ಹರಿಹರ, ಜೂ.24- ಹರಿಹರದಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿನ ವಹಿವಾಟನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ನಡೆಸಿ, ನಂತರ ಸಂಪೂರ್ಣ ಲಾಕ್‌ಡೌನ್ ಮಾಡಲು ಅಧಿಕಾರಿಗಳ ಜನಪ್ರತಿನಿಧಿಗಳ, ವರ್ತಕರ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಎಸ್. ರಾಮಪ್ಪ ಅವರು, ನಗರದಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಹಕಾರದಿಂದ ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ರೋಗ ಲಕ್ಷಣಗಳು ಕಂಡುಬಂದಿದ್ದಿಲ್ಲ. ಇದರಿಂದಾಗಿ ಇಲ್ಲಿನ ಜನರು ನೆಮ್ಮದಿಯಿಂದ ಇದ್ದರು. ಆದರೆ, ಮೊನ್ನೆಯಿಂದ ನಗರದಲ್ಲಿ ಅಗಸರ ಬಡಾವಣೆ, ಶಿವಮೊಗ್ಗ ರಸ್ತೆ ಹಾಗೂ ಎ.ಕೆ. ಕಾಲೋನಿಯ ಕೆಲವು ಬಡಾವಣೆಗಳಲ್ಲಿ ಕೊರೊನಾ ಸೋಂಕು ಹರಡಿರುವು ದರಿಂದ ಜನರಲ್ಲಿ ಮತ್ತೆ ಆತಂಕವನ್ನು ಉಂಟುಮಾಡಿದೆ. ಮಹತ್ವದ ಸಭೆಯಿಂದ ದೂರ ಇರುವ ಇಓ ಲಕ್ಷ್ಮೀಪತಿಯವರಿಗೆ ನೋಟಿಸ್ ಜಾರಿ ಮಾಡುವಂತೆ ತಹಶೀಲ್ದಾರ್‌ರವರಿಗೆ ಸೂಚಿಸಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಎ.ಕೆ. ಕಾಲೋನಿ, ಅಗಸರ ಬಡಾವಣೆ ಸೀಲ್‌ಡೌನ್ ಮಾಡಲಾಗಿದೆ ಎಂದು ಹೇಳಿದರು.
ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ಮಾತ ನಾಡಿ, ನಗರದ ಎ.ಕೆ. ಕಾಲೋನಿಯ ಬಡಾವಣೆಯಲ್ಲಿ ಕೊರೊನಾ ವೈರಸ್ ಲಕ್ಷಣಗಳಿರುವುದರಿಂದ ಈ ಬಡಾವಣೆಯಲ್ಲಿ ವಾಸವಾಗಿರುವ ಜನರು ನಗರಸಭೆ ಪೌರ ಕಾರ್ಮಿಕರಾಗಿರುವುದರಿಂದ ಅವರನ್ನು ಪ್ರತ್ಯೇಕ ವಾಗಿ ಇರುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅವರಿಗೆ ತಪಾಸಣೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಸಿಪಿಐ ಎಸ್. ಶಿವಪ್ರಸಾದ್ ಮಾತನಾಡಿದರು. ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಂಕರ್ ಖಟಾವ್ಕರ್ ಮಾತನಾಡಿ, ಜನರ ಹಿತ ಕಾಯುವುದು ಮುಖ್ಯವಾಗಿದೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಬೆಳಗ್ಗೆ 6 ಗಂಟೆಗೆ ತಮ್ಮ ಅಂಗಡಿಯನ್ನು ಪ್ರಾರಂಭ ಮಾಡಿ ಮಧ್ಯಾಹ್ನ 2 ಗಂಟೆಯ ನಂತರದಲ್ಲಿ ಅಂಗಡಿ ಮುಂಗಟ್ಟನ್ನು ಬಂದ್ ಮಾಡುವುದಕ್ಕೆ ಸಿದ್ದರಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ ಎಸ್. ಶೈಲಾಶ್ರೀ, ವರ್ತಕರಾದ ಶಿವಪ್ರಕಾಶ್ ಶಾಸ್ತ್ರಿ, ಹಲಸಬಾಳು ಬಸವರಾಜಪ್ಪ, ಆರ್. ಆರ್. ಕಾಂತರಾಜ್ ಶೆಟ್ಟಿ, ಅಣ್ಣಪ್ಪ, ಕೆ. ಮಾಲತೇಶ್ ಭಂಡಾರಿ, ಗೋಪಿ ದುರುಗೋಜಿ, ಪಟೇಲ್ ಹಾಗು ಇತರರು ಹಾಜರಿದ್ದರು.