ಗ್ರಹಣಕ್ಕೇ ಮೋಡಗಳ ಗ್ರಹಣ

ಮುಂಗಾರಿನ ಮೇಘಗಳ ಸರಮಾಲೆಯಲ್ಲಿ ಸೂರ್ಯ – ಚಂದ್ರರ ನೆರಳು ಬೆಳಕಿನಾಟ
ಸೂರ್ಯಗ್ರಹಣವನ್ನು ದಾವಣಗೆರೆಯಲ್ಲಿ ಸೆರೆಹಿಡಿದಿರುವುದು. ಮೋಡಗಳ ಅಡ್ಡಿಯಲ್ಲೇ ನಡೆದ ಖಗೋಳದ ಕೌತುಕ.

ಕಂಕಣ ಸೂರ್ಯಗ್ರಹಣ ವೀಕ್ಷಣಾಸಕ್ತರಿಗೆ ನಿರಾಸೆ

ದಾವಣಗೆರೆ, ಜೂ. 21 – ಆಗಸದಲ್ಲಿ ಸೂರ್ಯ ಮತ್ತು ಚಂದ್ರನ ನೆರಳು – ಬೆಳಕಿನ ಆಟದಿಂದ ನಡೆಯುವ ಸೂರ್ಯ ಗ್ರಹಣವು, ಮಳೆ ಹಾಗೂ ಮೋಡಗಳ ಆಟದಿಂದಾಗಿ ಸಾಕಷ್ಟು ಜನರಿಗೆ ಗೋಚರಿಸಲಿಲ್ಲ.

ಈ ವರ್ಷದ ಮೊದಲ ಕಂಕಣ ಸೂರ್ಯ ಗ್ರಹಣಕ್ಕೆ ಮೋಡಗಳ ಗ್ರಹಣ ಹಿಡಿದಿತ್ತು. ಆಗಾಗ ಸುರಿದ ತುಂತುರು ಮಳೆ ಹಾಗೂ ಈ ಬಾರಿ ಶೇ.40ರಷ್ಟು ಮಾತ್ರ ಗ್ರಹಣ ಗೋಚರವಾಗಲಿದೆ ಎಂಬ ಕಾರಣದಿಂದಾಗಿ ಜನರಲ್ಲಿ ಗ್ರಹಣ ವೀಕ್ಷಣೆಯ ಆಸಕ್ತಿ ಕಡಿಮೆಯೇ ಇತ್ತು.

ಇಷ್ಟೆಲ್ಲದರ ನಡುವೆಯೂ 12 ಗಂಟೆ ಸಮಯದಲ್ಲಿ ಅಲ್ಪ ಕಾಲ ಸರಿದ ಮೋಡ, ಗ್ರಹಣ ವೀಕ್ಷಣೆಗೆ ಸ್ವಲ್ಪ ಅವಕಾಶ ನೀಡಿತು. ಗ್ರಹಣದ ವೇಳೆ ಸಂಪ್ರದಾಯದಂತೆ ಮನೆಗಳಲ್ಲಿ ಕೈಗೊಳ್ಳುವ ಪೂಜೆ, ಗರಿಕೆ ಹುಲ್ಲಿನ §ರಕ್ಷಣೆ¬ ಇತ್ಯಾದಿಗಳು  ಸಾಂಗೋಪಾಂಗವಾಗಿ ನೆರವೇರಿದವು.

ಭಾನುವಾರದಂದು ಆಗಮಿಸಿದ ಗ್ರಹಣ, ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಿತ್ತು. ಭಾನುವಾರದ ಹಿನ್ನೆಲೆ ಯಲ್ಲಿ ಕೆಲಸಕ್ಕೆ ಹೋಗುವ ಗೃಹಿಣಿಯರು ಯಾವುದೇ ಅವಸರವಿಲ್ಲದೇ ತಿಂಡಿ ಹಾಗೂ ಅಡುಗೆಯ ಕೆಲಸದಲ್ಲಿ ತೊಡಗಿಕೊಂಡಿದ್ದರು. ರಜೆಯ ಬಿಡುವಿನಲ್ಲಿ ಮನೆ ಮಂದಿ ಸಂಪೂರ್ಣ ವಿಶ್ರಾಂತಿಯಲ್ಲಿ ತೊಡಗಿದ್ದರು.

ದೇವಸ್ಥಾನಗಳಲ್ಲಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಮಧ್ಯಾಹ್ನದಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹೈಸ್ಕೂಲ್ ಮೈದಾನದಲ್ಲಿ ವೀಕ್ಷಣೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ದಾವಣಗೆರೆ, ಕರ್ನಾಟಕ ವಿಜ್ಞಾನ ಪರಿಷತ್, ದಾವಣಗೆರೆ ವಿಜ್ಞಾನ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿ, ಮನೆ ಮನೆ ವಿಜ್ಞಾನ ದಾಸೋಹ ಬಳಗಗಳ ಸಂಯುಕ್ತಾಶ್ರಯದಲ್ಲಿ ಗ್ರಹಣ ವೀಕ್ಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿದ್ದುದೂ ಸಹ ಜನರ ಉತ್ಸಾಹ ಕುಂದಿಸಲು ಕಾರಣವಾಗಿತ್ತು. ಇದೆಲ್ಲದರ ನಡುವೆಯೂ ಕೆಲವರು ಗ್ರಹಣ ವೀಕ್ಷಣೆಗಾಗಿ ಮೈದಾನದಲ್ಲಿ ಸೇರಿದ್ದರು. 

ಆರಂಭದಲ್ಲಿ ಸುರಿದ ತುಂತುರು ಮಳೆಯಿಂದ ನಿರಾಸೆಯಾಯಿತಾದರೂ, ನಂತರದಲ್ಲಿ ಅರ್ಧ ಗಂಟೆ ಕಾಲ ಗ್ರಹಣ ಸ್ಪಷ್ಟವಾಗಿ ಗೋಚರಿಸಿತು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನರು ಗ್ರಹಣ ವೀಕ್ಷಿಸಿದರು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಎಂ. ಗುರುಸಿದ್ದಸ್ವಾಮಿ ತಿಳಿಸಿದ್ದಾರೆ.

ಗ್ರಹಣ ಕಾಲದಲ್ಲಿ ಆಹಾರ ಸೇವನೆ ಮಾಡಬಾರದು ಎಂಬ ಮೌಢ್ಯ ನಿವಾರಣೆಗಾಗಿ ಒಕ್ಕೂಟಗಳ ವತಿಯಿಂದ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬಿಐಇಟಿ ಪ್ರಾಧ್ಯಾಪಕ ಡಾ. ಬಿ.ಇ. ರಂಗಸ್ವಾಮಿ, ರಾಜ್ಯ ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷ ಉಮೇಶ್ ಬಾಂಭೋರೆ, ಸಂಘಟನೆಗಳ ಸದಸ್ಯರಾದ ಎಂ.ಟಿ. ಶರಣಪ್ಪ, ಕೆ.ಸಿ. ಬಸವರಾಜು, ಕೆ. ಸಿದ್ದೇಶ್, ಅಂಗಡಿ ಸಂಗಪ್ಪ, ಆವರಗೆರೆ ರುದ್ರಮುನಿ, ರಂಗಕರ್ಮಿ ಸಿದ್ದರಾಜು, ಕಲಿವೀರ ಕಳ್ಳಿಮನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!