ನಿರ್ಮಲ ಭಾರತ ಯೋಜನೆಗೆ ಹರಪನಹಳ್ಳಿ: 1 ಕೋಟಿ ಅನುದಾನ

ಹರಪನಹಳ್ಳಿ, ಡಿ.27-ನಿರ್ಮಲ ಭಾರತ ಯೋಜನೆಗೆ ಹರಪನಹಳ್ಳಿ ಪಟ್ಟಣ ಆಯ್ಕೆ ಯಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ತಿಳಿಸಿದರು.

ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತ ನಾಡಿದ ಅವರು, ರಾಜ್ಯದಲ್ಲಿ 75 ಪಟ್ಟಣಗಳು ಈ ಯೋಜನೆಗೆ ಆಯ್ಕೆಯಾಗಿದ್ದು, ಅವುಗಳಲ್ಲಿ ಹರಪನಹಳ್ಳಿ ಪಟ್ಟಣ ಒಂದು. 1 ಕೋಟಿ ರೂ. ಮಂಜೂರಾಗಿದೆ ಎಂದು ಅವರು ಹೇಳಿದರು.

ಆಂಜನೇಯ ಬಡಾವಣೆಯ 10ನೇ ವಾರ್ಡಿನ ನಿವಾಸಿಗಳ ಡೋರ್ ನಂಬರ್‌ಗಳನ್ನು ರದ್ದು ಮಾಡಿರುವುದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ.   ಅಂತಿಮ ತೀರ್ಪು ಬರುವವರೆಗೂ ಆ ಭಾಗದ ನಿವಾಸಿಗಳಿಗೆ ತೊಂದರೆ ಕೊಡದೆ ಮೂಲಸೌಕರ್ಯ ಒದಗಿಸಬೇಕು ಎಂದು ಅಬ್ದುಲ್ ರಹಿಮಾನ್, ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಗೊಂಗಡಿ ನಾಗರಾಜ್, ಲಾಟಿ ದಾದಾಪೀರ್‌  ಒತ್ತಾಯಿಸಿದರು. ನಾಮನಿರ್ದೇಶಿತ ಸದಸ್ಯ ರಾಘವೇಂದ್ರಶೆಟ್ಟಿ ಮಾತನಾಡಿ, ಆಂಜನೇಯ ಬಡಾವಣೆಯ ನಿವಾಸಿಗಳಿಗೆ ಬೇರೆ ಕಡೆ ಆಸರೆ ಯೋಜನೆಯಲ್ಲಿ ಮನೆ ನೀಡಲಾಗಿತ್ತು ಎಂದು ತಿಳಿಸಿದರು.

ಕುಡಿಯುವ ನೀರು, ಚರಂಡಿ, ರಸ್ತೆ ಹೀಗೆ ಮೂಸಲಸೌಕರ್ಯ ಒದಗಿಸಲು ಎಲ್ಲಾ ವಾರ್ಡಗಳಿಗೂ ಆದ್ಯತೆ ನೀಡಿದ್ದೇನೆ. ಯಾವ ವಾರ್ಡ್‌ಗೂ ತಾರತಮ್ಯ ಮಾಡಿಲ್ಲ ಎಂದು ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್ ಅವರು ಸದಸ್ಯರುಗಳಾದ ಜಾಕೀರ ಹುಸೇನ್ , ಭರತೇಶ್‌ ರವರ ಆರೋಪಕ್ಕೆ ಉತ್ತರಿಸಿದರು.

ಸಭಾ ತ್ಯಾಗ:  ಅರಸಿಕೇರಿ ರಸ್ತೆಯ ಬಳಿ ಇರುವ ಪೆಟ್ರೋಲ್ ಬಂಕ್ ಹಿಂಭಾಗ ನಿರ್ಮಾಣವಾಗುತ್ತಿರುವ  ಹೊಸ ಬಡವಾಣೆಯಲ್ಲಿ ನೀರು, ಒಳಚರಂಡಿ,  ರಸ್ತೆ, ವಿದ್ಯುತ್ ಕಂಬಗಳು ಸೇರಿದಂತೆ ಕಾಮಗಾರಿ ಪೂರ್ಣಗೊಳ್ಳದೇ ಇಬ್ಬರು ಮಾಲೀಕರ ಏಕ ನಿವೇಶನಗಳಿಗೆ ಡೋರ್ ನಂಬರ್‌ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಆರೋಪಿಸಿ, ಸದಸ್ಯರಾದ ಜಾಕೀರ್‌ ಹುಸೇನ್, ಜೋಗಿನ ಭರತೇಶ, ತಳವಾರ ಲಕ್ಕಮ್ಮ ಮತ್ತು ಶಾಹಿನಾಬಿ ಅವರುಗಳು ಸಭಾ ತ್ಯಾಗ ಮಾಡಿದರು.

ಎಚ್.ಎಂ.ಅಶೋಕ್ ಮಾತನಾಡಿ, ಇಲ್ಲಿಯ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಶಾಸಕರ ನೇತೃತ್ವದಲ್ಲಿ ಸಿಎಂ ಹಾಗೂ ನಗರಾಭಿವೃದ್ಧಿ ಸಚಿವರ ಬಳಿ ನಿಯೋಗ ಹೋಗಬೇಕು ಹಾಗೂ ಪಟ್ಟಣದಲ್ಲಿನ ಉದ್ಯಾನವನಗಳ ಸಂರಕ್ಷಣೆ ಮಾಡಬೇಕು  ಎಂದು ಒತ್ತಾಯಿಸಿದರು.

ಸದಸ್ಯ ಎಂ.ವಿ.ಅಂಜಿನಪ್ಪ ಮಾತನಾಡಿ, ಪಟ್ಟಣದಲ್ಲಿ ಹೊಸದಾಗಿ ಕಾಮಗಾರಿ ಮಾಡಲು ಗುತ್ತಿಗೆದಾರರು ಕ್ರಿಯಾ ಯೋಜನೆಗಿಂತ ಶೇ.20 ರಿಂದ 30 ರಷ್ಟು  ಕಡಿಮೆ ಹಣಕ್ಕೆ ಟೆಂಡರ್ ಗೆ ಅರ್ಜಿ ಹಾಕುತ್ತಾರೆ. ಹೀಗಾದರೆ ಗುಣ ಮಟ್ಟದ ಕಾಮಗಾರಿ ಸಾಧ್ಯವೇ? ಎಂದು ಪ್ರಶ್ನಿಸಿದರು.

ಹೊಸಪೇಟೆ ರಸ್ತೆಯಲ್ಲಿರುವ ಉದ್ಯಾನವನದಲ್ಲಿನ ನೂತನ ಪರಿಕರಗಳ ಉದ್ಘಾಟನೆಗೆ ಈಚೆಗೆ ಶಾಸಕರ ಸಮ್ಮುಖದಲ್ಲಿ ಇಬ್ಬರು ಸದಸ್ಯರ ನಡುವೆ ನಡೆದ ವಾಗ್ವಾದಕ್ಕೆ ಮಂಜುನಾಥ ಇಜಂತಕರ್ ಹಾಗೂ ಸದಸ್ಯ ಕಿರಣ್ ಶಾನ್ ಬಾಗ್ ಕ್ಷಮೆ ಕೋರಿದರು.

ಅಧ್ಯಕ್ಷ ಮಂಜುನಾಥ ಇಜಂತಕರ್ ಅಧ್ಯಕ್ಷತೆ ವಹಿಸಿದ್ದು, ಉಪಾದ್ಯಕ್ಷೆ ನಿಟ್ಟೂರು ಭೀಮವ್ವ ಸಣ್ಣಹಾಲಪ್ಪ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಆರೋಗ್ಯ ನಿರೀಕ್ಷಕ ಮಂಜುನಾಥ, ಇಂಜಿನಿಯರ್‌ ಸಿದ್ದೇಶ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

error: Content is protected !!