ಥರ್ಮಲ್ ಸ್ಕ್ರೀನಿಂಗ್ನೊಂದಿಗೆ ವಿದ್ಯಾರ್ಥಿಗಳಿಗೆ ಸ್ವಾಗತ, ಆರೋಗ್ಯದ ಕಡೆ ನಿಗಾ
ದಾವಣಗೆರೆ, ಜೂ. 22 – ಬರುವ ಜೂ.25ರಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ಜಿಲ್ಲಾಡಳಿತ ಸಾಮಾಜಿಕ ಅಂತರ, ಸ್ಯಾನಿಟೈಜ್, ಮಾಸ್ಕ್ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಒಟ್ಟು 93 ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ 21,683 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. 1,242 ಕೊಠಡಿಗಳನ್ನು ಬಳಸಿಕೊಳ್ಳಲಾ ಗುತ್ತಿದ್ದು, ಪರೀಕ್ಷೆಗೆ ಮುಂಚೆ ಹಾಗೂ ನಂತರ ಇವುಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಗುವುದು ಎಂದರು.
- ಪ್ರತಿ ಪರೀಕ್ಷಾ ಕೇಂದ್ರಕ್ಕೆ ಐವರು ದೈಹಿಕ ಶಿಕ್ಷಕರು
- 21,683 ವಿದ್ಯಾರ್ಥಿಗಳಿಗೆ 1,242 ಕೊಠಡಿಗಳ ಬಳಕೆ
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ 3 ಲೀಟರ್ ಸ್ಯಾನಿಟೈಜರ್ ಬಾಟಲಿಗಳನ್ನು ಸರಬರಾಜು ಮಾಡಲಾಗುವುದು. 200 ಮಕ್ಕಳಿಗೆ ಒಂದರಂತೆ ಪರೀಕ್ಷಾ ಮಂಡಳಿಯಿಂದ ಥರ್ಮಲ್ ಸ್ಕ್ಯಾನರ್ ಪೂರೈಸಲಾಗಿದೆ. ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ 22 ಸಾವಿರ ಮಾಸ್ಕ್ ವಿತರಿಸಲಾಗಿದೆ. ಒಟ್ಟು 30 ಸಾವಿರ ಮಾಸ್ಕ್ಗಳನ್ನು ವಿದ್ಯಾರ್ಥಿಗಳಿಗೆ ನೀಡ ಲಾಗುವುದು.
ಕಂಟೈನ್ಮೆಂಟ್ ವಲಯಗಳಿಂದ ಬರುವ 96 ಮಕ್ಕಳಿಗೆ ಎನ್ -95 ಮಾಸ್ಕ್ ಒದಗಿಸಲಾಗುವುದು. ಆದರೆ, ಹರಿಹರದಲ್ಲಿ ಇಬ್ಬರು ಹಾಗೂ ಚನ್ನಗಿರಿಯ ಒಬ್ಬ ವಿದ್ಯಾರ್ಥಿಯ ಮನೆಯಲ್ಲೇ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಿಗೆ ಪರೀಕ್ಷೆಗೆ ಅವಕಾಶವಿಲ್ಲ. ಆದರೆ, ಸಪ್ಲಿಮೆಂಟರಿ ಪರೀಕ್ಷೆ ನಡೆಸುವಾಗ ಅವರನ್ನು ಮೊದಲ ಪ್ರಯತ್ನ ಎಂದೇ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಂಟೈನ್ಮೆಂಟ್ ವಲಯದಿಂದ ಬರುವವರಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಸಲು ಅವಕಾಶ ನೀಡಲಾ ಗುವುದು. ಫ್ಲು ರೀತಿಯ ಸಮಸ್ಯೆ ಕಂಡು ಬಂದರೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡ ಲಾಗುವುದು ಎಂದವರು ತಿಳಿಸಿದ್ದಾರೆ.
12,345 ವಿದ್ಯಾರ್ಥಿಗಳು ಬಸ್ ಮೂಲಕ ಬರುವುದಾಗಿ ತಿಳಿಸಿದ್ದು, ಅವರಿಗಾಗಿ 408 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳ ಮೂಲಕ 335, ಹಾಸ್ಟೆಲ್ನಲ್ಲಿ ಉಳಿದು ಕೊಂಡು 674, ಶಾಲಾ ವಾಹನಗಳ ಮೂಲಕ 1,747 ಹಾಗೂ ಕಾಲ್ನಡಿಗೆ ಯಲ್ಲಿ 6,174 ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಐವರು ದೈಹಿಕ ಶಿಕ್ಷಕರನ್ನು ನೇಮಿಸ ಲಿದ್ದು, ಇವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನೆರವಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಸೇರಿದಂತೆ ಸಿಬ್ಬಂದಿ ಬೆಳಿಗ್ಗೆ 7.30ರ ಒಳಗೆ ಹಾಜರಿರಲಿದ್ದಾರೆ. ಅಲ್ಲದೇ ಪರೀಕ್ಷಾ ಕೇಂದ್ರಗಳಿಗೆ ತಲಾ ಒಬ್ಬ ಆರೋಗ್ಯ ಸಹಾಯಕ ಹಾಗೂ ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗುವುದು. ಸ್ಕೌಟ್ ಮತ್ತು ಗೈಡ್ ಮೂಲಕ ಪ್ರತಿ ಕೇಂದ್ರಕ್ಕೆ ಇಬ್ಬರು ಸ್ವಯಂ ಸೇವಕರು ಇರಲಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ತಲುಪಿಸಲು 33 ಮಾರ್ಗಗಳನ್ನು ಗುರುತಿಸಲಾಗಿದ್ದು, ಅದರಂತೆ ಸಾಗಾಣಿಕೆಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಸ್ಪಿ ಹನುಮಂತರಾಯ, ಪರೀಕ್ಷಾ ಕೇಂದ್ರಗಳ ಸುತ್ತ 144ನೇ ಸೆಕ್ಷನ್ ಹೇರಿಕೆ ಮಾಡಲಾಗುವುದು. ಬೆಳಿಗ್ಗೆ 8.30ರ ನಂತರ ವಿದ್ಯಾರ್ಥಿಗಳಿಗೆ ಅಂತರದೊಂದಿಗೆ ಕೊಠಡಿಗೆ ಬಿಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಯ್ಯ, ಡಿಡಿಪಿಐ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.