ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಐಜಿಪಿ ಎಸ್.ರವಿ ಅಭಿಮತ
ದಾವಣಗೆರೆ, ಡಿ.29- ಪೊಲೀಸ್ ಸೇವೆಯಲ್ಲಿ ಸಾಕಷ್ಟು ಒತ್ತಡಗಳಿದ್ದು, ಅದರ ನಿವಾರಣೆಗಾಗಿ ಕ್ರೀಡೆಗಿಂತ ಉತ್ತಮವಾದ ಸಾಧನ ಬೇರೊಂದಿಲ್ಲ ಎಂದು ಪೂರ್ವ ವಲಯ ಐಜಿಪಿ ಎಸ್. ರವಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಿಳಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಹಮ್ಮಿಕೊಂ ಡಿದ್ದ ಮೂರು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾ ರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀವಿತಾವಧಿವರೆಗೂ ಬೇರೆಯವರಿಗೆ ಹೊರೆಯಾಗದೇ ಸ್ವಾವಲಂಬಿಯಾಗಿ ನಮ್ಮ ಕೆಲಸವನ್ನು ನಾವು ಮಾಡಿ ಕೊಳ್ಳಲು ಸದೃಢರಾಗಿ ರಲು ಚಟುವಟಿಕೆ, ಕ್ರೀಡೆ ಬೇಕು. ನಾವು ನಿತ್ಯ ಜೀವನದ ದಿನದ ಒಂದು ಗಂಟೆಯಾದರೂ ಯಾವುದಾದರೊಂದು ಚಟುವಟಿಕೆಯಲ್ಲಿ ಬಿಡುವಿನ ಹಾಗೂ ಮನಸ್ಸಿನ ಸಮಯವಾಗಿಸಿ ಕೊಳ್ಳಬೇಕು. ಮುಖ್ಯವಾಗಿ ಕ್ರೀಡೆಯಲ್ಲಿ ತಲೀನರಾಗಬೇಕು. ಜೀವನ ಪರ್ಯಂತ ಅಭ್ಯಾಸಿಸಿ, ಜೀವನದ ಸಂಗಾತಿಯನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು.
ಕ್ರೀಡಾ ಚಟುವಟಿಕೆಗಳ ಸಂದರ್ಭವೊಂದೇ ಪೊಲೀಸ್ ಇಲಾಖೆಯಲ್ಲಿ ಹಬ್ಬದ ವಾತಾವರಣ ಸೃಷ್ಠಿಸಲಿದೆ. ಮೂರು ದಿನಗಳ ಕಾಲದ ಕ್ರೀಡೆಯ ಪರ್ವದಲ್ಲಿ ನಮ್ಮ ದಿನನಿತ್ಯದ ಪೊಲೀಸ್ ಕರ್ತವ್ಯವನ್ನು ಸ್ವಲ್ಪಮಟ್ಟಿಗೆ ಬದಿಗಿಟ್ಟು ಕ್ರೀಡೆಯಲ್ಲಿ ಪಾಲ್ಗೊಂಡು ಅದರ ಸಂತೋಷದ ಜೊತೆಗೆ ಉತ್ತೇಜನ, ಉತ್ಸಾಹ ಪಡೆಯುತ್ತೇವೆ ಎಂದರು.
ಬೆಟ್ಟು ತೋರಿಸಿದ ಕಡೆ ಬೆಟ್ಟ ಕುಟ್ಟಿ ಹಿಟ್ಟು ಮಾಡುವಂತವರಾಗಿ: ಬೆಟ್ಟು ತೋರಿಸಿದ ಕಡೆ ಬೆಟ್ಟ ಕುಟ್ಟಿ ಹಿಟ್ಟು ಮಾಡುವಂತಹ 10 ಜನ ಪೊಲೀಸರಿದ್ದರೆ ಸಾಕು ಪೊಲೀಸ್ ಇಲಾಖೆಗೆ ಮಹಾ ಶಕ್ತಿ ಬರಲಿದೆ. ಕರ್ತವ್ಯವನ್ನು ಎರಡು ಕೈಯಲ್ಲಿ ಸ್ವೀಕರಿಸಿ ಕಣ್ಣಿಗೊತ್ತಿಕೊಂಡು ತಲೆ ಮೇಲಿಟ್ಟುಕೊಂಡು ಕೆಲಸ ಮಾಡುವವರೇ ಪೊಲೀಸ್ ಎಂದರು.
ಸ್ವಾಗತಿಸಿದ ಎಸ್ಪಿ ಸಿ.ಬಿ. ರಿಷ್ಯಂತ್ ಮಾತನಾಡಿ, ಒತ್ತಡದಿಂದ ಮುಕ್ತರಾಗಲು ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿನ ಕ್ರೀಡಾ ಪ್ರತಿಭೆ ಹೊರತರುವುದು ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ. ಜಿಲ್ಲಾ ಮಟ್ಟದಲ್ಲಿ ಗೆದ್ದ ಪೊಲೀಸ್ ಕ್ರೀಡಾಪಟುಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ : ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಕ್ರೀಡಾಕೂಟದ ಪುರುಷರ ವಿಭಾಗದ ಜಂಟಿ ಪ್ರಶಸ್ತಿಯನ್ನು ಡಿಎಆರ್‌ನ ಎ.ಪಿ. ಜಯಣ್ಣ ಮತ್ತು ಉತ್ತರ ಸಂಚಾರ ಠಾಣೆಯ ಮಹಾಂತೇಶ್ ಬಿದರಿ ಪಡೆದುಕೊಂಡರು. ಮೂರು ದಿನಗಳ ಕ್ರೀಡಾಕೂಟದಲ್ಲಿ ಆರು ತಂಡಗಳಾದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ಉಪವಿಭಾಗ, ಚನ್ನಗಿರಿ ಉಪವಿಭಾಗ, ದಾವಣಗೆರೆ ಗ್ರಾಮಾಂತರ, ಜಿಲ್ಲಾ ಪೊಲೀಸ್ ವಿಶೇಷ ತಂಡ ಮತ್ತು ಜಿಲ್ಲಾ ಮಹಿಳಾ ಪೊಲೀಸ್ ತಂಡಗಳ 126 ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯದೊತ್ತಡ ಮರೆತು ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.