ಬಸಾಪುರದಲ್ಲಿ ಶ್ರೀ ಮಹೇಶ್ವರ ಜಾತ್ರಾ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಪ್ರಸಾದ ಸೇವಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಎಸ್.ಎಸ್. ಗಣೇಶ್,
ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಮಹೇಶ್ವರನ ಪೂಜೆಯೊಂದಿಗೆ ಅನ್ನ, ಹಾಲು, ಬೆಲ್ಲದ ಪ್ರಸಾದ ಸೇವಿಸಿದ ಗ್ರಾಮಸ್ಥರು
ದಾವಣಗೆರೆ, ಡಿ.28 – ಜಿಲ್ಲಾದ್ಯಂತ ಗ್ರಾಮಗಳಲ್ಲಿ ಮಹೇಶ್ವರ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹೇಶ್ವರನನ್ನು ಪೂಜಿಸಿದ ಜನತೆ, ಪ್ರಸಾದವಾಗಿ ಅನ್ನ, ಹಾಲು, ಪುಡಿ ಬೆಲ್ಲ, ಬಾಳೆ ಹಣ್ಣು ಬೆರೆಸಿ ಸೇವಿಸಿದರು.
ದಸರಾ, ದೀಪಾವಳಿ, ಯುಗಾದಿ ಮುಂತಾದ ಹಬ್ಬಗಳನ್ನು ಮನೆಗಳಲ್ಲಿ ಮನೆಯವರೊಂದಿಗೆ ಮಾಡಿದರೆ, ಮಹೇಶ್ವರ ಜಾತ್ರೆಯನ್ನು ಊರ ಹೊರ ಭಾಗದ ದೇವ ಸ್ಥಾನದ ಆವರಣ ಅಥವಾ ತೋಟದಲ್ಲಿ ಮಾಡಲಾಗುತ್ತದೆ.
ಹಬ್ಬಕ್ಕಾಗಿ ಗ್ರಾಮಸ್ಥರು ಒಂದೆರಡು ದಿನಗಳ ಮೊದಲೇ ಹಬ್ಬ ಆಚರಿಸುವ ಸ್ಥಳವನ್ನು ಶುದ್ಧಗೊಳಿಸಿ, ಮಹೇಶ್ವರನ ಗದ್ದುಗೆ ಸ್ಥಾಪಿಸಿ ತಯಾರಿಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಚಿಕ್ಕ ಮಕ್ಕಳು, ಯುವಕರು ಇಳಿ ವಯಸ್ಸಿನ ಹಿರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಬಸಾಪುರದಲ್ಲಿ ಸಂಭ್ರಮ: ದಾವಣಗೆರೆ ನಗರಕ್ಕೆ ಸಮೀಪದ ಬಸಾಪುರದಲ್ಲಿ ನಡೆಯುವ ಮಹೇಶ್ವರ ಜಾತ್ರೆ ಹೆಚ್ಚು ಪ್ರಸಿದ್ಧಿ. ದಾವಣಗೆರೆ ನಗರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಜನರು ಇಲ್ಲಿನ ಹಬ್ಬಕ್ಕೆ ಬಂದು ಪ್ರಸಾದ ಸೇವಿಸಿ ಸಂಭ್ರಮಿಸುತ್ತಾರೆ.
ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಬಸಾಪುರದ ಜಾತ್ರೆ ಕಳೆಗುಂದಿತ್ತು. ಎರಡು ದಿನಗಳ ಕಾಲ ನಡೆಯುವ ಹಬ್ಬವನ್ನು ಒಂದೇ ದಿನದಲ್ಲಿ ಸರಳವಾಗಿ ಆಚರಿಸಲಾಗಿತ್ತು. ಬರುವ ಭಕ್ತರ ಸಂಖ್ಯೆಯೂ ಕಡಿಮೆಯಾಗಿತ್ತು. ಆದರೆ ಇಂದು ವೈಭವ ಮರುಕಳಿಸಿತ್ತು. ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಪ್ರತಿ ವರ್ಷದಿಂದ ಈ ವರ್ಷವು ಮುಂಜಾನೆ ಹಬ್ಬದ ಸಂಪ್ರದಾಯಗಳು ನಡೆದವು. ಮಹೇಶ್ವರ ಸ್ವಾಮಿಯ ಗದ್ದುಗೆ ಸಮೀಪ ಇರುವ ಪುಷ್ಕರಣಿಯಲ್ಲಿ ಸ್ವಾಮೀಜಿ ಒಬ್ಬರು ಮುಳುಗಿ ಮೃತ್ಯುಕೆಯನ್ನು ತಂದರು. ಅದನ್ನು 2 ಬಾಳೆ ಹಣ್ಣಿನ ಚಿಪ್ಪಿನಲ್ಲಿಟ್ಟು ಪೂಜಿಸಲಾಯಿತು. ನಂತರ ಎರಡೂ ಬಾಳೆ ಹಣ್ಣಿನ ಚಿಪ್ಪುಗಳನ್ನು ಪುಷ್ಕರಣೆಗೆ ವಿಸರ್ಜಿಸಲಾಯಿತು. ಎರಡೂ ಚಿಪ್ಪುಗಳು ತೇಲಿದ್ದರಿಂದ ಗ್ರಾಮಸ್ಥರ ಸಂಭ್ರಮ ಇಮ್ಮಡಿಯಾಯಿತು.
ವಿಸರ್ಜಿಸಿದ ಎರಡೂ ಚಿಪ್ಪುಗಳು ಮುಳುಗಿದರೆ ಗಂಡಾಂತರವೆಂದೂ, ಎರಡೂ ತೇಲಿದರೆ ತುಂಬಾ ಒಳ್ಳೆಯದೆಂದೂ, ಒಂದು ತೇಲಿ ಒಂದು ಮುಳುಗಿದರೆ ಸಾಧಾರಣ ಫಲ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದೆ.
ಮಹೇಶ್ವರ ಗದ್ದುಗೆ ಬಳಿ ಆನೆಕೊಂಡದ ಬಸವೇಶ್ವರ ಸ್ವಾಮಿ, ಬಸಾಪುರದ ಗುರುಸಿದ್ದೇಶ್ವರ ಸ್ವಾಮಿ ಹಾಗೂ ಹಾಲಸ್ವಾಮಿ ದೇವರುಗಳ ಸಮಾಗಮವಾಗಿತ್ತು. ಜೊತೆಗೆ ಆನೆಕೊಂಡದ ಬಸವೇಶ್ವರ ಸ್ವಾಮಿಯನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ನಂತರ ಒಲೆ ಹಚ್ಚಿ ಪ್ರಸಾದ ತಯಾರಿಸಲಾಯಿತು.