ದಾವಣಗೆರೆ ಜೂ.25- ಲಾಭ ನೀಡುವುದಾಗಿ ನಂಬಿಸಿ ತಾವು ದುಡಿದ ಮತ್ತು ನಿವೃತ್ತಿಯ ಹಣವನ್ನು ಹೂಡಿಕೆ ಮಾಡಿಸಿಕೊಂಡು 21. 50 ಲಕ್ಷ ರೂ. ವಂಚಿಸಿರುವುದಾಗಿ ನಿವೃತ್ತ ಸಹಾಯಕ ಇಂಜಿನಿಯರ್ ಕೆ.ಎಂ. ಮುರುಗೇಂದ್ರಯ್ಯ ಅವರು ಮೈಸೂರಿನ ಪ್ರಾಪರ್ಟೀಸ್ ಅಂಡ್ ಇನ್ಪ್ರಾಸ್ಟ್ರಕ್ಚರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನ ವಿರುದ್ಧ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುರುಗೇಂದ್ರಯ್ಯ ಅವರು ಪರಿಣಿತ ಪ್ರಾಪರ್ಟೀಸ್ ಅಂಡ್ ಇನ್ಪ್ರಾಸ್ಟ್ರಕ್ಚರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎಸ್. ಮಂಜುನಾಥ ವಿರುದ್ಧ ವಂಚನೆಯ ದೂರು ನೀಡಿದ್ದಾರೆ. ಮಂಜುನಾಥ ನಗರದ ಜಯದೇವ ವೃತ್ತದ ಬಳಿ ಕಂಪನಿಯ ಶಾಖಾ ಕಛೇರಿಯಲ್ಲಿ ಜನರನ್ನು ಕರೆಯಿಸಿ ಮುಂಗಡವಾಗಿ ಮತ್ತು ಕಂತಿನಲ್ಲಿ ಹಣ ನೀಡಿದವರಿಗೆ ನಿವೇಶನ ನೀಡುವುದಾಗಿ ಅಥವಾ ಎಫ್.ಡಿ ಮತ್ತು ಆರ್.ಡಿ ಮೂಲಕ ಹಣ ವಿನಿಯೋಗಿಸಿದರೆ ಹೆಚ್ಚಿನ ಬಡ್ಡಿ ನೀಡುವುದಾಗಿ ಹೇಳಿ ಹಣ ಕಟ್ಟಿಸಿಕೊಳ್ಳುತ್ತಿದ್ದರು.
ಈ ಕಂಪನಿಯಲ್ಲಿ ನಾನು ಸಹ ಫೀಲ್ಡ್ ಆಫೀಸರ್ ಆಗಿ ಕೆಲಸಕ್ಕೆ ಸೇರಿ, ಕಂಪನಿಯ ಯೋಜನೆಗಳ ಬಗ್ಗೆ ಗ್ರಾಹಕರಿಗೆ ತಿಳಿಸಿ ಗ್ರಾಹಕರಿಂದ ಹಣ ಹಾಕಿಸುತ್ತಿದ್ದೆ. ಕಂಪನಿಯಿಂದ ಕಮೀಷನ್ ನೀಡುತ್ತಿದ್ದರು. ನಿವೇಶನಕ್ಕಾಗಿ ಕಂತುಗಳ ಪಾವತಿ ಯೋಜನೆಯಲ್ಲಿ ಹಣವನ್ನು ಕಟ್ಟಿ ಅವಧಿ ಮುಕ್ತಾಯವಾದಾಗ ಮೆಚ್ಯುರಿಟಿ ಹಣ ಅಥವಾ ಅದಕ್ಕೆ ಬೆಲೆ ಬಾಳುವ ನಿವೇಶನವನ್ನಾದರೂ ತೆಗೆದುಕೊಳ್ಳಬಹುದು ಎಂದು ಮಂಜುನಾಥ ತಿಳಿಸಿದರಲ್ಲದೇ, ಸಂಸ್ಥೆಗೆ ಹಣ ಹಾಕಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿದ್ದರು.
ನಾನು ಕಷ್ಟ ಪಟ್ಟು ದುಡಿದ ಹಣ ಮತ್ತು ನಿವೃತ್ತಿಯ ಹಣವನ್ನು ಈ ಸಂಸ್ಥೆಗೆ ಆರ್.ಡಿ ಹಾಗೂ ಎಫ್.ಡಿ ಯಲ್ಲಿ ಒಟ್ಟು 15 ಲಕ್ಷದ 27 ಸಾವಿರದ 500 ರೂ. ಹೂಡಿದ್ದು, ಮೆಚ್ಯುರಿಟಿ ಹಣ ಸೇರಿ ಒಟ್ಟು 21 ಲಕ್ಷದ 50 ಸಾವಿರ ಬರಬೇಕಾಗಿದೆ. ಇತರೆಯವರು ಸಹ ಈ ಸಂಸ್ಥೆಯಲ್ಲಿ ಇದೇ ರೀತಿಯಾಗಿ ಹಣ ಹೂಡಿದ್ದಾರೆ.
ಮೆಚ್ಯುರಿಟಿ ಹಣ ವಾಪಸ್ ನೀಡುವಂತೆ ಕೇಳಿದಾಗ ಮಂಜುನಾಥ ಕೊಟ್ಟಿಲ್ಲ. ನಗರದಲ್ಲಿದ್ದ ಸಂಸ್ಥೆ ಕಛೇರಿ ಬಂದ್ ಮಾಡಿದ್ದಾರೆ. ನಾನು ಮೈಸೂರಿಗೆ ಹಣ ಕೇಳಲು ಹೋದಾಗ ಮಂಜುನಾಥ ದೂರವಾಣಿ ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾರೆ ಎಂದು ಮುರುಗೇಂದ್ರಯ್ಯ ದೂರಿದ್ದಾರೆ.