ಪದವಿಯೊಂದಿಗೆ ಕೌಶಲ್ಯ ಇದ್ದರೆ ಮಾತ್ರ ಉದ್ಯೋಗ ಮಾರುಕಟ್ಟೆಯಲ್ಲಿ ‘ಮೌಲ್ಯ’

26 ಕಂಪನಿಗಳಿಂದ 768 ಜನರ ನೇಮಕಾತಿ

ಉದ್ಯೋಗ ಮೇಳದಲ್ಲಿ 1,587 ಜನ ಆನ್‌ಲೈನ್ ಮೂಲಕ ನೋಂದಣಿಯಾಗಿದ್ದರು. ಇವರಲ್ಲಿ 1,396 ಜನ ಮೇಳಕ್ಕೆ ಬಂದಿದ್ದರು. 

ಮೇಳದಲ್ಲಿ ಭಾಗಿಯಾಗಿದ್ದ 26 ಕಂಪನಿಗಳು 307 ಅಭ್ಯರ್ಥಿಗಳಿಗೆ ನೇರ ನೇಮಕಾತಿ ಆದೇಶ ಕೊಟ್ಟಿವೆ. 461 ಅಭ್ಯರ್ಥಿಗಳಿಗೆ ಉದ್ಯೋಗ ಪ್ರಸ್ತಾವನೆಯ ಪತ್ರ ನೀಡಲಾಗಿದೆ.

ದಾವಣಗೆರೆ ಜಿಲ್ಲೆ ಮಾತ್ರವಲ್ಲದೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಬೀದರ್, ಬಾಗಲಕೋಟೆ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ  ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು.  ಮಹಿಳಾ ಅಭ್ಯರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ, ಡಿ. 29 – ಉದ್ಯೋಗ ಮಾರು ಕಟ್ಟೆಯಲ್ಲಿ ‘ಖರೀದಿ ಮೌಲ್ಯ’ ಪಡೆಯಲು ಕೇವಲ ಪದವಿ ಇದ್ದರೆ ಸಾಲದು, ಪದವೀಧರರು ಅಗತ್ಯ ಕೌಶಲ್ಯಗಳನ್ನೂ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದ್ದಾರೆ.

75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಸರ್ಕಾರದ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ  ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ದಾವಣಗೆರೆ ವಿ.ವಿ. ದೃಶ್ಯಕಲಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಸರಕು ಮಾರುಕಟ್ಟೆಗೆ ಬಂದರೆ ಮಾತ್ರ ಬೇಡಿಕೆ ಇರುತ್ತದೆ. ಯಾವ ಕಾರ್ಖಾನೆಯೂ ಜನರಿಗೆ ಬೇಡವಾದ ಸರಕು ಉತ್ಪಾದಿಸುವುದಿಲ್ಲ. ಅದೇ ರೀತಿ ಉದ್ಯೋಗ ಮಾರುಕಟ್ಟೆಯಲ್ಲಿ ಕೌಶಲ್ಯ ಇರುವವರಿಗೆ ಮಾತ್ರ ಬೇಡಿಕೆ ಇರುತ್ತದೆ ಎಂದವರು ಹೇಳಿದರು.

ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳಿಂದ ಹೊರ ಬರುವ ಪದವೀಧ ರರನ್ನು ಕಂಪನಿಗಳು ಸಾಲುಗಟ್ಟಿ ನೇಮಕ ಮಾಡಿ ಕೊಳ್ಳುಂತಹ ಪರಿಸ್ಥಿತಿ ರೂಪಿಸಬೇಕಿತ್ತು. ದುರಾದೃಷ್ಟ ವಶಾತ್ ಅಂತಹ ವ್ಯವಸ್ಥೆ ರೂಪುಗೊಂಡಿಲ್ಲ. ಹೀಗಾಗಿಯೇ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ ಮೂಲಕ ಯುವಕ – ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ, ಅವರು ಉದ್ಯೋಗ ಮಾರುಕಟ್ಟೆಯಲ್ಲಿ §ಖರೀದಿ ಮೌಲ್ಯ’ ಹೊಂದುವಂತೆ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಉದ್ಯೋಗ ದರ ದೇಶದ ಆರ್ಥಿಕ ಪರಿಸ್ಥಿತಿ ಸೂಚಿಸುವ ಮಾನದಂಡ ಗಳಲ್ಲಿ ಪ್ರಮುಖವಾಗಿದೆ. ದೇಶದಲ್ಲಿ ಈಗ ಶೇ.6.86ರಷ್ಟು ನಿರುದ್ಯೋಗಿಗಳಿದ್ದಾರೆ. ಜನಸಂಖ್ಯೆ ಅತಿ ಹೆಚ್ಚಾಗಿರುವ ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು.

ದಾವಣಗೆರೆ ವಿ.ವಿ. ಕುಲಸಚಿವೆ ಗಾಯತ್ರಿ ದೇವರಾಜ್ ಮಾತನಾಡಿ, ದುಡಿಯುವ ಕೈಗಳು ಹೆಚ್ಚಾದಷ್ಟೂ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ. ಯುವ ಜನಾಂಗ ಹೆಚ್ಚು ಉದ್ಯೋಗ ಪಡೆದು, ನೆಮ್ಮದಿಯ ಜೀವನ ಸಾಗಿಸಿದಷ್ಟೂ ಆರ್ಥಿಕ ಪ್ರಗತಿಯಾಗುತ್ತದೆ ಎಂದರು.

ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ವ್ಯಕ್ತಿಗಳು ಎಲ್ಲ ಅನುಭವಗಳನ್ನು ತಾವೇ ಪಡೆಯಲಾಗದು. ಹೀಗಾಗಿ ಯಶಸ್ವೀ ನಾಯಕರ ಅನುಭವಗಳಿಂದ ಪಾಠ ಕಲಿತು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ದಾವಣಗೆರೆ ವಿ.ವಿ. ಉದ್ಯೋಗಾಧಿಕಾರಿ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಎಸ್. ಜಗದೀಶ್, ದಿಶಾ ಸಮಿತಿ ಸದಸ್ಯರಾದ ಮುಪ್ಪಣ್ಣ, ಚೇತನ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಬಸವರಾಜ್ ಸ್ವಾಗತಿಸಿದರೆ, ದತ್ತಾತ್ರೇಯ ಭಟ್ ನಿರೂಪಿಸಿದರು.

error: Content is protected !!