ವಿದ್ಯಾರ್ಥಿಗಳ ಜೊತೆ ಆಡಳಿತವೂ ಎದುರಿಸಿತು ಕೊರೊನಾ ಪರೀಕ್ಷೆ !
ದಾವಣಗೆರೆ, ಜೂ. 25 – ಕೊರೊನಾ ಪ್ರಕರಣಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿರುವುದರ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಶುಭಾರಂಭ ಕಂಡಿದೆ.
ಕೊರೊನಾ ಸಾಮಾಜಿಕ ಅಂತರದ ನಡುವೆ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆಗೆ ಹೋಲಿಸಿದರೆ, ಎಸ್ಸೆಸ್ಸೆಲ್ಸಿಯ ಮೊದಲ ದಿನದ ಇಂಗ್ಲಿಷ್ ಪರೀಕ್ಷೆ ಹೆಚ್ಚು ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿತ್ತು.
ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮಾತ್ರ ಒರೆಗೆ ಹಚ್ಚುತ್ತಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಈ ಬಾರಿ ಕೊರೊನಾ ಕಾರಣದಿಂದಾಗಿ ಸರ್ಕಾರದಿಂದ ಹಿಡಿದು ಸಿಬ್ಬಂದಿಯವರೆಗೆ ಎಲ್ಲರನ್ನೂ ಒರೆಗೆ ಹಚ್ಚಿರುವುದು ವಿಶೇಷ.
ಜಿಲ್ಲೆಯಲ್ಲಿ 1023 ವಿದ್ಯಾರ್ಥಿಗಳು ಗೈರು : ಎಸ್.ಎಸ್.ಎಲ್.ಸಿ. ಮೊದಲ ದಿನ ನಡೆದ ಇಂಗ್ಲಿಷ್ ಭಾಷೆಯ ಪರೀಕ್ಷೆಯಲ್ಲಿ 21,577 ವಿದ್ಯಾರ್ಥಿಗಳ ಪೈಕಿ 20,544 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಮೊದಲ ದಿನ 1,023 ವಿದ್ಯಾರ್ಥಿ ಗಳು ಗೈರಾಗಿದ್ದಾರೆ. ಕಂಟೈನ್ಮೆಂಟ್ ವಲಯದಲ್ಲಿ 96 ವಿದ್ಯಾರ್ಥಿಗಳಿದ್ದು, ಇವರ ಪೈಕಿ 64 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಒಬ್ಬ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ 412 ವಲಸೆ ವಿದ್ಯಾರ್ಥಿಗಳಿದ್ದರಾದರೂ, ಇವರ ಪೈಕಿ 8 ವಿದ್ಯಾರ್ಥಿಗಳು ಗೈರಾಗಿದ್ದು, 404 ಜನರು ಪರೀಕ್ಷೆಗೆ ಹಾಜರಾಗಿದ್ದಾರೆ. 667 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದುಕೊಂಡು ಪರೀಕ್ಷೆಗೆ ಹಾಜರಾಗಿದ್ದಾರೆ.
ಕೇಂದ್ರಗಳಿಗೆ ಡಿಸಿ ಭೇಟಿ ಪರಿಶೀಲನೆ : ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಯಾವುದೇ ಗೊಂದಲಕ್ಕೆ ಒಳಗಾಗದೇ ನಿರ್ಭೀತಿಯಿಂದ ಪರೀಕ್ಷೆ ಬರೆಯು ವಂತೆ ಹೇಳಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ರಾಜ್ಯದೆಲ್ಲೆಡೆ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭ ವಾಗಿದ್ದು, ದ್ವಿತೀಯ ಭಾಷೆ ಇಂಗ್ಲಿಷ್ ಪರೀಕ್ಷೆ ನಡೆಯುತ್ತಿದೆ. ಬೆಳಿಗ್ಗೆಯಿಂದ 5 ಕೇಂದ್ರಗಳಿಗೆ ಭೇಟಿ ನೀಡಲಾಗಿದೆ. ವಿದ್ಯಾರ್ಥಿಗಳು ತುಂಬಾ ವಿಶ್ವಾಸ ಹಾಗೂ ಧೈರ್ಯದಿಂದ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಹೇಳಿದರು. ಪರೀಕ್ಷಾ ಕೇಂದ್ರದ ಸುತ್ತ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಬಹಳಷ್ಟು ದೂರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದಾಗಿ ಯಾವುದೇ ಪಾಲಕರು ಹಾಗೂ ಬೇರೆ ಯಾರೂ ಸಹ ಒಳಗೆ ಬರುವ ಮತ್ತು ಹೋಗುವಂತಹ ಗೊಂದಲ ಆಗಿಲ್ಲ. ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಬಹಳ ಯಶಸ್ವಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಜೊತೆಗೆ ಸ್ಕೌಟ್ಸ್ ಹಾಗೂ ಆರೋಗ್ಯ ಇಲಾಖೆಯೂ ಈ ಬಾರಿ ಪರೀಕ್ಷೆಗೆ ಕೈ ಜೋಡಿಸಿದೆ. ಸ್ಕೌಟ್ಸ್ ಶಿಕ್ಷಕ ಸ್ವಯಂ ಸೇವಕರು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಪರೀಕ್ಷಾ ಕೇಂದ್ರದ ಎದುರು ಹಾಜರಿದ್ದರು. ವಿದ್ಯಾರ್ಥಿಗಳ ಆಗಮನಕ್ಕೆ ಮುಂಚೆಯೇ ಪೊಲೀಸರಿಂದ ಹಿಡಿದು ಶಾಲಾ ಸಿಬ್ಬಂದಿಯವರೆಗೆ ಎಲ್ಲರೂ ಸಜ್ಜಾಗಿ ನಿಂತಿದ್ದರು. ವಿದ್ಯಾರ್ಥಿಗಳು ಗುಂಪು ಗೂಡದಂತೆ ನೇರ ವಾಗಿ ಪರೀಕ್ಷಾ ಕೋಣೆಗೆ ಕಳಿಸಲು ನೆರವಾಗುತ್ತಿದ್ದರು. ಶಾಲೆಯ ಬಾಗಿಲಿನಿಂದ ಹಿಡಿದು ಕಾರಿಡಾರ್ಗೆ ಸಾಗಿ ಕೋಣೆ ಸೇರುವ ಎಲ್ಲ ಹಂತಗಳಲ್ಲೂ ಶಿಕ್ಷಕರು ಸಾಮಾಜಿಕ ಅಂತರದ ಬಗ್ಗೆ ನಿಗಾ ವಹಿಸುತ್ತಿದ್ದರು.
ಬಹುತೇಕ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ದ್ದರಾದರೂ, ಕೆಲವರು ಕರ್ಚೀಫ್ ಕಟ್ಟಿಕೊಂಡು ಬಂದಿದ್ದರು. ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ಸ್ ಮೂಲಕ ಎಲ್ಲ ಮಕ್ಕಳಿಗೆ ತಲಾ ಎರಡು ಮಾಸ್ಕ್ ನೀಡುತ್ತಿದ್ದರಿಂದ ಇದೇನೂ ಸಮಸ್ಯೆಯಾಗಲಿಲ್ಲ.
ವಿದ್ಯಾರ್ಥಿಗಳಷ್ಟೇ ಅಲ್ಲದೇ, ಅವರ ಮೊಬೈಲ್ಗಳನ್ನು ಸುರಕ್ಷಿತವಾಗಿಡಲೂ ಸಹ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಮೊಬೈಲ್ ತಂದಿದ್ದರೆ, ಅದನ್ನು ಪ್ರತ್ಯೇಕ ಕವರ್ ಗಳಲ್ಲಿ ಇಡಲಾಗುತ್ತಿತ್ತು. ಇದಕ್ಕಾಗಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿತ್ತು.
ಘನ ಗಂಭೀರವಾದ ಪರೀಕ್ಷಾ ಕೇಂದ್ರಗಳು : ಸಾಮಾನ್ಯವಾಗಿ ಪರೀಕ್ಷಾ ಕೇಂದ್ರಗಳ ಎದುರು ವಿದ್ಯಾರ್ಥಿಗಳು ಗುಂಪಾಗಿರುತ್ತಿದ್ದರು. ಈ ಬಾರಿ ಹೊರಗಡೆ ಗುಂಪಿರದೇ ನಿರ್ಜನವಾಗಿತ್ತು. ಮೈಕ್ ಹಿಡಿದ ಮೇಷ್ಟ್ರು ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಬರಲು ಸೂಚನೆ ನೀಡುತ್ತಿದ್ದರು. ಆಶಾ ಕಾರ್ಯಕರ್ತೆಯರು, ಸ್ಕೌಟ್ಸ್ ಮೇಷ್ಟ್ರುಗಳು ಮತ್ತಿತರರ ಉಪಸ್ಥಿತಿಯಿಂದಾಗಿ ಇಡೀ ವಾತಾವರಣ ಘನ ಗಂಭೀರತೆ ಪಡೆದಿತ್ತು.
ಓದಿಗಿಂತ ಮಾತಿನಲ್ಲೇ ಮುಗಿಯಿತು ಬಿಡುವು : ಶಾಮನೂರು ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಗರದ ಸೇಂಟ್ ಜಾನ್ಸ್ ಶಾಲೆಯು ಪರೀಕ್ಷಾ ಕೇಂದ್ರವಾಗಿತ್ತು. ಪರೀಕ್ಷೆಗೆ ಮುಂಚೆ ಪತ್ರಿಕೆ ಯೊಂದಿಗೆ ಮಾತಿ ಗಿಳಿದ ವಿದ್ಯಾರ್ಥಿಗಳು, ಕಳೆದ ಎರಡು ತಿಂಗಳು ಓದುವುಕ್ಕಿಂತ ಹೆಚ್ಚಾಗಿ ಮಾತಿನಲ್ಲೇ ಕಳೆದು ಹೋಯಿತು. ಈಗ ಕೊರೊನಾಕ್ಕಿಂತ ಪರೀಕ್ಷೆಯದೇ ಹೆದರಿಕೆ ಎಂದರು. ಮತ್ತೆ ಹೇಗೆ ಪರೀಕ್ಷೆ ಎದುರಿಸ್ತೀರಿ? ಎಂದು ಕೇಳಿ ದರೆ, ಶಾಮನೂರು ಹನುಮಪ್ಪನೇ ಭರವಸೆ ಎಂದು ಉತ್ತರಿಸುವುದೇ! ನಾವು ಮಾಸ್ಕ್ ಹಾಕಿದ ಮೇಲೆ ಪರೀಕ್ಷಾ ಕೋಣೆಯಲ್ಲಿ §ಮಾತನಾಡೋಕೇ’ ಆಗಲ್ಲ. ಅದೇ ನಮಗಿ ರುವ ಸಮಸ್ಯೆ ಎಂದು ನಗುತ್ತಲೇ ಹೇಳಿದರು.
ನಗರದ ಶಿವಕುಮಾರಸ್ವಾಮಿ ಬಡಾವಣೆ ಯಲ್ಲಿರುವ ಸೇಂಟ್ ಜಾನ್ಸ್ ಶಾಲೆಗೆ ಭೇಟಿ ನೀಡಿದಾಗ ತೇಜಸ್ವಿನಿ ಎಂಬ ಕೈ ವೈಕಲ್ಯಕ್ಕೆ ಸಿಲು ಕಿದ್ದ ಯುವತಿಯೊಬ್ಬರು ಪರೀಕ್ಷೆಗೆ ಹಾಜರಾಗಿ ದ್ದರು. ನನ್ನ ಕೈ ದುರ್ಬಲವಾಗಿದೆ, ಹೀಗಾಗಿ ಉತ್ತರ ಬರೆಯಲು ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗಿದೆ ಎಂದವರು ಹೇಳಿದರು.
ಇದೇ ಶಾಲೆಗೆ ನಿತೀಶ್ ಎಂಬ ವಿಕಲ ಚೇತನ ವಿದ್ಯಾರ್ಥಿ ಗಾಲಿ ಕುರ್ಚಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದನು. ಇವರನ್ನು ಇಬ್ಬರು ಸಹಾ ಯಕರು ಕರೆ ತಂದಿದ್ದರು. ಪರೀಕ್ಷೆ ಬರೆಯಲು ಒಬ್ಬ ಸಹಾಯಕನನ್ನು ನೇಮಿಸಲಾಗಿತ್ತು.
ವಿದ್ಯಾರ್ಥಿಗಳು ಬೇಗನೇ ಪರೀಕ್ಷಾ ಕೇಂದ್ರಗ ಳಿಗೆ ಬರಬೇಕೆಂದು ತಿಳಿಸಿದ್ದರಿಂದ, ಕೊನೆಯ ಕ್ಷಣದ ಓದಿಗೆ ಪರೀಕ್ಷಾ ಕೋಣೆಗಳಲ್ಲೇ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ 9.30ರವರೆಗೆ ವಿದ್ಯಾರ್ಥಿ ಗಳು ಓದಬಹುದು ಎಂದು ತಿಳಿಸಲಾಗಿತ್ತು.
ಸಿದ್ದಗಂಗಾ ಶಾಲೆ, ನೂತನ ಪಿಯು ಕಾಲೇಜು, ಸರ್ಕಾರಿ ಪ್ರೌಢಶಾಲೆ, ಅಕ್ಕಮಹಾದೇವಿ ಶಾಲೆ ಮುಂತಾದ ಶಾಲೆಗಳ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ವಿದ್ಯಾರ್ಥಿಗಳನ್ನು ನಿಭಾಯಿಸಿದ್ದು ಕಂಡು ಬಂದಿತು.
ಕೊರೊನಾ ಕಣ್ಣಾಮುಚ್ಚಾಲೆ ಕಾರಣದಿಂದ ಎರಡು ತಿಂಗಳ ಕಾಲ ವಿಳಂಬವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊನೆಗೂ ಆರಂಭವಾಗಿದೆ. ಸುಸೂತ್ರವಾಗಿ ಮುಗಿದರೆ ಸಾಕು ಎಂಬುದೇ ಎಲ್ಲರ ಹಾರೈಕೆಯಾಗಿದೆ.