ವಿಶ್ವಮಾನವ ದಿನಾಚರಣೆ ಹಾಗೂ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಪ್ರೊ.ಹೆಚ್.ಎ. ಭಿಕ್ಷಾವರ್ತಿ ಮಠ
ದಾವಣಗೆರೆ, ಡಿ.29- ಪವಿತ್ರ ಎಂಬ ಪರಿಕಲ್ಪನೆಯೇ ಅತೀ ಅಪಾಯಕಾರಿಯಾದದ್ದು ಎಂದು ವಿಶ್ರಾಂತ ಪ್ರಾಂಶುಪಾಲರೂ, ಸಾಹಿತಿಗಳೂ ಆದ ಪ್ರೊ.ಹೆಚ್.ಎ. ಭಿಕ್ಷಾವರ್ತಿಮಠ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಹೆಚ್.ಎನ್. ಶಿವಕುಮಾರ್ ಅವರ `ಮುಂಗಾರು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಕೃತಿ ಬಿಡುಗಡೆಗೊಳಿಸಿ, `ಕುವೆಂಪು ಅವರ ವೈಚಾರಿಕ ನಿಲುವುಗಳು’ ಕುರಿತು ಉಪನ್ಯಾಸ ನೀಡಿದರು.
ವಿಜ್ಞಾನ ಎಷ್ಟೇ ಮುಂದುವರೆದರೂ, ಜನರಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆದಿಲ್ಲ. ಸಮಾಜದಲ್ಲಿ ಪವಿತ್ರ-ಅಪವಿತ್ರ ಎನ್ನುವ ಮೂಲಕ ಪುರೋಹಿತ ಶಾಹಿ ವರ್ಗ ಮೌಢ್ಯವನ್ನು ಬಿತ್ತುತ್ತಿದೆ.
ಪವಿತ್ರ ಎಂಬ ಪರಿಕ್ಪಲನೆ ಅತಿ ಅಪಾಯಕಾರಿಯಾದದ್ದು ಎಂದು ಹೇಳಿದರು.
ಕೋಮುವಾದ ಕೊರೊನಾಕ್ಕಿಂತ ಅಪಾಯ ಕಾರಿಯಾದದ್ದು. ಕೊರೊನಾಗೆ ಔಷಧಿ ಕಂಡು ಹಿಡಿಯಬಹುದು. ಆದರೆ ಕೋಮುವಾದಕ್ಕೆ ಔಷಧಿ ಬೇಕಾದರೆ ನಾವು ಮತ್ತೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಬಳಿಯೇ ಹೋಗಬೇಕಾಗುತ್ತದೆ ಎಂದು ಹೇಳಿದರು.
ಮೌಢ್ಯದ ವಿಷಯದಲ್ಲಿ ನಾವು ಮತ್ತೆ 70 ವರ್ಷಗಳ ಹಿಂದಕ್ಕೆ ಜಾರುತ್ತಿರುವುದು ನೋವಿನ ಸಂಗತಿ, ಪ್ರಸ್ತುತ ದಿನಗಳಲ್ಲಿ ಮೂಢನಂಬಿಕೆ ಕೇವಲ ಧರ್ಮಕ್ಕೆ ಸೀಮಿತವಾಗಿಲ್ಲ. ನಾನೇ ಶ್ರೇಷ್ಠ ಎನ್ನುವ ಜಾತಿ ಮೂಢನಂಬಿಕೆ, ಇಂತವರಿಂದಲೇ ಮಾತ್ರ ದೇಶದ ಉದ್ಧಾರ ಎಂಬ ರಾಜಕೀಯ ಮೂಢನಂಬಿಕೆ, ಇಂಗ್ಲಿಷ್ ಓದಿದರೆ ಮಾತ್ರ ಬದುಕಲು ಸಾಧ್ಯ ಎಂಬ ಭಾಷೆಯ ಮೂಢನಂಬಿಕೆಗೆ ಜನತೆ ಬಲಿಯಾಗುತ್ತಿದ್ದಾರೆ. ಇದರಿಂದಾಗಿ ವಿಶ್ವ ಮಾನವ ಪರಿಕಲ್ಪನೆ ಕಡಿಮೆಯಾಗುತ್ತಿದೆ ಎಂದರು.
ಹುಟ್ಟುವಾಗ ವಿಶ್ವಮಾನವನಾಗುವ ಮಗುವನ್ನು ಬೆಳೆಯುತ್ತಾ ಅಲ್ಪಮಾನವನನ್ನಾಗಿ ಮಾಡುತ್ತಿದ್ದೇವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ದೊಡ್ಡ ದೋಷವಿದ್ದು, ಅದನ್ನು ಸರಿಪಡಿಸಬೇಕಿದೆ ಎಂದ ಅವರು, ಕುವೆಂಪು ಅವರ ವಿಶ್ವಮಾನವ ಸಂದೇಶದ ಬಗ್ಗೆ ಶಾಲೆಗಳಲ್ಲಿ ಪಾಠ ಮಾಡಬೇಕು. ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು.
ಭಾರತದ ಇತಿಹಾಸದಲ್ಲಿ ಪುರೋಹಿತಶಾಹಿಯನ್ನು ಮೊದಲು ವಿರೋಧಿಸಿದ್ದು ಗೌತಮ ಬುದ್ಧ. ನಂತರ ಬಸವಾದಿ ಶರಣರು ಜಾತಿ ವ್ಯವಸ್ಥೆಯನ್ನು ಖಂಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಆದರೆ ಇಂದು ಬಸವ ಕುಲದವರೇ ಮೌಢ್ಯಕ್ಕೆ ಶರಣಾಗುತ್ತಿರುವುದು ದುರಂತ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನದ ಕುರಿತು ಉಪನ್ಯಾಸಕ ಬಸವರಾಜ್ ಹನುಮಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಜನತಾವಾಣಿ ಉಪ ಸಂಪಾದಕರೂ, ಲಯನ್ಸ್ ಪ್ರಾಂತೀಯ ಅಧ್ಯಕ್ಷರೂ ಆದ ಇ.ಎಂ. ಮಂಜುನಾಥ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಬಿ.ಟಿ. ಪ್ರಕಾಶ್, ಸಿದ್ಧಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು, ರುದ್ರಾಕ್ಷಿ ಬಾಯಿ ಮತ್ತು ತಂಡ, ರುಕ್ಕುಬಾಯಿ ಮತ್ತು ಸಂಗಡಿಗರು, ವಿದುಷಿ ಸಂಗೀತಾ ರಾಘವೇಂದ್ರ ಅವರುಗಳಿಂದ ಕುವೆಂಪು ಅವರ ಕುರಿತು ಗೀತ ನಮನ ಹಾಗೂ ನೃತ್ಯ ನಮನ ಪ್ರದರ್ಶನ ನಡೆಯಿತು.