ದಾವಣಗೆರೆ, ಜೂ. 25 – ಓರ್ವ ಆರೋಗ್ಯ ಕಾರ್ಯಕರ್ತೆ ಸೇರಿದಂತೆ ಜಿಲ್ಲೆಯ ಏಳು ಜನರಲ್ಲಿ ಸೋಂಕಿರುವುದು ಗುರುವಾರ ದೃಢಪಟ್ಟಿದೆ.
ದಾವಣಗೆರೆ ನಗರದಲ್ಲಿ ಮೂರು, ಹೊನ್ನಾಳಿಯ ಕ್ಯಾಸಿನಕೆರೆಯಲ್ಲಿ ಎರಡು, ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿಯಲ್ಲಿ ಒಂದು ಪ್ರಕರಣ ಗಳು ದೃಢಪಟ್ಟಿವೆ. ಸೋಂಕು ದೃಢಪಟ್ಟಿರುವವರಲ್ಲಿ ಮಾಗಾನಹಳ್ಳಿಯ ಆರೋಗ್ಯ ಕಾರ್ಯಕರ್ತೆ ಸಹ ಸೇರಿದ್ದು, ಇವರಿಗೆ ಯಾವ ರೀತಿ ಸೋಂಕು ಬಂದಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.
ನಗರದ ವಿನೋಬನಗರದ ಒಬ್ಬರು ಹಾಗೂ ಬೀಡಿ ಲೇಔಟ್‌ನ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೀಡಿ ಲೇಔಟ್‌ನ ಇಬ್ಬರು ಸೋಂಕಿತರೂ ಅಪ್ರಾಪ್ತರಾಗಿದ್ದಾರೆ. ಇವರಿಗೆ ಇದೇ ಪ್ರದೇಶದ ವ್ಯಕ್ತಿಯೊಬ್ಬರಿಂದ ಸೋಂಕು ಬಂದಿದೆ ಎಂದು ಹೇಳಲಾಗುತ್ತಿದೆ.
ಇನ್ನೋರ್ವ 48 ವರ್ಷದ ವ್ಯಕ್ತಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ದಾವಣಗೆರೆಗೆ ಅನಾರೋಗ್ಯದ ನಿಮಿತ್ತ ಬಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇರುವುದು ಪತ್ತೆ ಯಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.