ದಾವಣಗೆರೆ, ಅ.1- ದೆಹಲಿಯಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಖಂಡಿಸಿ ಹಾಗೂ ಈ ಪ್ರಕರಣವನ್ನು ಫಾಸ್ಟ್ರ್ಯಾಕ್ ಕೋರ್ಟಿನಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ನಿದರ್ಶನ ಶಿಕ್ಷೆ ವಿಧಿಸಬೇಕು ಮತ್ತು ಅಶ್ಲೀಲತೆ ಡ್ರಗ್ಸ್ ಮತ್ತು ಮದ್ಯವನ್ನು ಕೊನೆಗೊಳಿಸುವಂತೆ ಆಗ್ರಹಿಸಿ ನಗರದಲ್ಲಿ ಇಂದು ಎಐಡಿಎಸ್‍ಓ ಎಐಡಿವೈಓ, ಎಐಎಂಎಸ್‍ಎಸ್ ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧಿ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅತ್ಯಾಚಾರಕ್ಕೆ ತುತ್ತಾಗಿದ್ದ ಉತ್ತರ ಪ್ರದೇಶದ ಹತ್ರಾಸ್‍ನ ಯುವತಿಯು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ. ಅವಳನ್ನು ಗುಂಪು ಅತ್ಯಾಚಾರಗೈದ ನಾಲ್ಕು ಜನ ಯುವಕರು ಅವಳ ನಾಲಿಗೆಯನ್ನು ಕತ್ತರಿಸಿ ಅವಳ ಬೆನ್ನುಮೂಳೆಯನ್ನು ಮುರಿದು ಮತ್ತು ಅವಳನ್ನು ಬಹುಪಾಲು ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಖಂಡನೀಯ. ನಮ್ಮ ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಯನ್ನು ಇಂತಹ ಘಟನೆಗಳು ತೋರಿಸುತ್ತವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ನಮ್ಮ ದೇಶದ ಮಹಿಳೆಯರು ಹಾಗೂ ಮಕ್ಕಳ ಘನತೆಯನ್ನು ಕಾಪಾಡುವಲ್ಲಿ ಸೋತು ಹೋಗಿವೆ. ಭಾರತೀಯ ಸಂಸ್ಕೃತಿಯ ಹರಿಕಾರರು ಈ ದೇಶದ ಮಹಿಳೆಯರನ್ನು ರಕ್ಷಿಸುವುದರ ಕುರಿತು ಯಾವುದೇ ಕಾಳಜಿ ಹೊಂದಿಲ್ಲದಿರುವುದು ಶೋಚನೀಯ ಮತ್ತು ನಾಚಿಕೆಗೇಡಿನ ಸಂಗತಿ. ಅದಕ್ಕೆ ವಿರುದ್ಧವಾಗಿ ಕೇವಲ ಲಾಭ ಮಾಡುವ ಕಾರ್ಪೊರೇಟ್ ಕುಳಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ ನಗ್ನತೆ, ಅಶ್ಲೀಲತೆ ಮತ್ತು ಮದ್ಯಪಾನ ಮುಂತಾದವುಗಳಿಗೆ ಸರ್ಕಾರಗಳು ಬೆಂಬಲ ಸೂಚಿಸುತ್ತವೆ. ಮಹಿಳೆಯು ಇಂದು ಅತ್ಯಾಚಾರ ಮಾಡಬಲ್ಲ ಮತ್ತು ಕೊಲೆ ಮಾಡಬಲ್ಲ ಸರಕಾಗಿ ಪರಿವರ್ತಿಸಲ್ಪಟ್ಟಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಸಂಘಟನೆಯ ಜಂಟಿ ಕಾರ್ಯದರ್ಶಿ ಕಾವ್ಯ, ಎಐಎಂಎಸ್‍ಎಸ್ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಕುಕ್ಕವಾಡ, ಎಐಎಂಎಸ್‍ಎಸ್ ರಾಜ್ಯಾಧ್ಯಕ್ಷೆ ಬಿ.ಆರ್. ಅಪರ್ಣ, ಎಐಡಿವೈಓ ಜಿಲ್ಲಾಧ್ಯಕ್ಷ ಮಧು ತೊಗಲೇರಿ, ಎಐಎಂಎಸ್‍ಎಸ್ ಜಿಲ್ಲಾ ಕಾರ್ಯ ದರ್ಶಿ ಕೆ. ಭಾರತಿ, ಎಐಎಂಎಸ್ ಜಿಲ್ಲಾ ಸಮಿತಿ ಸದಸ್ಯೆ ಮಮತಾ, ಎಐಡಿಎಸ್‍ಓ ಜಿಲ್ಲಾ ಸಮಿತಿ ಸದಸ್ಯೆ ಸುಮನ್, ಧನುಷ್ ಸೇರಿದಂತೆ ಇತರರು ಭಾಗವಹಿಸಿದ್ದರು.