ದಾವಣಗೆರೆ, ಡಿ. 29- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸುವ ಮೂಲಕ ಕರ್ನಾಟಕದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ ಎಂಇಎಸ್ ಸಂಘಟನೆಯನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದ್ದಾರೆ.
ನಗರದ ಶಿವಯೋಗಾಶ್ರಮದ ಆವರಣದಲ್ಲಿ ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಸಂಜೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ನಟ ಪುನೀತ್ ನುಡಿ ನಮನ, ನೇತ್ರದಾನ ಹಾಗೂ ದೇಹದಾನ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಂಇಎಸ್ ಪುಂಡಾಟಿಕೆಯನ್ನು ಕನ್ನಡಿಗರು ಸಹಿಸುವುದಿಲ್ಲ. ಅಂತಹ ಸಂಘಟನೆಯನ್ನು ಬುಡ ಸಮೇತ ಕಿತ್ತೆಸೆಯಬೇಕಾಗಿದೆ. ರಾಜ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸುವ, ತಾಯಿ ಭುವನೇಶ್ವರಿ ಧ್ವಜಕ್ಕೆ ಬೆಂಕಿ ಹಚ್ಚುವ ಮತ್ತು ಶಿವಾಜಿ ಪ್ರತಿಮೆಗೆ ಮಸಿ ಬಳಿಯುವ ಕೃತ್ಯ ಅತ್ಯಂತ ಖಂಡನೀಯ. ಇಂತಹ ನೀಚತನದ ಕೆಲಸಕ್ಕೆ ಯಾರೂ ಸಹ ಕೈಹಾಕಬಾರದು ಎಂದು ಅವರು ಮನವಿ ಮಾಡಿದರು.
ನಮ್ಮಲ್ಲಿನ ಒಳ ಜಗಳವೇ ಬ್ರಿಟಿಷರು 200 ವರ್ಷಗಳ ಕಾಲ ಆಳ್ವಿಕೆ ನಡೆಸಲು ಕಾರಣವಾ ಯಿತು. ನಮ್ಮ ನಮ್ಮಲ್ಲಿ ಕಚ್ಚಾಡುವುದನ್ನು ಬಿಟ್ಟು, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗಾಗಿ ಕನ್ನಡಿಗರಲ್ಲೇ ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡಿ, ಕನ್ನಡ ಚಿತ್ರರಂಗಕ್ಕೆ ಮತ್ತು ಈ ನಾಡಿಗೆ ಅಪಾರವಾದ ಕೊಡುಗೆ ನೀಡುವ ಮೂಲಕ ಸ್ಮರಣೀಯರಾದ ನಟ ಪುನೀತ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಕನ್ನಡ ನೆಲ, ಜಲ, ನಾಡು, ನುಡಿಗಾಗಿ ನಡೆಯುವ ಹೋರಾಟಕ್ಕೆ ನಿರಂತರ ಬೆಂಬಲ ನೀಡುವುದಾಗಿ ಹೇಳಿದ ಅವರು, ಕನ್ನಡಕ್ಕೆ ಕುತ್ತು ಬಂದರೆ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅಭಿಮಾನದ ಮಾತುಗಳನ್ನಾಡಿದರು.
ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸ್ವಾಭಿಮಾನ ಕಡಿಮೆಯಾಗಿ, ಸ್ವಾರ್ಥ ಹೆಚ್ಚಾಗುತ್ತಿದೆ. ಸ್ವಾರ್ಥ ರಹಿತ, ನಾಡು ನುಡಿ ರಕ್ಷಣೆಗಾಗಿ ನಡೆಸುವ ಹೋರಾಟಕ್ಕೆ ನಿರಂತರ ಬೆಂಬಲ ಇದೆ ಎಂದರು.
ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಜೆ. ಅಜಯ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಕಾರ್ಯಾಧ್ಯಕ್ಷ ಎಸ್.ಟಿ. ಸೋಮಶೇಖರ್, ಕ್ರೈಸ್ತ ಧರ್ಮಗುರು ಅಂತೋಣಿ ನಜರಟ್, ಕನ್ನಡ ಚಳವಳಿ ಹೋರಾಟಗಾರರಾದ ಕೆ.ಜಿ. ಶಿವಕುಮಾರ್, ಟಿ. ಶಿವಕುಮಾರ್, ಬಿಜೆಪಿ ಹಿರಿಯ ಮುಖಂಡ ಪ್ರತಾಪ್, ಕರಿಗಾರ್ ಬಸಪ್ಪ, ರಾಕೇಶ್ ಜಾಧವ್, ಅಂತರರಾಷ್ಟ್ರೀಯ ಕ್ರೀಡಾಪಟು ಜೆ.ಎನ್. ಶ್ರೀನಿವಾಸ್, ಯೋಗ ಪಟು ಡಾ. ಜೈಮುನಿ, ವೇದಿಕೆ ಪದಾಧಿಕಾರಿಗಳಾದ ಕೆ.ಹೆಚ್. ರೇವಣಸಿದ್ದಪ್ಪ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಪುಟ್ಟರಾಜ ಕವಿ ಗವಾಯಿಗಳ ಶಾಲಾ ಅಂಧ ಮಕ್ಕಳಿಂದ ಪ್ರಾರ್ಥನೆಯಾಯಿತು. ಸೋಮಶೇಖರ್ ಸ್ವಾಗತಿಸಿದರು. ಡಾ. ರುದ್ರಮುನಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ್ ಬಿ.ಎಲ್. ನಿಟ್ಟೂರು ನಿರೂಪಿಸಿದರು. ಹರಿಹರದ ಸಪ್ತರ್ಷಿ ಯೋಗ ಕೇಂದ್ರದ ಯೋಗಪಟುಗಳಿಂದ ಯೋಗ ಪ್ರಾರ್ಥನೆ, ಯೋಗ ನೃತ್ಯ ಕಾರ್ಯಕ್ರಮ ನಡೆಯಿತು.