ಕಲಿಯುವುದು ನಿಲ್ಲಿಸಿದರೆ ವರ್ಷದಲ್ಲೇ ಅರೆ ಜೀವ

ಕಲಿಯುವುದು ನಿಲ್ಲಿಸಿದರೆ ವರ್ಷದಲ್ಲೇ ಅರೆ ಜೀವ - Janathavaniದಾವಿವಿ ಘಟಿಕೋತ್ಸವದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್

ದಾವಣಗೆರೆ, ಸೆ. 30 – ಕಲಿಕೆ ಎಂಬುದು ಕಾಲೇಜಿಗಷ್ಟೇ ಅಲ್ಲ, ಇಡೀ ಜೀವನಕ್ಕೆ ಬೇಕಿದೆ. ವೇಗವಾಗಿ ಬದಲಾ ಗುವ ತಂತ್ರಜ್ಞಾನದ ಕಾಲದಲ್ಲಿ ಕಲಿಕೆ ನಿಲ್ಲಿಸಿದರೆ ವರ್ಷದಲ್ಲೇ ಉದ್ಯೋಗ ಸಾಮರ್ಥ್ಯ ಕಳೆದುಕೊಳ್ಳುತ್ತೀರಿ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆನ್‌ಲೈನ್‌ ಮೂಲಕ ಮಾತನಾಡುತ್ತಿದ್ದ ಅವರು, 1950 ಹಾಗೂ 60ರ ದಶಕದಲ್ಲಿ ಕಾಲೇಜಿನಲ್ಲಿ ಕಲಿತಿದ್ದು ನಂತರ 15-20 ವರ್ಷಗಳವರೆಗೆ ಉದ್ಯೋಗಕ್ಕೆ ಉಪಯುಕ್ತವಾಗಿರುತ್ತಿತ್ತು ಎಂದು ಹೇಳಿದರು.

ಈಗ ತಂತ್ರಜ್ಞಾನ ವೇಗವಾಗಿ ಬದಲಾ ಗುತ್ತಿದೆ. ಕಾಲೇಜಿನ ಕಲಿಕೆ ನಂತರದ ಒಂದು ವರ್ಷಕ್ಕೂ ಪ್ರಸ್ತುತವಿರದು. ವಿಕಿರಣ ವಸ್ತುಗಳ ಆಯುಷ್ಯವನ್ನು ಹಾಫ್ ಲೈಫ್ (ಅರ್ಧ ಆಯಸ್ಸು) ಮೂಲಕ ಗುರುತಿಸಲಾ ಗುತ್ತದೆ. ಅದೇ ಭಾಷೆಯಲ್ಲಿ ಹೇಳುವು ದಾದರೆ, ಕಾಲೇಜು ಕಲಿಕೆಯ ಹಾಫ್ ಲೈಫ್ ವರ್ಷದವರೆಗೆ ಮಾತ್ರ ಎಂದು ತಿಳಿಸಿದರು.

ಈಗಾಗಲೇ ಕಲಿತಿರುವು ದನ್ನು ಕೈ ಬಿಟ್ಟು ಮರು ಕಲಿಕೆಗೆ ಮುಂದಾಗ ಬೇಕು. ಹೊಸ ಹೊಸ ವಿಷಯಗಳನ್ನು ಕಲಿಯುವ ಗುಣ ಬೆಳೆಸಿಕೊಳ್ಳಬೇಕು. ಸೃಜನಶೀಲ ಕಲಿಕೆಯ ಜೊತೆಗೆ, ಜ್ಞಾನಾರ್ಜನೆಯ ಪ್ರಕ್ರಿಯೆಯೂ ಅತಿ ಮುಖ್ಯ. ಇಲ್ಲವಾದರೆ ಕೆಲಸದಲ್ಲಿ ನೀವು ಅತಿ ವೇಗವಾಗಿ ‍§ಅರೆ ಜೀವ’ ಆಗುತ್ತೀರಿ ಎಂದು ಎಚ್ಚರಿಸಿದರು.

ಪ್ರತಿಭಾ ಪೀಳಿಗೆ : ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಕುಶಲಿಗಳಾದ ಹಾಗೂ ಜ್ಞಾನ ಹೊಂದಿದ ಪೀಳಿಗೆಯ ಅಗತ್ಯ ಭಾರತಕ್ಕಿದೆ. ಈ ಪೀಳಿಗೆ ಬದಲಾದ ಪರಿಸ್ಥಿತಿಯನ್ನು ಗ್ರಹಿಸಿ, ಸುಸ್ಥಿರ ಬೆಳವಣಿಗೆಗೆ ಅಗತ್ಯ ಅಂಶಗಳನ್ನು ಅಳವಡಿಸಿಕೊಳ್ಳಬೇಕಿದೆ.

ವಿದ್ಯಾರ್ಥಿಗಳು ಹಳೆಯ ದಾರಿಯಲ್ಲಿ ಹೆಜ್ಜೆ ಹಾಕದೇ, ತಮ್ಮದೇ ಆದ ಹೊಸ ಪಥವನ್ನು ವೇಗವಾಗಿ ರೂಪಿಸಿಕೊಳ್ಳಬೇಕು. ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು. ಜವಾಬ್ದಾರಿಯುತವಾಗಿ ವೈಜ್ಞಾನಿಕ ಸಾಮರ್ಥ್ಯ ಬಳಸಿಕೊಳ್ಳಬೇಕು ಎಂದವರು ತಿಳಿಸಿದರು.

ಕೊರೊನಾ ತಂತ್ರಜ್ಞಾನ : ಕೋವಿಡ್ -19 ನಿರ್ವಹಣೆಯಲ್ಲಿ ಮುಂಚೂಣಿ ತಂತ್ರಜ್ಞಾನ ಮಹತ್ವಪೂರ್ಣವಾಗಿ ನೆರವಾಗಿದೆ. ಕೊರೊನಾ ಸಂದರ್ಭದಲ್ಲಿ ಕೇವಲ ಆರೋಗ್ಯವಷ್ಟೇ ಅಲ್ಲದೇ, ದೈನಂದಿನ ಜೀವನಕ್ಕೂ ತಂತ್ರಜ್ಞಾನ ನೆರವಾಗಿದೆ ಎಂದರು.

ನಾನು ಈಗ ಆನ್‌ಲೈನ್ ಮೂಲಕ ಮಾತನಾಡುತ್ತಿರುವುದೂ ಸಹ ಕೊರೊನಾ ಪರಿಣಾಮವನ್ನು ಹಾಗೂ ತಂತ್ರಜ್ಞಾನದ ಉಪಯುಕ್ತತೆಯನ್ನು ತೋರಿಸುತ್ತಿದೆ ಎಂದು ಕಿರಣ್ ಕುಮಾರ್ ಹೇಳಿದರು.

ಜಗತ್ತಿನಾದ್ಯಂತ ಕೊರೊನಾ ಹರಡುತ್ತಿರುವಂತೆಯೇ ತಂತ್ರಜ್ಞಾನ ಪರಿಹಾರಗಳು, ಸೋಂಕು ನಿಗಾ ಹಾಗೂ ನಿಯಂತ್ರಣಕ್ಕೆ ನೆರವಾಗಿವೆ. ಇದರಿಂದಾಗಿ ಆರೋಗ್ಯ ವ್ಯವಸ್ಥೆ ಮೇಲಿನ ಹೊರೆ ಹಾಗೂ ಆರೋಗ್ಯ ವೃತ್ತಿಪರರ ಕಾರ್ಯ ನಿರ್ವಹಣೆಯ ಭಾರ ಕಡಿಮೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಎಸ್.ವಿ. ಹಲಸೆ, ವಿಶ್ವವಿದ್ಯಾನಿಲಯವು ನ್ಯಾಕ್ ಮಾನ್ಯತಾ ಶ್ರೇಣಿಯಿಂದ ಬಿ ಶ್ರೇಣಿ ಪಡೆದಿದೆ. ಮಾಹಿತಿ ತಂತ್ರಜ್ಞಾನದ ಕೆಲಸಗಳನ್ನು ಜಾರಿಗೊಳಿಸಿರುವುದಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿದೆ ಎಂದು ತಿಳಿಸಿದರು.

ಪ್ರಚಾರೋಪನ್ಯಾಸ ಮಾಲೆಯಡಿ 101 ಪುಸ್ತಕಗಳ ಪ್ರಕಟಣೆಗೆ ಬಿರುಸಿನ ಸಿದ್ಧತೆ ನಡೆದಿದೆ. ಬಹು ವರ್ಷಗಳ ಬೇಡಿಕೆಯಂತೆ 125 ಉನ್ನತ ಅಧ್ಯಾಪಕರ ನೇಮಕಾತಿ ಈ ವರ್ಷ ಮಾಡಲಾಗಿದೆ ಎಂದು ಹೇಳಿದರು.

ಕಿರಣ್ ಕುಮಾರ್ ಹಾಗೂ ಹಲಸೆ ಅವರು ಆನ್‌ಲೈನ್ ಮೂಲಕ ಮಾತನಾಡಿದರು. ಈ ಹಿನ್ನೆಲೆಯಲ್ಲಿ ಪರೀಕ್ಷಾಂಗ ಕುಲಸಚಿವೆ ಪ್ರೊ.ಹೆಚ್.ಎಸ್.ಅನಿತ ಮತ್ತು ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ. ಅಡವಿರಾವ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಕುಲಸಚಿವ ಡಾ. ಬಸವರಾಜ ಬಣಕಾರ, ವಿವಿಧ ವಿಭಾಗಗಳ ಡೀನ್‌ಗಳು ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

error: Content is protected !!