ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್
ದಾವಣಗೆರೆ, ಅ.1 – ಎಷ್ಟೇ ಪುಸ್ತಕ ಓದಿ ಜ್ಞಾನ ಪಡೆದರೂ ಹಿರಿಯರ ಅನುಭವದ ಜ್ಞಾನಕ್ಕೆ ಸಮವಿಲ್ಲ ಎಂದು ಹಿರಿಯ ನಾಗರಿಕರ ನ್ಯಾಯಮಂಡಳಿ ಅಧ್ಯಕ್ಷರೂ ಆಗಿರುವ, ಉಪವಿಭಾಗಾಧಿಕಾರಿ ಶ್ರೀತಮಿ ಮಮತಾ ಹೊಸಗೌಡರ್ ಹೇಳಿದರು.
ನಗರದ ಶ್ರೀ ಡಾ. ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ ಹಿರೇಮಠದಲ್ಲಿ ಇಂದು ಆಯೋಜಿಸಲಾಗಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯರಿರದಿದ್ದರೆ ಬದುಕಿಗೆ ಸ್ಫೂರ್ತಿಯೇ ಇರುವುದಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಹಿರಿಯ ನಾಗರಿಕರೊಂದಿಗೆ ಅವರ ಮಕ್ಕಳನ್ನೂ ಕರೆ ತರುವಂತಾಗಬೇಕು. ಹಿರಿಯರಿಂದ ಕಿರಿಯರಿಗೆ ಸ್ಪೂರ್ತಿ ತುಂಬುವ ಕೆಲಸವಾಗಬೇಕು ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಮಕ್ಕಳು ತಂದೆ, ತಾಯಿಗಳು ಇರದಿದ್ದರೆ ಅನಾಥಾಶ್ರಮ ಸೇರುತ್ತಾರೆ. ಆದರೆ ಈಗ ಮಕ್ಕಳಿದ್ದರೂ ತಂದೆ-ತಾಯಂದಿರು ವೃದ್ಧಾಶ್ರಮ ಸೇರುತ್ತಿದ್ದಾರೆ ಇದು ಸರಿಯಲ್ಲ. ಮಕ್ಕಳು ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾದ ಶ್ರೀಮತಿ ಸಾಕಮ್ಮ ಗಂಗಾಧರನಾಯ್ಕ ಮಾತನಾಡಿ, ಹಿರಿಯರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಅದರಲ್ಲೂ ಕೊರೊನಾ ಇರುವ ಇಂತಹ ಸಮಯದಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರ ಸಂಘದ ಗೌರವ ಕಾರ್ಯದರ್ಶಿ ಎಸ್.ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಿರಿಯ ನಾಗರಿಕರ ದಿನವನ್ನು ಹಿರಿಯರೇ ಆಚರಿಸಿಕೊಳ್ಳುವುದಕ್ಕಿಂತ ಕಿರಿಯರು ಆಚರಿಸಿದರೆ ಅರ್ಥಗರ್ಭಿತವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಮಹಾನಗರಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಎಸ್.ಟಿ.ಕುಸುಮಶ್ರೇಷ್ಠಿ, ದೇವರಾಜಚಾರ್, ಹಾಲಪ್ಪ, ಎ.ಜಯಣ್ಣ, ವೆಂಕಟ ರೆಡ್ಡಿ, ಶಾನವಾಜ್ ಚಿತವಾಲ್ ಹಾಗು ಇತರರು ಉಪಸ್ಥಿತರಿದ್ದರು. ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಶಶಿಧರ್ ಅತಿಥಿಗಳನ್ನು ಸ್ವಾಗತಿಸಿದರು. ಅಂಧ ಹೆಣ್ಣು ಮಕ್ಕಳ ಶಾಲೆಯ ಅಧೀಕ್ಷಕ ಡಾ.ಕೆ.ಕೆ. ಪ್ರಕಾಶ್ ನಿರೂಪಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಹಿರಿಯ ನಾಗರಿಕರ ಸಂಘ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.