುಗಳು ಗ್ರಾಹಕರನ್ನು ವಂಚಿಸಿದ್ದರೆ ಅದನ್ನು ಇಡೀ ಸಾಮೂಹಿಕವಾಗಿ ಸಹಕಾರಿ ಬ್ಯಾಂಕುಗಳಿಗೇ ಹಣೆಪಟ್ಟಿ ಕಟ್ಟುವುದು ಸಮಂಜಸವಲ್ಲ ಎಂದು ಅವರು ಉದಾಹರಣೆಯೊಂದಿಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕ್ ರಕ್ಷಿಸಬೇಕು ಎಂದು ಕೇಳಿಕೊಂಡಿರುವ ಮುರುಗೇಶ್, ಠೇವಣಿದಾರರ ಮತ್ತು ಗ್ರಾಹಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಸಹಕಾರಿ ಬ್ಯಾಂಕುಗಳ ಹಿಡಿತ ಸಾಧಿಸಲಿ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ಬ್ಯಾಂಕುಗಳಿಂದ ತಕ್ಷಣವೇ ಸಾಲ ನೀಡಲು ಸಾಧ್ಯವಿಲ್ಲ. ಎಲ್ಲಾ ವರ್ಗಗಳಿಗೂ ಕೂಡಲೇ ಸಾಲದ ಸೌಲಭ್ಯ ಒದಗಿಸಲು ಸಹಕಾರಿ ಬ್ಯಾಂಕುಗಳಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಬ್ಯಾಂಕುಗಳ ಪಾಲೂ ಇದೆ ಎಂದು ಮುರುಗೇಶ್ ಪ್ರತಿಪಾದಿಸಿದ್ದಾರೆ.

error: Content is protected !!