ಬೇಡ ಜಂಗಮ ಜನಾಂಗ ಗುರಿಯಾಗಿಸಿದ್ದಕ್ಕೆ ಆಕ್ಷೇಪ
ದಾವಣಗೆರೆ, ಡಿ.28- ಬೇಡ ಜಂಗಮ ಜನಾಂಗವನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುತ್ತಿರುವುದಾಗಿ ಆರೋಪಿಸಿ ಶಾಸಕ ಪ್ರಿಯಾಂಕ ಖರ್ಗೆ, ಡಾ. ಅನ್ನದಾನಿ, ಪಿ. ರಾಜೀವ್, ಲೋಕೋಪಯೋಗಿ ಸಚಿವ ಗೋವಿಂದ್ ಕಾರಜೋಳ ವಿರುದ್ಧ ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಬೇಡ ಜಂಗಮ ಮಹಾಸಭಾದಿಂದ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮುಖೇನ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಕುಡುಚಿ ಶಾಸಕ ಪಿ. ರಾಜೀವ್ ಸದನದ ಕಲಾಪದಲ್ಲಿ ಕೆಲವು ಶಾಸಕರೊಂದಿಗೆ ಸೇರಿ ಉಚ್ಛ ನ್ಯಾಯಾಲಯದ ಆದೇಶ 18012/89ರಲ್ಲಿ ಕುತಂತ್ರದಿಂದ ಹೊರಡಿಸಿದ ಸುತ್ತೋಲೆಯನ್ನು ರದ್ದುಗೊಳಿಸಲಾಗಿದ್ದು, ಈ ಸುತ್ತೋಲೆಯ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿ ಸದನದ ಗೌರವವನ್ನು ಹಾಳು ಮಾಡಿರುವುದೂ ಅಲ್ಲದೇ ಅದರ ಮೌಲ್ಯಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸದನದಲ್ಲಿ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವ ರಾಜೀವ್ ಶಾಸಕರಾಗಲು ಅನರ್ಹರಾಗಿದ್ದು, ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇಡ ಜಂಗಮ ಸಮಾಜದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ 1977 ಜುಲೈ 27ರಿಂದ ಜಾರಿಗೆ ಬಂದಿರುವ ರಾಷ್ಟ್ರಪತಿಗಳ ಆದೇಶದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಂಗಮರು ವಾಸವಿದ್ದ ನಿರ್ಬಂಧ ತೆಗೆದು ಹಾಕಿ, ರಾಜ್ಯಾದ್ಯತ ವಾಸವಾಗಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ, ಬೇಡ ಜಂಗಮರೆಂದು ಗುರುತಿಸಲು ಡಾ. ಯು. ಸೂರ್ಯನಾಥ ಕಾಮತ್ ಅವರು ಸಮಾಜ ಕಲ್ಯಾಣ ಇಲಾಖೆ ಆದೇಶದ ಮೇರೆಗೆ ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಬೇಡ ಜಂಗಮರನ್ನು ಗುರುತಿಸಿ, ಅವರ ವರದಿಯನ್ನು ಪಾಲಿಸಲು ಆದೇಶ ಮಾಡಲಾಗಿದೆ. ಆದರೆ ಕೆಲವು ಕುತಂತ್ರಿ ರಾಜಕಾರಣಿಗಳು ದುರುದ್ದೇಶದಿಂದ ಬೇಡ ಜಂಗಮ ಜನಾಂಗವನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳಿಗೆ ತೊಂದರೆ ಕೊಡುವುದಲ್ಲದೇ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದವರನ್ನು ಹೆದರಿಸುತ್ತಿರುವುದು ದುರ್ದೈವದ ಸಂಗತಿ ಎಂದು ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ಮಹಾಸಭಾದ ಅರುಣ್‍ಕುಮಾರ್ ಜಡಿಮಠ್, ಜಿಲ್ಲಾಧ್ಯಕ್ಷೆ ದ್ರಾಕ್ಷಾಯಣಮ್ಮ ಟಿ.ಎಂ. ಮಲ್ಲಿಕಾರ್ಜುನಯ್ಯ, ರಾಜೇಶ್ವರಿ ಟಿ.ಎಂ.ಉಮೇಶ್, ಸುವರ್ಣಮ್ಮ ಶಂಕರಯ್ಯ, ಹಾಲಶಂಕರ ಸ್ವಾಮಿ, ವಿಶ್ವಾರಾಧ್ಯ, ಅಕ್ಷತಾ, ರವಿಕುಮಾರ್ ಪೂಜಾರ್, ಅಶೋಕ್ ಸದಾಶಿವಯ್ಯ, ಕೆ.ಎಂ.ಕೊಟ್ರಯ್ಯ, ಸುಜ್ಞಾನಮೂರ್ತಿ, ಚಂದ್ರಮ್ಮ, ಸಂತೋಷ್, ಬೂತೇಶ್, ಹೆಚ್.ಎಂ.ಸುರೇಶ್ ಇಟಗಿ ಸೇರಿದಂತೆ, ಇತರರು ಭಾಗವಹಿಸಿದ್ದರು.