ಜಿಲ್ಲೆಯ ವರ್ತಕರ ಸಮಸ್ಯೆಗಳ ಬಗ್ಗೆ ಅರಿವಿದೆ

ಜಿಲ್ಲೆಯ ವರ್ತಕರ ಸಮಸ್ಯೆಗಳ ಬಗ್ಗೆ ಅರಿವಿದೆ - Janathavani

ದಾವಣಗೆರೆ, ಮೇ 12- ಜಿಲ್ಲೆಯ ವರ್ತಕರ ಸಮಸ್ಯೆಗಳ ಅರಿವು ನಮಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರುತ್ತೇನೆ. ಸರ್ಕಾರದೊಂದಿಗೆ ಚರ್ಚಿಸಿ, ನಿಯಮಾವಳಿಗಳು ಹಾಗೂ ವ್ಯವಹಾರಕ್ಕೆ ಧಕ್ಕೆಯಾಗದಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿರುವ ಜಿಲ್ಲಾಧಿಕಾರಿ ಮಹಾಂತೇಶ್  ಬೀಳಗಿ,  ನಾಳೆ ಬುಧವಾರದಿಂದ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ವ್ಯಾಪಾರಕ್ಕೆ ಅನುಮತಿ ನೀಡಿದ್ದಾರೆ.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ  ಇಂದು ವಿವಿಧ ವರ್ತಕರೊಂದಿಗೆ ಸಭೆ ನಡೆಸಿ ಸಂಜೆ ವೇಳೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.

ಸಭೆಯಲ್ಲಿ ವಿವಿಧ ಬಗೆಯ ವ್ಯಾಪಾರ, ವಹಿವಾಟು ನಡೆಸುವ ವರ್ತಕರು ತಮ್ಮ ವ್ಯಾಪಾರ, ವಹಿವಾಟು ಹಾಗೂ ಕಾರ್ಮಿಕರ, ದಿನಗೂಲಿ ಕೆಲಸಗಾರರ ಹಿತದೃಷ್ಟಿಯಿಂದ ಬೇರೆ ಜಿಲ್ಲೆಗಳಂತೆ ನಮ್ಮ ಜಿಲ್ಲೆಯಲ್ಲೂ ಸಹ ಬೆಳಗಿನಿಂದ ಸಂಜೆವರೆಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು  ಎಂದು ಒತ್ತಾಯಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಜಿಲ್ಲಾಡಳಿತದ ಒಳ್ಳೆಯ ಕೆಲಸಕ್ಕೆ ಎಲ್ಲರೂ ಸಹಕರಿಸಿ. ಸರ್ಕಾರದ ಆದೇಶದಂತೆ ಅವರು ಕೆಲಸ ಮಾಡಬೇಕಾ ಗುತ್ತದೆ. ಕೆಲವೊಮ್ಮೆ ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ರೈತರು ಸಾವಿರಾರು ರೂಪಾಯಿ ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಭತ್ತ ಬೆಳೆದಿದ್ದಾರೆ. ಅವರೆಡೆಗೆ ಗಮನ ಹರಿಸಬೇಕು. ವರ್ತಕರು ರೈತರ ಬಗ್ಗೆ ಚಿಂತನೆ ಮಾಡಬೇಕು. ಕೆಲವೆಡೆ ಟ್ರ್ಯಾಕ್ಟರ್‍ನಲ್ಲಿ ಹೋಗುವ ರೈತರನ್ನು ಪೊಲೀಸರು ತಡೆ ಹಿಡಿಯುತ್ತಿದ್ದಾರೆ. ಹಾಗಾಗಬಾರದು. ಎಸ್‍ಪಿಯವರು ಪೊಲೀಸರಿಗೆ ತಿಳಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. 

ಮೆಡಿಕಲ್ ಶಾಪ್ ಅಂಗಡಿಗಳ ಸಂಘದ ಪದಾಧಿಕಾರಿ ಸಪಟ್‍ಲಾಲ್ ಮಾತನಾಡಿ, ಹೊರಗಿನಿಂದ ಬರುವ ಔಷಧಿಗಳ ಅನ್‍ಲೋಡಿಂಗ್ ಬಹಳ ಹೊತ್ತು ಆಗುತ್ತದೆ. ಬಂದಂತಹ ಸ್ಟಾಕನ್ನು ಪ್ರತಿದಿನ ಕಂಪ್ಯೂಟರ್‌ಗೆ ಅಪ್‍ಲೋಡ್ ಮಾಡಬೇಕು. ಇದಕ್ಕೆ ತಾಸಿಗೂ ಹೆಚ್ಚು ಸಮಯ ಬೇಕು.  1 ಗಂಟೆಗೆ ಬಾಗಿಲು ಮುಚ್ಚುವುದರಿಂದ ಔಷಧಿ ಕೇಳುವವರ ಒತ್ತಡವೂ ಹೆಚ್ಚಿರುತ್ತದೆ. ಆದ್ದರಿಂದ ದಿನಪೂರ್ತಿ ವ್ಯಾಪಾರ ಮಾಡಲು ಅವಕಾಶ ನೀಡಿ ಎಂದರು.

ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಂಘದ ಪದಾಧಿಕಾರಿ ಮಾತನಾಡಿ, ನಮ್ಮ ಪ್ರೆಸ್‍ಗಳು ಕಾರ್ಯನಿರ್ವಹಿಸದಿದ್ದರೆ  ಮಷಿನ್ ಹೆಡ್ ಹಾಳಾಗುತ್ತದೆ. ಒಂದು ಹೆಡ್ ರೂ.4 ರಿಂದ 5 ಲಕ್ಷ. ಮಷಿನ್‍ಗಳಿಗೆ ರೂ.10 ರಿಂದ 12 ಲಕ್ಷ ಆಗುತ್ತದೆ. ಹಾಗಾಗಿ ಮತ್ತೆ ಅವುಗಳನ್ನು ಈ ರೀತಿ ಮಾಡಿಸಬೇಕಾದರೆ ಇಂಜಿನಿಯರ್‍ಗಳು ಬೆಂಗಳೂರಿನಿಂದ ಬರಬೇಕು. ಸದ್ಯಕ್ಕೆ ಅಲ್ಲಿಂದ ಬರುವ ಸ್ಥಿತಿ ಇಲ್ಲ. ಹಾಗಾಗಿ ನಮ್ಮ ಪ್ರೆಸ್‍ಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದರು.

ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್ ಮಾತನಾಡಿ, ಈ ತಿಂಗಳ 31 ರೊಳಗೆ ವೃತ್ತಿ ತೆರಿಗೆ ಪಾವತಿಸಬೇಕಾಗಿದೆ. ಇಲ್ಲದಿದ್ದರೆ ದಂಡ ಬೀಳುತ್ತದೆ. ದಾವಣಗೆರೆ ಜಿಲ್ಲೆಯಿಂದಲೇ ರೂ.25 ಕೋಟಿ ಜಿಎಸ್‍ಟಿ ಸಂಗ್ರಹವಾಗಲಿದೆ. ಸಮಯಕ್ಕೆ ಸರಿಯಾಗಿ ಜಿಎಸ್‍ಟಿ ಕಟ್ಟದಿದ್ದರೆ ಶೇ.9 ಬಡ್ಡಿ ಬೀಳಲಿದೆ. ಹಾಗಾಗಿ ತೆರಿಗೆ ಸಲಹೆಗಾರರಿಗೆ ಅನುಕೂಲ ಮಾಡಿಕೊಡಿ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಕಾರ್ಯದರ್ಶಿ ಅಜ್ಜಂಪುರ ಶಂಭುಲಿಂಗಪ್ಪ ಮಾತನಾಡಿ, ಬೇರೆ ಜಿಲ್ಲೆಗಳಂತೆ ನಮಗೂ ಅವಕಾಶ ಮಾಡಿಕೊಡಿ. ಅನಗತ್ಯ ಬ್ಯಾರಿಕೇಡ್ ತೆಗೆಯಿರಿ. ಕೆಲಸ, ಕಾರ್ಯಗಳು ಸ್ಥಗಿತಗೊಂಡು ಕೂಲಿ ಕಾರ್ಮಿಕರಿಗೆ ಕಷ್ಟವಾಗಿದೆ ಎಂದರು.

ಟೆಕ್ಸ್‍ಟೈಲ್ಸ್ ಸಂಘದ ಪ್ರೊ. ವೈ.ವೃಷಭೇಂದ್ರಪ್ಪ, ಕಂಟೈನ್‍ಮೆಂಟ್ ಏರಿಯಾ ಹೊರತುಪಡಿಸಿ ಇತರೆಡೆ ಇರುವವರಿಗೆ ಕೆಲಸ ಮಾಡಲು ಅವಕಾಶ ಕೊಡಿ. ಆ ನೌಕರರ ವೈದ್ಯಕೀಯ ತಪಾಸಣೆ ಸರ್ಟಿಫಿಕೇಟ್ ಕೊಡುತ್ತೇವೆ ಎಂದರು.

ಕಾಸಿಯಾ ಸಂಘದ ಮಂಜುನಾಥ್, ಟೆಕ್ಸ್‍ಟೈಲ್ ಉದ್ಯಮ ಜಿಲ್ಲೆಯಲ್ಲಿ 5 ರಿಂದ 6 ಸಾವಿರ ಜನಕ್ಕೆ ಉದ್ಯೋಗ ನೀಡಿದೆ. ಈ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದ್ದು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಸಬೇಕೆಂದರು.

ಇಂಡಸ್ ಆಗ್ರೋ ಪ್ರತಿನಿಧಿ ಗಿರೀಶ್, ನಮ್ಮ ಕಂಪೆನಿಯಿಂದ ಮಿಡಿ ಸೌತೆಯನ್ನು ರೈತರಿಂದ ಖರೀದಿ ಮಾಡುತ್ತಿದ್ದು, ರೂ.100 ಕೋಟಿ ವಹಿವಾಟು ಇದೆ. 150 ಕೆಲಸಗಾರರಿಗೆ ಉದ್ಯೋಗ ನೀಡಿದ್ದೇವೆ. ಈಗಾಗಲೇ 300 ಎಕರೆಯಲ್ಲಿ ಮಿಡಿ ಸೌತೆ ಕಟಾವಿಗೆ ಬಂದಿದ್ದು, ಪ್ರತಿನಿತ್ಯ 50 ರಿಂದ 60 ಟನ್ ಪ್ರೊಸೆಸ್ ಆಗಿ ವಿದೇಶಿ ಮಾರುಕಟ್ಟೆಗೆ ರಫ್ತಾಗಲಿದೆ. ಒಂದು ದಿನ ಉಳಿದರೆ ಮತ್ತೆ ನಾಳೆಯ ಉತ್ಪನ್ನವೂ ಸೇರಿಕೊಂಡು ಪ್ರೊಸೆಸಿಂಗ್ ಕಷ್ಟವಾಗುತ್ತದೆ. ಆದ್ದರಿಂದ ಬೆಳಗಿನಿಂದ ಸಂಜೆವರೆಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಎಪಿಎಂಸಿ ಯಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದ್ದು, ರೈತರಿಗೆ ಯಾವುದೇ ರೀತಿ ತೊಂದರೆ ಆಗಿಲ್ಲ. 50 ರಿಂದ 55 ಕೋಟಿ ವಹಿವಾಟು ನಡೆದಿದೆ. ದೂರದ ಊರುಗಳಿಂದ ತರಕಾರಿ ಬರುವುದು ಸ್ವಲ್ಪ ತಡವಾಗುತ್ತಿದ್ದು, ಸಣ್ಣ ಪುಟ್ಟ ತೊಂದರೆಗಳಾಗುತ್ತಿವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ದಾವಣಗೆರೆಯಲ್ಲಿ ಸಂಭವಿಸಿರುವ ಎಲ್ಲಾ ಪ್ರಕರಣಗಳು ಕೆಲವೇ ಕುಟುಂಬಗಳಿಗೆ ಸಂಬಂಧಿಸಿವೆ. ಬೇರೆ ಭಾಗದಲ್ಲಿ ಕಂಡುಬಂದಿಲ್ಲ. ಹಾಗಾಗಿ ನೀವು ಮತ್ತು ನಾವುಗಳು ಲಾಕ್‍ಡೌನ್‍ನಿಂದ ಅನುಭವಿಸಿದ ಕಷ್ಟಗಳಿಂದ ವೈರಸ್‍ನಿಂದ ಬಚಾವಾಗಿದ್ದೇವೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಜವಳಿ ಉದ್ಯಮಿ ಬಿ.ಸಿ. ಉಮಾಪತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಉಪಾಧ್ಯಕ್ಷ ಕಿರುವಾಡಿ ಸೋಮಶೇಖರ್‌, ಖಜಾಂಚಿ ಟಿ.ಎಸ್. ಜಯರುದ್ರೇಶ್‌, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ನಜ್ಮಾ, ಜಿಲ್ಲಾ ವರ್ತಕರ ಸಂಘದ ಪದಾಧಿಕಾರಿಗಳು ಇದ್ದರು.

error: Content is protected !!