ದಾವಣಗೆರೆ ಜನಕ್ಕೆ ಗತ್ತು, ತಾಕತ್ತು, ಸ್ವಾಭಿಮಾನ ಇದೆ
ದಾವಣಗೆರೆ ಬದುಕಿಗೆ ಖಾರ ಇದೆ. ಇಲ್ಲಿಯ ಜನರಿಗೆ ಗತ್ತು, ಸ್ವಾಭಿಮಾನ, ತಾಕತ್ತು ಇದೆ ಎಂದು ಹೆಸರಾಂತ ವಾಗ್ಮಿ ಪ್ರೊ. ಕೃಷ್ಣೇಗೌಡ ಮೆಚ್ಚುಗೆಯ ಮಾತುಗಳನ್ನಾಡಿದರು. ಕನ್ನಡ ಭಾಷೆ ನಿರಂತರವಾಗಿ ಉಳಿಯುವಂತಾಗಲಿ, ಶಕ್ತಿಯುತವಾಗಿ ಬೆಳೆಯುವಂತಾಗಲಿ, ಕನ್ನಡ ಭಾಷಾ ಸಮುದಾಯ ಗಟ್ಟಿಗೊಳ್ಳಲಿ ಎಂಬ ಸದಾಶಯ ವ್ಯಕ್ತಪಡಿಸಿದರು.
ದಾವಣಗೆರೆ, ಡಿ.28- ಜಗತ್ತಿನಲ್ಲಿಯೇ ಬರವಣಿಗೆ ಮತ್ತು ಉಚ್ಛಾರಣೆ ನಡುವೆ ಸಾಂಗತ್ಯವಿರುವ ಅದ್ಭುತವಾದ ಭಾಷೆ ಕನ್ನಡ. ಪ್ರಪಂಚದ 30 ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಆದರೆ ಹೇಳಿಕೊಳ್ಳುವ ತಾಕತ್ತನ್ನು ಕನ್ನಡಿಗರು ಪ್ರದರ್ಶಿಸುತ್ತಿಲ್ಲ ಎಂದು ಹೆಸರಾಂತ ವಾಗ್ಮಿ ಮೈಸೂರಿನ ಪ್ರೊ. ಕೃಷ್ಣೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಮಹಾನಗರ ಪಾಲಿಕೆ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು ಹಾಗೂ ಪತ್ರಕರ್ತರ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಚನೆ ದೃಷ್ಟಿಯಿಂದ ಕನ್ನಡ ಭಾಷೆ ಅದ್ಭುತವಾದ ಭಾಷೆಯಾಗಿದೆ. ಇದು ಹಾಡು, ಒಗಟು, ಗಾದೆಗಳನ್ನು ಒಳಗೊಂಡಿರುವ ಶ್ರೀಮಂತ ಭಾಷೆಯಾಗಿದೆ ಎಂದು ಅಭಿಮಾನಪೂರ್ವಕವಾಗಿ ನುಡಿದರು.
ಕನ್ನಡ ಸಾಹಿತ್ಯ ಕೂಡ ಯಾವ ಸಾಹಿತ್ಯಕ್ಕೂ ಕಡಿಮೆ ಇಲ್ಲ. ಕನ್ನಡದ ವರ ನಟ ಡಾ. ರಾಜಕುಮಾರ್ ನಟಿಸಿರುವ ವೈವಿಧ್ಯಮಯ ಪಾತ್ರಗಳನ್ನು ಜಗತ್ತಿನ ಬೇರೆ ಯಾವ ನಟರಿಂದಲೂ ಮಾಡಲು ಸಾಧ್ಯವಿಲ್ಲ. ಕನ್ನಡ ಸಾಹಿತಿಗಳು ಕೂಡ ಯಾವ ಭಾಷೆಯ ಸಾಹಿತಿಗಳಿಗಿಂತ ಕಡಿಮೆಯಿಲ್ಲ. ಕನ್ನಡ ಭಾಷೆಯ ತಾಕತ್ತನ್ನು ಅರ್ಥಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಕನ್ನಡ ಭಾಷೆ ಸರ್ವ ಸಮೃದ್ಧ ಭಾಷೆಯಾಗಿದ್ದು, ಹಿಂದಿನ ಪೂರ್ವಿಕರು ಕನ್ನಡವನ್ನು ಬಳುವಳಿಯಾಗಿ ಕೊಟ್ಟಿದ್ದಾರೆ. ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಕನ್ನಡಿಗರ ಮೇಲಿದೆ. ಇಲ್ಲದಿದ್ದರೆ ನಮ್ಮ ಪೂರ್ವಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕನ್ನಡದ ಪ್ರತಿ ಅಂಗ ಪ್ರಬಲವಾದಾಗ ಮಾತ್ರ ಕನ್ನಡ ಭಾಷೆ ಪ್ರಬಲವಾಗಿ ಬೆಳೆಯಲು ಸಾಧ್ಯ ಎಂದರು.
ಕನ್ನಡ ನಮ್ಮ ಗರ್ಭದಿಂದ ಹೊರಹೊಮ್ಮಿದ ಭಾಷೆಯಾದರೆ, ಇಂಗ್ಲಿಷ್ ಕೇವಲ ಮೆದುಳಿನ ಭಾಷೆಯಾಗಿದೆ. ಕನ್ನಡ ನಾಡಿನ ಎಲ್ಲಾ ಬ್ಯಾಂಕುಗಳು, ಕೈಗಾರಿಕೆಗಳು, ಕನ್ನಡ ಸಿನಿಮಾಗಳು ಮತ್ತು ಕನ್ನಡ ಪತ್ರಿಕೆಗಳನ್ನು ಚನ್ನಾಗಿ ಬೆಳೆಸಬೇಕಾಗಿದೆ ಎಂದು ಹೇಳಿದರು.
ಪ್ರಪಂಚದಲ್ಲಿ ಭಾಷೆ ಹೆಸರಿನಲ್ಲಿ ಹಬ್ಬವನ್ನು ಆಚರಿಸುತ್ತಿರುವುದು ಕರ್ನಾಟಕದಲ್ಲಿ ಮಾತ್ರ. ಕನ್ನಡಿಗರೆಲ್ಲರೂ ಸೇರಿ ಕನ್ನಡ ಭಾಷೆಯನ್ನು ಶಕ್ತಿಯುತವಾಗಿ ಬೆಳೆಸಬೇಕೆಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೀರಪ್ಪ ಎಂ. ಬಾವಿ, ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು.
ಉಪ ಮಹಾಪೌರರಾದ ಶಿಲ್ಪಾ ಜಯಪ್ರಕಾಶ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ. ಗೋಣೆಪ್ಪ, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಶ್ರೀನಿವಾಸ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ದಿಳ್ಳೆಪ್ಪ, ವಿಪಕ್ಷ ನಾಯಕ ಎ. ನಾಗರಾಜ್, ಆಯುಕ್ತರಾದ ವಿಶ್ವನಾಥ್ ಪಿ. ಮುದಜ್ಜಿ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್, ಕನ್ನಡಪರ ಹೋರಾಟಗಾರರಾದ ಟಿ. ಶಿವಕುಮಾರ್, ಕೆ.ಜಿ. ಶಿವಕುಮಾರ್, ಅಬ್ದುಲ್ ಲತೀಫ್, ನಾಗೇಂದ್ರ ಬಂಡೀಕರ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಮತಿ ರುದ್ರಾಕ್ಷಿಬಾಯಿ ಹಾಗೂ ಸಿದ್ಧಗಂಗಾ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕೆ.ಎಂ. ವೀರೇಶ್ ಪೈಲ್ವಾನ್ ಹಾಗೂ ರಾಕೇಶ್ ಜಾಧವ್ ನಿರೂಪಿಸಿದರು. ಉಮಾ ಪ್ರಕಾಶ್, ಆಶಾ ಉಮಾಶಂಕರ್ ಸ್ವಾಗತಿಸಿದರು. ಸ್ವಾಗಿ ಶಾಂತಕುಮಾರ್ ವಂದಿಸಿದರು.
ಜಿಲ್ಲಾ ವಾದ್ಯವೃಂದ ಕಲಾವಿದರ ಸಂಘದವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಜನತಾವಾಣಿ ವರದಿಗಾರ ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, ಪ್ರಜಾವಾಣಿ ಸ್ಥಾನಿಕ ಸಂಪಾದಕ ವಿಶಾಖ್, ಪಬ್ಲಿಕ್ ಟಿವಿ ವರದಿಗಾರ ಪುನೀತ್ ಅಪ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.