ಸ್ಮಾರ್ಟ್ ಸಿಟಿಯಿಂದ 102 ಸ್ಮಾರ್ಟ್ ಕ್ಲಾಸ್

29 ಶಾಲೆಗಳಲ್ಲಿ 30 ಸ್ಮಾರ್ಟ್ ತರಗತಿಗಳು ಹಾಗೂ 19 ಲ್ಯಾಬ್‌ಗಳ ನಿರ್ಮಾಣ 

ದಾವಣಗೆರೆ, ಜೂ. 24 – ಸ್ಮಾರ್ಟ್ ಸಿಟಿ ವತಿಯಿಂದ ನಗರದ 29 ಶಾಲೆಗಳ ಒಟ್ಟು 102 ಕ್ಲಾಸ್‌ ರೂಂಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, 19 ಶಾಲೆಗಳ 62 ಸ್ಮಾರ್ಟ್ ತರಗತಿಗಳು ಹಾಗೂ 19 ಸ್ಮಾರ್ಟ್ ಲ್ಯಾಬ್‌ಗಳನ್ನು ನಿರ್ಮಿಸುವ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಇದರ ಮೊತ್ತ 3 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ 10 ಶಾಲೆಗಳಲ್ಲಿ 40 ಸ್ಮಾರ್ಟ್ ತರಗತಿಗಳು ಹಾಗೂ ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ 11 ಕಡೆಗಳಲ್ಲಿ ಸ್ಮಾರ್ಟ್ ಲ್ಯಾಬ್ ಸ್ಥಾಪಿಸಲು ಬುಧವಾರ ಚಾಲನೆ ನೀಡಲಾಗಿದೆ. ಇದರ ಮೊತ್ತ 1.7 ಕೋಟಿ ರೂ. ಎಂದವರು ಹೇಳಿದ್ದಾರೆ.

ಒಟ್ಟಾರೆ 29 ಶಾಲೆಗಳಲ್ಲಿ 102 ಸ್ಮಾರ್ಟ್ ತರಗತಿಗಳು ಹಾಗೂ 30 ಲ್ಯಾಬ್‌ಗಳು, ಐದು ಕೋಟಿ ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ ಆರಂಭವಾಗಲಿವೆ. 

ಇಡೀ ವ್ಯವಸ್ಥೆಯನ್ನು ಹತ್ತು ವರ್ಷಗಳ ಕಾಲ ನಿರ್ವಹಣೆಯ ಗುತ್ತಿಗೆಯ ಮೇಲೆ ನೀಡಲಾಗಿದೆ ಎಂದು ಮಲ್ಲಾಪುರ ಹೇಳಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲು ವಿದ್ವತ್ ಎಜುಕೇಷನಲ್ ಮೊಬೈಲ್ ಆಪ್ ಸಹ ಒದಗಿಸಲಾಗುತ್ತಿದೆ. ಈ ಆಪ್ ಸರ್ಕಾರಿ ಶಾಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳ ಕಾಲ ಉಚಿತವಾಗಿ ಸಿಗಲಿದೆ. ಇದು ಕೊರೊನಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದವರು ಹೇಳಿದ್ದಾರೆ.

ಇದರ ಜೊತೆಗೆ 8 ಕೋಟಿ ರೂ. ವೆಚ್ಚದಲ್ಲಿ ಹಳೆಪೇಟೆಯ ಐದು ಶಾಲೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆತಿದೆ. 8 ಕೋಟಿ ರೂ. ವೆಚ್ಚದಲ್ಲಿ ಇನ್ನೂ 14 ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಒಟ್ಟಾರೆ ಸ್ಮಾರ್ಟ್ ಸಿಟಿ ಯೋಜನೆಯಡಿ 19 ಶಾಲೆಗಳು ಅಭಿವೃದ್ಧಿಯಾಗಲಿವೆ ಎಂದವರು ಹೇಳಿದ್ದಾರೆ.

ದೇವರಾಜ ಅರಸ್ ಈಜುಕೊಳದ ಅಭಿವೃದ್ಧಿ, ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ನಗರ ಪಾಲಿಕೆಯ ಆರು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ, ಸಿ.ಜಿ. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ, ಜಗಳೂರು ರಸ್ತೆಯಲ್ಲಿ ಸೆಟಲೈಟ್ ಬಸ್ ನಿಲ್ದಾಣ ಸ್ಥಾಪನೆಗಾಗಿ ಪ್ರಸ್ತಾವನೆಗಳನ್ನು ರೂಪಿಸಲಾಗಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಡಯಟ್ ಪ್ರಾಂಶುಪಾಲ ಹೆಚ್.ಕೆ. ಲಿಂಗರಾಜ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ಚಂದ್ರಶೇಖರ್, ವಿದ್ವತ್ ಇನ್ನೋವೇಟಿವ್ ಸಲ್ಯೂಷನ್ಸ್‌ನ ರೋಹಿತ್ ಎಂ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!