ಇಂಜಿನಿಯರಿಂಗ್ ಪ್ರವೇಶ ಶುಲ್ಕ ಏರಿಕೆಗೆ ಖಂಡನೆ

ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ, ಡಿ.28- ಸರ್ಕಾರಿ ಕೋಟಾದಡಿಯಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತದಲ್ಲಿ ಇಂದು ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಕೋರ್ಸ್‌ನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೆ, ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ್ ನಾರಾಯಣ್ ಅವರು ಇತ್ತೀಚಿಗೆ ಹೇಳಿಕೆ ಕೊಟ್ಟಿದ್ದರು. 

ಆದರೆ, ಈಗ ಸರ್ಕಾರ ಕೆಲವು ಪರೋಕ್ಷ ಕ್ರಮಗಳ ಮೂಲಕ ಶುಲ್ಕ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ಇಂಜಿನಿಯರಿಂಗ್ ಓದುವ ಕನಸು ಕಂಡಿರುವ ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿಯುವಂತಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷ ಈ ಶುಲ್ಕವು 58,806 ರೂ. ಹಾಗೂ 65,340 ರೂ. (ವಿಶ್ವವಿದ್ಯಾಲಯ ಶುಲ್ಕವನ್ನು ಒಳಗೊಂಡಂತೆ) ನಿಗದಿಪಡಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಿಂದ 83,526 ರೂ. ಹಾಗೂ 90,060 ರೂ ಗಳಿಗೆ ನಿಗದಿಪಡಿಸಲಾಗಿದೆ ಎಂದು ಆಕ್ಷೇಪಿಸಿದರು.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಶುಲ್ಕಗಳಿಗೂ ಹಾಗೂ ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜಿನ ಶುಲ್ಕಗಳಿಗೂ 40 ಸಾವಿರ ರೂ.ಗಳವರೆಗೆ ಹೆಚ್ಚಳ ಮಾಡಲಾಗಿದೆ. ಸರ್ಕಾರ ತಕ್ಷಣವೇ ಸಿಇಟಿ ಕೌನ್ಸಿಲಿಂಗ್‌ನಲ್ಲಿ ಭಾಗಿಯಾದವರಿಗೆ ಮೆಡಿಕಲ್ ನಲ್ಲೂ ಅವಕಾಶ ನೀಡಬೇಕು. ಇಂಜಿನಿಯರಿಂಗ್ ಸೀಟು ರದ್ದಾದರೆ ವಿದ್ಯಾರ್ಥಿಗಳ ಶುಲ್ಕ ಮೆಡಿಕಲ್ ಗೆ ವರ್ಗಾವಣೆ ಆಗುವಂತೆ ಕ್ರಮ ತೆಗೆದುಕೊಳ್ಳಬೇಕು. ಶುಲ್ಕ ಹೆಚ್ಚಳಕ್ಕೆ ಹೊರಡಿಸಿರುವ ಆದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಶರತ್, ಕಾರ್ಯಕರ್ತರಾದ ಮನೋಜ್, ವೀರೇಶ್, ರಾಜು, ಪೃಥ್ವಿ ಮತ್ತು ಕಾಲೇಜು ವಿದ್ಯಾರ್ಥಿಗಳಾದ ರಮೇಶ್, ಕಾರ್ತಿಕ್, ರಮ್ಯ, ದೀಪಿಕಾ, ಜ್ಯೋತಿ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!