ಜಗಳೂರು ತಾಲ್ಲೂಕಿನ ತ್ರೈಮಾಸಿಕ ಕೆಡಿಪಿ ಸಭೆಗೆ ಬಾರದ ಅಧಿಕಾರಿಗಳಿಗೆ ಶಾಸಕ ಎಸ್.ವಿ.ರಾಮಚಂದ್ರ ತರಾಟೆ
ಜಗಳೂರು, ಡಿ.27- ತ್ರೈಮಾಸಿಕ ಕೆಡಿಪಿ ಸಭೆಗೆ ಗೈರು ಹಾಜರಾಗಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎಸ್.ವಿ. ರಾಮಚಂದ್ರ, ಜನರಿಗೆ ಸ್ಪಂದಿಸಿ ಕೆಲಸ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ತಾಕೀತು ಮಾಡಿದರು.
ತಾಲ್ಲೂಕು ಪಂಚಾಯ್ತಿ ಸಭಾಂಗಣ ದಲ್ಲಿ ಇಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಪ್ರಗತಿ ಪರಿಶೀಲನೆಯ ಬಹುಮುಖ್ಯವಾದ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವು ದನ್ನು ಸಹಿಸುವುದಿಲ್ಲ. ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾ ಪಂಚಾಯತ್ ಸಿಇಓ ಮತ್ತು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜನವರಿ 10ರಂದು ತ್ರೈಮಾಸಿಕ ಕೆಡಿಪಿ ಸಭೆ ಕರೆಯಲು ಇಓ ಅವರಿಗೆ ಸೂಚಿಸಿದ ಶಾಸಕರು, ಎಲ್ಲಾ ಅಧಿಕಾರಿಗಳು ಸಮಗ್ರ ಮಾಹಿತಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಿರುವ ಬಗ್ಗೆ ಎಲ್ಲ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಲು ಸೂಚನೆ ನೀಡಿದರು.
ರಿನಿವ್ಯ ಕಂಪನಿಯವರು ವಿದ್ಯುತ್ ಪ್ರಸರಣ ಕಾಮಗಾರಿ ಕೈಗೊಂಡಿದ್ದು, ರೈತರಿಗೆ ಸಮರ್ಪಕ ಪರಿಹಾರ ನೀಡುತ್ತಿಲ್ಲ ಎಂಬ ದೂರುಗಳಿದ್ದು, ತಕ್ಷಣ ಅವರನ್ನು ಕರೆಸಿ, ಕ್ರಮ ಕೈಗೊಳ್ಳಲು ತಹಸೀಲ್ದಾರ್ ಅವರಿಗೆ ಸೂಚಿಸಿದರು.
ವಿಂಡ್ ಪವರ್ ಕಂಪನಿಯವರು ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಪರ್ಯಾಯ ವಾಗಿ ಅರಣ್ಯ ಬೆಳೆಸಲು ಜಮೀನನ್ನು ಅರಣ್ಯ ಇಲಾಖೆಗೆ ನೀಡ ಬೇಕಾಗಿರುತ್ತದೆ. ಆದರೆ ಇದುವರೆಗೂ ಯಾವುದೇ ಕಂಪನಿಯವರು ನೀಡಿರುವು ದಿಲ್ಲ. ಇಂತಹ ಕಂಪನಿಗಳ ವಿರುದ್ಧ ಕ್ರಮ ಕ್ರಮಕೈಗೊಳ್ಳಬೇಕೆಂದು ವಲಯ ಅರಣ್ಯ ಅಧಿಕಾರಿಗಳಿಗೆ ಆದೇಶಿಸಿದರು.
ಸುಮಾರು 12 ಕೋಟಿ ರೂಪಾಯಿ ಅನುದಾನ ಇದ್ದರೂ ಟೆಂಡರ್ ಕರೆಯದೇ ಕಾಮಗಾರಿ ಕೈಗೊಳ್ಳದೆ ವಿಳಂಬ ಮಾಡುತ್ತಿರುವ ಬಗ್ಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಪ್ರಭಾರಿ ಎಇಇ ಶಿವಮೂರ್ತಿ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬದಲಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿನ 75 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ 55 ಕೋಟಿ ರೂಪಾಯಿ ಮಂಜೂರಾಗಿದ್ದು, 22 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ತಾಲ್ಲೂಕಿಗೆ 270 ಕೋಟಿ ರೂ.ಯೋಜನೆ ಅಡಿ ಮಂಜೂ ರಾಗಲಿದೆ. ಹಂತ ಹಂತವಾಗಿ ಎಲ್ಲಾ ಗ್ರಾಮಗಳಿಗೂ ಯೋಜನೆ ಜಾರಿಯಾ ಗಲಿದೆ ಎಂದು ಶಾಸಕರು ತಿಳಿಸಿದರು.
ಕೊಳಚೆ ನಿರ್ಮೂಲನಾ ಮಂಡಳಿಯಿಂದ 300 ಮನೆಗಳನ್ನು ನಿರ್ಮಿಸಲು ಮಂಜೂರಾತಿ ದೊರಕಿದೆ. ಹೌಸಿಂಗ್ ಬೋರ್ಡ್ ಇಲಾಖೆಯಿಂದ 95 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಿಸಲು 20 ಕೋಟಿ ರೂಪಾಯಿಗಳ ಟೆಂಡರ್ ಆಗಿದೆ. ಕೈಗಾರಿಕಾ ಅಭಿವೃದ್ಧಿಗಾಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಿಂದ ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಇದೇ ಜನವರಿ 18ರಂದು ಅಪ್ಪರ್ ಭದ್ರಾ ಯೋಜನೆಯ ಶಂಕುಸ್ಥಾಪನೆ ಸಮಾರಂಭ ನಡೆಸಲಾಗುವುದು. ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಂಸದರು, ಸಚಿವರು ಹಾಗೂ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗಮಿಸುವರು ಎಂದು ಶಾಸಕರು ತಿಳಿಸಿದರು.
ಸಾವಿರದ ಇನ್ನೂರು ಕೋಟಿ ರೂ.ಗಳ ಬಹುನಿರೀಕ್ಷಿತ ಅಪ್ಪರ್ ಭದ್ರಾ ಯೋಜನೆ ಕ್ಷೇತ್ರಕ್ಕೆ ಮಂಜೂರಾಗಲು ಕಾರಣ ಯಾರು ಎಂಬುದು ಕ್ಷೇತ್ರದ ಜನತೆಗೆ ತಿಳಿದಿದೆ. ಯೋಜನೆಯ ಜಾರಿಗಾಗಿ ನಾನು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಶ್ರಮಿಸಿದ್ದೇವೆ. ವಿರೋಧ ಪಕ್ಷದವರು ನಾನು ಏನೂ ಕೆಲಸ ಮಾಡಿಲ್ಲ ಎಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪತಿ, ತಹಶೀಲ್ದಾರ್ ಸಂತೋಷ್ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ಗ್ರಾಮೀಣ ನೀರು ಸರಬರಾಜು ನೈರ್ಮಲ್ಯ ಇಲಾಖೆ ಎಇಇ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಆಸ್ಮಾ ಬಾನು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸಲು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್, ಬೆಸ್ಕಾಂ ಎಇಇ ಗಿರೀಶ್ ನಾಯಕ್ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.